ಬೆಲೆ ಏರಿಕೆ... ಬೆಲೆ ಏರಿಕೆ... ಈ ಪದವನ್ನು ಆಗೊಮ್ಮೆ ಹೀಗೊಮ್ಮೆ ಕೇಳ್ತಿದ್ವಿ, ಆದರೆ ಈ ಅಕ್ಟೋಬರ್ ತಿಂಗಳಲ್ಲಿ ಪ್ರತಿ ದಿನ ಕೇಳೋ ಹಾಗಾಗಿದೆ. ದಿನಬಳಕೆಯ ವಸ್ತುಗಳಿಂದ ಹಿಡಿದು ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಬಸ್ ಟಿಕೇಟ್ ದರದವರೆಗೆ ಎಲ್ಲವೂ ಹೆಚ್ಚಳವಾಗಿ ಸಾಮಾನ್ಯ ಜನರ ಮೇಲೆ ದೊಡ್ಡ ಹೊರೆ ಬಿದ್ದಿದೆ. ಇದರ ನಡುವೆ ಇದೀಗ ಬೆಂಗಳೂರಿನಲ್ಲಿ ತರಕಾರಿ ಬೆಲೆಯೂ ಏರಿಕೆಯಾಗಿದೆ. ಒಂದೆಡೆ ಹಬ್ಬದ ಸೀಸನ್, ಇನ್ನೊಂದೆಡೆ ಸತತ ಬೆಲೆ ಏರಿಕೆ ಇವೆರಡರ ಮಧ್ಯೆ ಜನಸಾಮಾನ್ಯರ ಜೀವನ ಬಹಳ ಕಾಸ್ಟ್ಲಿಯಾಗಿದೆ. 

ಬೆಂಗಳೂರಿಗೆ ತರಕಾರಿ ಬರೋ ಪ್ರಮುಖ ಜಿಲ್ಲೆಗಳಲ್ಲಿ ಅಕಾಲಿಕ ಮಳೆಯಾಗಿದ್ದು, ಹೊಲಗಳಲ್ಲಿ ನೀರು ನಿಂತು ಬೆಳೆಗಳೆಲ್ಲ ಕೊಳೆತು ಹಾಳಾಗಿವೆ. ಇದರಿಂದ ಕೆ.ಆರ್. ಮಾರ್ಕೆಟ್, ಯಶವಂತಪುರ ಮಾರುಕಟ್ಟೆಗಳಿಗೆ ಬರೋ ತರಕಾರಿ ಲಾರಿಗಳ ಸಂಖ್ಯೆ ತುಂಬಾ ಕಮ್ಮಿಯಾಗಿದೆ. ಪೂರೈಕೆ ಕಡಿಮೆಯಾಗಿದ್ದರಿಂದ ಚಿಲ್ಲರೆ ಅಂಗಡಿಗಳಲ್ಲಿ ಬೆಲೆಗಳು ಗಣನೀಯವಾಗಿ ಹೆಚ್ಚಾಗಿವೆ.

ತರಕಾರಿ ಮತ್ತು ಸೊಪ್ಪಿನ ಇಂದಿನ ರೇಟ್ ಹೀಗಿವೆ 

ಟೊಮೆಟೊ: 55 - 65 ಬೆಲೆ ದುಪ್ಪಟ್ಟಾಗಿದೆ

ಬೆಳ್ಳುಳ್ಳಿ: 200 - 320 ಮಾರುಕಟ್ಟೆಯಲ್ಲಿ ಸದ್ಯಕ್ಕೆ ಅತ್ಯಂತ ದುಬಾರಿ 

ಬೀನ್ಸ್: 96 - 120 ಸಾಮಾನ್ಯವಾಗಿ 70 ಇರ್ತಿತ್ತು

ಸಣ್ಣ ಈರುಳ್ಳಿ: 87 - 103

ಹಸಿಮೆಣಸಿನಕಾಯಿ: 85 - 100

ಈರುಳ್ಳಿ: 74 - 87

ಸೌತೆಕಾಯಿ: 44 - 45

ಚಪ್ಪರದ ಅವರೆಕಾಯಿ: 135

ನಿಂಬೆಹಣ್ಣು: 10 - 18 (ಒಂದಕ್ಕೆ)

ಸೊಪ್ಪಿನ ಬೆಲೆ

ಕೊತ್ತಂಬರಿ ಸೊಪ್ಪು: ಪ್ರತಿ ಕೆ.ಜಿ.ಗೆ 130

ಸಬ್ಬಸಿಗೆ ಸೊಪ್ಪು: ಪ್ರತಿ ಕೆ.ಜಿ.ಗೆ 128

ಮೆಂತ್ಯ ಸೊಪ್ಪು: ಪ್ರತಿ ಕೆ.ಜಿ.ಗೆ 120

ಪಾಲಕ್ ಸೊಪ್ಪು: 90 (ಸಣ್ಣ ಕಟ್ಟುಗಳಿಗೆ 25 ವರೆಗೆ ತಗೊಳ್ತಿದ್ದಾರೆ)

ಮುಂದಿನ ಕೆಲವು ದಿನಗಳ ಕಾಲ ಕರ್ನಾಟಕದ ಪ್ರಮುಖ ಕೃಷಿ ವಲಯಗಳಲ್ಲಿ ಮಳೆಯ ಮುನ್ಸೂಚನೆ ಇರುವುದರಿಂದ, ಮಾರುಕಟ್ಟೆಗೆ ತರಕಾರಿ ಪೂರೈಕೆ ಸಹಜ ಸ್ಥಿತಿಗೆ ಬರಲು ಇನ್ನೂ ಕೆಲವು ವಾರಗಳು ಬೇಕಾಗಬಹುದು ಎಂದು ಎಪಿಎಂಸಿ ವ್ಯಾಪಾರಿಗಳು ತಿಳಿಸಿದ್ದಾರೆ. ಮಳೆಯಿಂದ ಬೆಳೆ ಕಳೆದುಕೊಂಡು ರೈತರು ಕಷ್ಟದಲ್ಲಿದ್ದರೆ, ಇತ್ತ ಹಬ್ಬದ ಹೊತ್ತಿನಲ್ಲಿ ತರಕಾರಿ ತರಲು ಸಾಮಾನ್ಯ ಜನ ಪರದಾಡುವಂತಾಗಿದೆ. ಮಳೆ ಕಮ್ಮಿಯಾಗಿ ಹೊಸ ತರಕಾರಿ ಮಾರುಕಟ್ಟೆಗೆ ಬರೋವರೆಗೂ ಈ ಬೆಲೆ ಏರಿಕೆ ಬಿಸಿ ತಪ್ಪಿದ್ದಲ್ಲ.