ಕಾರ್ಯಕ್ರಮದ ಮಧ್ಯೆ ಸುದೀಪ್ ಅಭಿಮಾನಿಗಳು "ಕಿಚ್ಚ, ಕಿಚ್ಚ" ಎಂದು ಜೋರಾಗಿ ಕೂಗಾಡಲು ಶುರುಮಾಡಿದಾಗ ವೇದಿಕೆಯಲ್ಲಿದ್ದ ಉಗ್ರಪ್ಪ ಗರಂ ಆದರು. "ಕೇವಲ ಸಿನಿಮಾದಲ್ಲಿ ಅಭಿಮಾನಿಗಳಿಂದ ಕೇಕೆ, ಶಿಳ್ಳೆ ಗಿಟ್ಟಿಸಿಕೊಂಡರೆ ಸಾಲದು. ತಾಕತ್ತಿದ್ದರೆ, ನಿಜವಾದ ನಾಯಕ ಜನಾಂಗದ ಮಗನಾಗಿದ್ದರೆ ಎಸ್ಟಿ ಸಮುದಾಯದ ಶೇ 56ರಷ್ಟು ಮೀಸಲಾತಿ ಹೋರಾಟಕ್ಕೆ ಬೀದಿಗೆ ಬನ್ನಿ" ಎಂದು ಸವಾಲು ಹಾಕಿದ್ರು.
ಈ ಹೇಳಿಕೆ ಸುದೀಪ್ ಅಭಿಮಾನಿಗಳ ಜೊತೆಗೆ ಮಾಜಿ ಸಚಿವ ರಾಜುಗೌಡ ಸೇರಿದಂತೆ ಹಲವು ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಸಾರ್ವಜನಿಕ ವೇದಿಕೆಯಲ್ಲಿ ಒಬ್ಬ ಜನಪ್ರಿಯ ನಟನಿಗೆ ಏಕವಚನದಲ್ಲಿ ಮಾತನಾಡಿ, "ನೀನ್ಯಾವ ಸೀಮೆಯ ನಾಯಕ" ಎಂದು ರೋಷಾವೇಶದಿಂದ ಸವಾಲು ಹಾಕಿರುವುದು ಎಷ್ಟು ಸರಿ ಎಂದು ಹಲವರು ಪ್ರಶ್ನಿಸಿದ್ದಾರೆ.
ಸದ್ಯ ಉಂಟಾಗಿರುವ ವಿವಾದಕ್ಕೆ ಸ್ಪಷ್ಟನೆ ನೀಡಿರುವ ವಿ.ಎಸ್. ಉಗ್ರಪ್ಪ, ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದಾರೆ. "ನನಗೆ ಸುದೀಪ್ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನಮ್ಮ ಸಮುದಾಯದ ಪ್ರಭಾವಿ ನಟನಾಗಿರುವ ಅವರ ಬಳಿ ಒಬ್ಬ ಸಹೋದರನ ಸ್ಥಾನದಲ್ಲಿ ನಿಂತು ಹೋರಾಟಕ್ಕೆ ಬನ್ನಿ ಮೈ ಡಿಯರ್ ಬ್ರದರ್ ಎಂದಿದ್ದೇನೆಯೇ ಹೊರತು ಅಪಪ್ರಚಾರ ಮಾಡುವ ಉದ್ದೇಶ ನನಗಿರಲಿಲ್ಲ" ಎಂದು ಮರುಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಉಗ್ರಪ್ಪ ಅವರ ಈ ಸವಾಲು ಈಗ ನಾಯಕ ಸಮುದಾಯದ ಮೀಸಲಾತಿ ಹೋರಾಟದ ಜೊತೆಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.



