ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ  ಮೇಲಿಂದ ಮೇಲೆ ಹಿನ್ನಡೆ ಆಗುತ್ತಲೇ ಇದೆ. ಇದೀಗ ಪ್ರಕರಣದ 14ನೇ ಆರೋಪಿ ಪ್ರದೂಷ್ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಿರುವುದನ್ನು ಪ್ರಶ್ನಿಸಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಇವತ್ತು ವಜಾಗೊಳಿಸಿದೆ. ಈ ಮೂಲಕ ದರ್ಶನ್ ಗೆ ಸುಪ್ರೀಂ ಕೋರ್ಟ್ ಶಾಕ್ ಕೊಟ್ಟಿದೆ.

ಈ ಹಿಂದೆ ಹೈಕೋರ್ಟ್ ನೀಡಿದ ಆದೇಶವನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಜೆ.ಬಿ ಪಾರ್ದಿವಾಲ ನೇತೃತ್ವದ ದ್ವಿಸದಸ್ಯ ಪೀಠ ಈ ಬಗ್ಗೆ ವಿಚಾರಣೆ ನಡೆಸಿತು. ಅಲ್ಲದೇ ಮಾಫಿ ಸಾಕ್ಷಿಗೆ ಸಂಬಂಧಿಸಿದಂತೆ ಸೆಷನ್ಸ್ ನ್ಯಾಯಲಯದ ಆದೇಶ ಎತ್ತಿ ಹಿಡಿದ ಹೈಕೋರ್ಟ್ ನಿಲುವು ಸರಿಯಾಗಿದೆ ಎಂದು ನ್ಯಾಯಪೀಠ ಹೇಳಿತು. ವಿಜಯಲಕ್ಷ್ಮಿ ಪರ ಹಿರಿಯ ವಕೀಲ ವಾದ ಮಂಡಿಸಿದರು, ಮಾಫಿ ಸಾಕ್ಷಿಯನ್ನು ಪರಿಗಣಿಸುವ ಅಧಿಕಾರ ಪ್ರಿನ್ಸಿಪಲ್ ಕೋರ್ಟ್ಗೆ ಮಾತ್ರ ಇದೆ ಎಂದು ಅವರು ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯ ಪೀಠ, ಮಾಫಿ ಸಾಕ್ಷಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದಿತು. ಅಲ್ಲದೇ ಪ್ರಕರಣದಲ್ಲಿ ಬೇರೆ ಯಾವುದೇ ಕಾನೂನು ಅಂಶಗಳಿದ್ದರೆ ಆ ಕುರಿತು ವಾದ ಮಂಡಿಸುವಂತೆ ಪೀಠ ಸೂಚಿಸಿತು. ಇನ್ನು ಟ್ರಯಲ್ ಕೋರ್ಟ್‌ಗೆ  ಅಧಿಕಾರ ಇಲ್ಲ ಎಂಬ ವಿಚಾರವನ್ನೇ ಮುಂದಿಟ್ಟುಕೊಂಡು ವಾದಿಸುವ ಬದಲು, ಅದಕ್ಕಿಂತ ಪರಿಣಾಮಕಾರಿ ಕಾನೂನು ಅಂಶಗಳಿದ್ದರೆ ಅವುಗಳನ್ನು ಮಂಡಿಸುವಂತೆ ನ್ಯಾಯಮೂರ್ತಿ ಪರ್ದಿವಾಲಾ ಸೂಚಿಸಿದರು. ಇದೀಗ ಮುಂದಿನ ದಾರಿ ಹೇಗೆ ಎಂಬುದನ್ನು ವಿಜಯಲಕ್ಷ್ಮಿ ಚಿಂತಿಸುತ್ತಿದ್ದಾರೆ.