ದೇಶದಾದ್ಯಂತ ವ್ಯವಸ್ಥಿತವಾಗಿ ಮತಗಳನ್ನು ಅಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಧಾನಮಂತ್ರಿ ಒಬ್ಬ ವೋಟ್ ಚೋರ್ ಎಂದು ಅಭಿಜಿತ್ ದೀಪ್ಕೆ ಗುಡುಗಿದರು. ಮೋದಿ ನೇರವಾಗಿ ಗೆದ್ದು ಬಂದಿಲ್ಲ ಬದಲಿಗೆ ಜನರ ಸಾಂವಿಧಾನಿಕ ಮತಗಳನ್ನು ಅಳಿಸಿ ಪ್ರಧಾನಿಯಾಗಿದ್ದಾರೆ ಎಂದರು. ಈ ರೀತಿಯ ಅಕ್ರಮಗಳ ಮೂಲಕ ಅವರು ದೇಶದ ಪ್ರಜಾಪ್ರಭುತ್ವದ ಅವನತಿಗೆ ಅವರು ಕಾರಣರಾಗಿದ್ದಾರೆ ಎಂದು ನೇರವಾಗಿ ವಾಗ್ದಾಳಿ ನಡೆಸಿದರು. ಇದರ ನೇರ ಹಂತಕ ನರೇಂದ್ರ ಮೋದಿ ಅವರೇ ಆಗಿದ್ದಾರೆ ಎಂದು ಅತ್ಯಂತ ತೀಕ್ಷ್ಣವಾಗಿ ಟೀಕಿಸಿದರು.
ಮತದಾರರ ಪಟ್ಟಿಯಿಂದ ಮತಗಳನ್ನು ಅಳಿಸುವ ಪ್ರಕ್ರಿಯೆ ದೇಶದಾದ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಇದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ದೀಪ್ಕೆ ಇದೇ ವೇಳೆ ದೂರಿದರು. ಯಾರು ಅವರಿಗೆ ಮತ ಹಾಕುವುದಿಲ್ಲವೋ ಅಂಥವರ ಮತಗಳನ್ನು ಅಳಿಸಿ ಹಾಕುವ ಕೃತ್ಯ ನಡೆಯುತ್ತಿದೆ ಎಂದರು.. ಇದೇ ವೇಳೆ ಗಾಂಧಿ ದೇಶದ ಆತ್ಮವಾದರೆ ಬಾಬಾಸಾಹೇಬರು ದೇಶದ ಬೆನ್ನೆಲುಬು, ನೆಹರು ದೇಶದ ಮನಸ್ಸು ಎಂದು ಸ್ಮರಿಸಿದರು
ಇನ್ನು ಸ್ವಾತಂತ್ರ್ಯಾ ನಂತರ ದೇಶದ ಪ್ರತಿಯೊಬ್ಬರಿಗೂ ಮತದಾನದ ಹಕ್ಕು ನೀಡಿದ ಸಂವಿಧಾನಾತ್ಮಕ ವ್ಯವಸ್ಥೆಯನ್ನು ಉಲ್ಲೇಖಿಸಿದ ದೀಪ್ಕೆ ಇಂದು ಅದೇ ಮತದಾನದ ಹಕ್ಕನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಇನ್ನು ಇದೇ ವೇಳೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಡೆದ ಸ್ಥಾನಗಳ ಬಗ್ಗೆಯೂ ಪ್ರಸ್ತಾಪ ಮಾಡಿದರು. ಚುನಾವಣೆಯಲ್ಲಿ ಮತಗಳ ವ್ಯತ್ಯಾಸ ಕಡಿಮೆಯಾಗಿದ್ದರೂ ಸ್ಥಾನಗಳ ಸಂಖ್ಯೆ ಗಣನೀಯವಾಗಿತ್ತು ಎಂದು ಹೇಳಿದರು. ಕೆಲವು ಕ್ಷೇತ್ರಗಳಲ್ಲಿ ಅಲ್ಪ ಮತಗಳ ಅಂತರದಿಂದ ಫಲಿತಾಂಶ ಬದಲಾಗಿದೆ ಎಂದ ಅವರು ಮತದಾರರ ಪಟ್ಟಿಯಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ದೀಪ್ಕೆ ಪ್ರಾದೇಶಿಕ ನಾಯಕರನ್ನು ದುರ್ಬಲಗೊಳಿಸುವುದು ಮತ್ತು ಸಂಸ್ಥೆಗಳನ್ನು ಹಾಳು ಮಾಡುವುದೇ ಕೇಂದ್ರ ಸರ್ಕಾರದ ಉದ್ದೇಶ. ನಾವು ಯಾವುದೇ ಕಾರಣಕ್ಕೂ ಪ್ರಜಾಪ್ರಭುತ್ವ ವಿರೋಧಿ ಪ್ರಯತ್ನಗಳಿಗೆ ಅವಕಾಶ ನೀಡಬಾರದು ಎಂದು ಕರೆ ನೀಡಿದರು. ದೇಶ ಉಳಿಯುವುದು ಮತ ಉಳಿದರೆ ಮಾತ್ರ. ಮತ ಹೋದರೆ ನಾವು ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ. ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ನಾವೆಲ್ಲರೂ ರಸ್ತೆಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು
ದಕ್ಷಿಣ ಭಾರತದ ರಾಜ್ಯಗಳ ಕ್ಷೇತ್ರ ಪುನರ್ವಿಂಗಡಣೆ ಬಗ್ಗೆಯೂ ಮಾತಡಿದ ದೀಪ್ಕೆ ಇದರಿಂದ ಭವಿಷ್ಯದಲ್ಲಿ ದಕ್ಷಿಣ ಭಾರತದ ಲೋಕಸಭಾ ಸ್ಥಾನಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಆತಂಕ ವ್ಯಕ್ತ ಪಡಿಸಿದರು. ಅಲ್ಲದೇ ಈಗ ಹಮ್ಮಿಕೊಂಡಿರುವ ಹೋರಾಟ ಇವತ್ತಿಗೇ ಮುಗಿದು ಹೋಗಲ್ಲ ಇನ್ನು ಮುಂದುವರಿಸಿಕೊಂಡು ಹೋಗುವುದಾಗಿ ಘೋಷಣೆ ಮಾಡಿದರು.