ಸಿಜೆಪಿ ಮತ್ತು ವಿವಿಧ ನಾಗರಿಕ ಹಕ್ಕುಗಳ ಒಕ್ಕೂಟಗಳು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ‘ಜನತಾ ನ್ಯಾಯಾಲಯವನ್ನು ಆಯೋಜಿಸಿವೆ. ಈ ಬೃಹತ್ ಸಮಾವೇಶದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಿಜೆಪಿ ಕಾರ್ಯಕರ್ತರು, ನಾಗರಿಕ ಹಕ್ಕುಗಳ ಹೋರಾಟಗಾರರು ಹಾಗೂ ಎಸ್ ಐಆರ್ ಪ್ರಕ್ರಿಯೆಯಿಂದ ಸಂತ್ರಸ್ತರಾದ ಮತದಾರರು ಪಾಲ್ಗೊಂಡಿದ್ದಾರೆ. ಈ ಹೋರಾಟಕ್ಕೆ ಬೆಂಬಲವಾಗಿ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ ಚುಕ್, ರಾಜಕೀಯ ವಿಶ್ಲೇಷಕ ಹಾಗೂ ಪ್ರಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ನಿಂತಿದ್ದಾರೆ. ಮೊದಲ ಬಾರಿಗೆ ಧುವ್ ರಾಠಿ ಬೆಂಗಳೂರಿನ ಫ್ರೀಡಂ ಪಾರ್ಕ್ಗೆ ಬಂದಿರುವುದು ಅಚ್ಚರಿಗೆ ಕಾರಣವಾಗಿತ್ತು. ಧ್ರುವ್ ರಾಠಿ ಹಾಗೂ CJP ಸಂಸ್ಥಾಪಕ ಅಭಿಜಿತ್ ದೀಪ್ಕೆ, ಪ್ರಕಾಶ್ ರಾಜ್ ಪ್ರತಿಭಟನೆಯಲ್ಲಿ ಭಾಗವಹಿಸಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.
ಇದೇ ವೇಳೆ ಬಹುಭಾಷಾ ನಟ ಪ್ರಕಾಶ್ ರಾಜ್, ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಜಾಪ್ರಭುತ್ವದ ಮೂಲಭೂತ ಹಕ್ಕಾದ ಮತದಾನದ ಹಕ್ಕನ್ನೇ ಇವರು ಕಸಿದುಕೊಳ್ಳುತ್ತಿದ್ದಾರೆ. ಇದು ಪ್ರತಿಯೊಬ್ಬ ಪ್ರಜೆಯ ಗೌರವಕ್ಕೆ ಎಸಗಿದ ದ್ರೋಹ-ಘೋರ ಅಪಮಾನ ಎಂದು ಗುಡುಗಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಐದು ವರ್ಷಕ್ಕೊಮ್ಮೆ ಬರುವ ರಾಜಕಾರಣಿಗಳು ಮತದಾರರ ಕಾಲಿಗೆ ಬಿದ್ದು ವೋಟು ಕೇಳುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿ ಬದಲಾಗಿದೆ. ನಾಡಿನ ಪ್ರಜೆಗಳು ತಮ್ಮ ಮತವನ್ನು ವಾಪಸ್ ಪಡೆಯಲು ಅಧಿಕಾರಿಗಳ ಕಚೇರಿ ಮುಂದೆ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದೇಶದಲ್ಲಿ ಯಾರಿಗೆ ಮತದಾನದ ಹಕ್ಕಿರಬೇಕು ಎಂಬುದನ್ನು ಜನ ನಿರ್ಧರಿಸಬೇಕೇ ಹೊರತು ಅಧಿಕಾರದಲ್ಲಿರುವವರಲ್ಲ ಎಂದು ಅವರು ಹೇಳಿದರು.
ಇಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಿದರೆ ಎಲ್ಲವೂ ಸರಿಯಾಗಲ್ಲ. ಒಬ್ರು ರಾಜೀನಾಮೆ ಕೊಟ್ಟು ಹೋದರೆ ಏನೂ ಆಗಲ್ಲ. ಆ ಸ್ಥಾನಕ್ಕೆ ಮತ್ತೊಬ್ಬರು ಬರುತ್ತಾರೆ. ಆದ್ದರಿಂದ ಸಂಪೂರ್ಣ SIR ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಪ್ರಕಾಶ್ ರಾಜ್ ಒತ್ತಾಯಿಸಿದರು. ಈ ಅಕ್ರಮದ ಹಿಂದಿರುವ ಜ್ಞಾನೇಶ್ ಕುಮಾರ್ ರನ್ನು ತನಿಖೆಗೆ ಒಳಪಡಿಸಿ, ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಇವರ ಹಿಂದೆ ಆಡಳಿತ ನಡೆಸುತ್ತಿರುವ ನಾಯಕರ ಆಟ ಇನ್ಮುಂದೆ ನಡೆಯುವುದಿಲ್ಲ. ಈಗ ಯುವಜನತೆ ಮತ್ತು ಪ್ರಜೆಗಳು ಜಾಗೃತರಾಗಿದ್ದಾರೆ ಎಂದು ಅವರು ಎಚ್ಚರಿಸಿದರು.
ಸಂಘಟಕರು ಮನೆ ಮನೆಗೆ, ಬೂತ್ಗಳಿಗೆ ಹಾಗೂ ಹಳ್ಳಿಗಳಿಗೆ ತೆರಳಿ ಹಗಲು-ರಾತ್ರಿ ಶ್ರಮಿಸಿ ಅಕ್ರಮದ ವಿರುದ್ಧ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದಾರೆ. ಈ ಹೋರಾಟಕ್ಕೆ ದೃಢ ಬುನಾದಿ ಹಾಕಿಕೊಟ್ಟ ಯುವಜನತೆ ಮತ್ತು ಕರ್ನಾಟಕದ ವಿವಿಧ ಸಂಘ-ಸಂಸ್ಥೆಗಳ ಶ್ರಮ ಶ್ಲಾಘನೀಯ ಎಂದರು. ರಾಜ್ಯ ಅಥವಾ ದೇಶಕ್ಕೆ ತೊಂದರೆ ಬಂದಾಗ ಕನ್ನಡಿಗರು ಒಗ್ಗಟ್ಟಾಗಿ ನಿಲ್ಲುತ್ತಾರೆ ಎಂಬುದಕ್ಕೆ ಈ ಸಮಾವೇಶವೇ ಸಾಕ್ಷಿ. ಸರ್ಕಾರ ಎಸ್ ಐಆರ್ ರದ್ದುಗೊಳಿಸಿ, ನಾಗರಿಕರ ಘನತೆಯನ್ನು ಮರುಸ್ಥಾಪಿಸುವವರೆಗೂ ಈ ಹೋರಾಟ ಮುಂದುವರಿಯಲಿದೆ ಎಂದು ಪ್ರಕಾಶ್ ರಾಜ್ ಸ್ಪಷ್ಟಪಡಿಸಿದರು.