ದೇಶದಲ್ಲಿ ಇದೇ ಮೊದಲ ಬಾರಿಗೆ ಕೇಂದ್ರ ಚುನಾವಣಾ ಆಯುಕ್ತರ ವಿರುದ್ಧ ಜನರು ಬೀದಿಗೆ ಇಳಿದಿರುವುದು. ವಿರೋಧ ಪಕ್ಷಗಳು ಕೂಡಾ ಈ ಪರಿಯಾಗಿ ಹೋರಾಟ ಮಾಡುತ್ತಿರುವುದು ಎಸ್ ಐಆರ್ ನಲ್ಲಿ ಆಗಿರುವ ದೋಷಗಳಿಂದ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು ಹಿಡಿಯಲಾಗಿದೆ. ಆದರೆ ಇದರ ಬಗ್ಗೆ ಕೇಂದ್ರ ಸರ್ಕಾರ ಮೈಗೆ ಎಣ್ಣೆ ಸವರಿಕೊಂಡಂತೆ ಇದೆ. ಇದರ ನಡುವೆ ಜ್ಞಾನೇಶ್ ಕುಮಾರ್ ತಮ್ಮ ವಿರುದ್ಧ ನಡೆಯುತ್ತಿರುವ ಹೋರಾಟಗಳಿಗೆ ಹೆದರಿದ್ರಾ.? ಎನ್ನುವ ಪ್ರಶ್ನೆ ಎದುರಾಗಿದೆ. ಏಕೆಂದ್ರೆ ಪೂರ್ವನಿಗದಿಯಾದಂತೆ ಗ್ಯಾನೇಶ್ ಕುಮಾರ್ ಇವತ್ತು ಮತ್ತು ನಾಳೆ ಛತ್ತೀಸ್ಗಢ ಪ್ರವಾಸ ಕೈಗೊಳ್ಳಬೇಕಾಗಿತ್ತು. ಆದರೆ ಅದನ್ನು ರದ್ದು ಮಾಡಿದ್ದಾರೆ.

ಜ್ಞಾನೇಶ್ ಕುಮಾರ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳ ತಂಡ ಇಂದು ಮತ್ತು 8 ನಾಳೆ ಛತ್ತೀಸ್ಗಢಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳಬೇಕಿತ್ತು. ದಂತೇವಾಡದ ದಂತೇಶ್ವರಿ ಮಾತಾ ದೇವಾಲಯ, ಕವರ್ಧಾದ ಭೋರಮ್ದೇವ್ ಮತ್ತು ಬಸ್ತಾರ್ನ ಚಿತ್ರಕೂಟ ಜಲಪಾತ ಸೇರಿದಂತೆ ರಾಜ್ಯದ ಪ್ರಮುಖ ಸ್ಥಳಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಪೂರ್ವ ನಿಗದಿಯಾಗಿತ್ತು. ಆದರೆ ಇದೀಗ ಅನಿವಾರ್ಯ ತಾಂತ್ರಿಕ ಮತ್ತು ಕಾರ್ಯಾಚರಣೆಯ ಕಾರಣಗಳಿಂದಾಗಿ ಮುಖ್ಯ ಚುನಾವಣಾ ಆಯುಕ್ತರ ಛತ್ತೀಸ್ಗಢ ಭೇಟಿಯನ್ನು ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿಕೊಂಡಿದೆ. ಆದರೆ ಜ್ಞಾನೇಶ್ ಕುಮಾರ್ ದೇಶದೊಳಗೆ ತಮ್ಮ ವಿರುದ್ಧ ನಡೆಯುತ್ತಿರುವ ಹೋರಾಟಗಳನ್ನು ಎದುರಿಸಲಾಗದೇ ಈ ಪ್ರವಾಸ ರದ್ದು ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಇದರೊಂದಿಗೆ ವಿಪಕ್ಷಗಳ ಒಕ್ಕೂಟ ನಡೆಸುತ್ತಿರುವ ನಿರಂತರ ಪ್ರತಿಭಟನೆಗಳು, ರಾಯ್ಪುರದಲ್ಲಿ ಎದುರಾಗಬಹುದಾಗಿದ್ದ ಕಪ್ಪು ಬಟ್ಟೆ ಪ್ರದರ್ಶನ ಪ್ರತಿಭಟನೆಯ ಭೀತಿಯಿಂದಾಗಿ ಈ ಪ್ರವಾಸವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ. ದೆಹಲಿಯಲ್ಲಿ ನಡೆದ ತೀವ್ರ ಸ್ವರೂಪದ ಧರಣಿಯ ಬಿಸಿಯೇ ಈ ಭೇಟಿ ರದ್ದಾಗಲು ಪ್ರಮುಖ ಕಾರಣವೆಂಬುದು ಸ್ಪಷ್ಟವಾಗುತ್ತಿದೆ. ಇನ್ನು ನಿನ್ನೆ (ಮಂಗಳವಾರ) ದೆಹಲಿಯ ಚುನಾವಣಾ ಆಯೋಗದ ಕಚೇರಿಯತ್ತ ಮೆರವಣಿಗೆ ನಡೆಸಲು ಯತ್ನಿಸಿದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಂಸದರು ಮತ್ತು 250ಕ್ಕೂ ಹೆಚ್ಚು ಕಾರ್ಯಕರ್ತರನ್ನು ದೆಹಲಿ ಪೊಲೀಸರು ರಾತ್ರೋರಾತ್ರಿ ವಶಕ್ಕೆ ಪಡೆದಿದ್ದರು. ರಾಜಕೀಯ ನಾಯಕರು ಸಿಇಸಿ ವಿರುದ್ಧ 8 ಗಂಟೆಗಳ ಕಾಲ ಧರಣಿ ನಡೆಸಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದ ಘಟನೆ ಇದಾಗಿದೆ.