ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಈ ವಿಷಯ ಹಂಚಿಕೊಂಡಿರುವ ಮೇರಿ ಮಿಲ್ಬೆನ್, ಭಾರತದ ಯುವ ಪೀಳಿಗೆಯು ಇಂತಹ ವಿಚ್ಛಿದ್ರಕಾರಕ ಶಕ್ತಿಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಕರೆ ನೀಡಿದ್ದಾರೆ. ಆದರೆ, ಈ ಆರ್ಥಿಕ ನೆರವಿನ ಆರೋಪಗಳಿಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಮೂಲ ಅಥವಾ ಪುರಾವೆಗಳನ್ನು ಸದ್ಯಕ್ಕೆ ಬಹಿರಂಗಪಡಿಸಿಲ್ಲ.
ಚುನಾವಣಾ ಆಯೋಗದ ವಿರುದ್ಧ ಸಿಜೆಪಿ ಮತ್ತು ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳ ಹಿಂದೆ, ವಿದೇಶಿ ಪಿತೂರಿ ಇದೆ ಎಂಬ ಮಾತುಗಳು ಕೇಳಿಬರುತ್ತಿರುವಾಗಲೇ, ಮೇರಿ ಮಿಲ್ಬೆನ್ ನೀಡಿರುವ ಹೇಳಿಕೆ ಇದೀಗ ಜಾಗತಿಕ ಮಟ್ಟದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ತಾವು ಗುರಿಪಡಿಸುವ ದೇಶಗಳಲ್ಲಿ ಅರಾಜಕತೆ ಮತ್ತು ಅಶಾಂತಿಯನ್ನು ಸೃಷ್ಟಿಸಲು ಅಮೆರಿಕ ಮೂಲದ ಇಂತಹ ದಾನಿಗಳು ಅನುಸರಿಸುವ ಕಾರ್ಯವಿಧಾನವನ್ನೂ ಮೇರಿ ಮಿಲ್ಬೆನ್ ವಿವರಿಸಿದ್ದಾರೆ. ಈ ಆಯ್ದ ದಾನಿಗಳು ಜಾಗತಿಕ ಮಟ್ಟದಲ್ಲಿ ಒಂದು ನಿರ್ದಿಷ್ಟ ಮಾದರಿಯನ್ನು ಅನುಸರಿಸುತ್ತಾರೆ. ಅದರಂತೆ ಸಂಪ್ರದಾಯವಾದಿ ಜಾಗತಿಕ ನಾಯಕರನ್ನು ಗುರಿಯಾಗಿಸಿಕೊಳ್ಳುತ್ತಾರೆ. ಅಮೆರಿಕದಲ್ಲಿ ಶಿಕ್ಷಣ ಪಡೆದ ಆಯಾ ದೇಶದ ವ್ಯಕ್ತಿಯನ್ನು ಗುರುತಿಸುವುದು, ಅವರನ್ನು ತೀವ್ರಗಾಮಿಗಳನ್ನಾಗಿ ಪರಿವರ್ತಿಸಿ ದೇಶಕ್ಕೆ ಹಿಂತಿರುಗಿಸುವುದು ಮತ್ತು ಅರಾಜಕತೆ ಸೃಷ್ಟಿಸಲು ಅವರಿಗೆ ಹಣಕಾಸಿನ ನೆರವು ನೀಡುವುದೇ ಅದರ ವಿಧಾನ ಎಂದಿದ್ದಾರೆ.
ಇದೇ ವೇಳೆ ಅರಾಜಕತೆ ಸೃಷ್ಟಿಸಲು ಬಯಸುವ ಅಮೆರಿಕನ್ ದಾನಿಗಳಿಂದ ರೂಪಿಸಲಾದ ಬಹುತೇಕ ಸಂಚುಗಳು ವಿಫಲವಾಗಿವೆ ಎಂದು ಮೇರಿ ಮಿಲ್ಬೆನ್ ಹೇಳಿದ್ದಾರೆ. ಆದರೆ ಇವು ಆಯಾ ದೇಶದ ಅಭಿವೃದ್ಧಿ ಮತ್ತು ಆಡಳಿತದ ಮೇಲೆ ಪರಿಣಾಮ ಬೀರುತ್ತವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತದ ಆಡಳಿತಕ್ಕೆ ಅಡ್ಡಿಪಡಿಸಲು ವಿದೇಶಿ ಶಕ್ತಿಗಳು ಮಾಡುವ ಯಾವುದೇ ಪ್ರಯತ್ನಗಳನ್ನು ತಡೆಯಲು ಭಾರತೀಯ ಪ್ರಜೆಗಳಿಗೆ ಮನವಿ ಮಾಡಿದ್ದಾರೆ.


