ನಿನ್ನೆಯಷ್ಟೇ ಇಂಡಿಯಾ ಒಕ್ಕೂಟದ 16 ರಾಜಕೀಯ ಪಕ್ಷಗಳು ಸೇರಿ ಚಹಾ ಕೂಟ ಏರ್ಪಡಿಸಿತ್ತು. ಸೋಮವಾರ ಮೆರವಣಿಗೆ ಜಾಥಾ ನಡೆಸಿದೆ. ಸಾಲದು ಎಂಬಂತೆ ಸುಪ್ರೀಂ ಕೋರ್ಟ್ಗೆ ಅರ್ಜಿಯನ್ನೂ ಸಲ್ಲಿಸಿದೆ. ಮಂಗಳವಾರ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು, ಎಸ್ ಐಆರ್ ಪ್ರಕ್ರಿಯೆಯ ವಿರುದ್ಧ ಹುಟ್ಟಿಕೊಂಡಿರುವ ಸಾರ್ವಜನಿಕ ಆಕ್ರೋಶವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ದೇಶದಲ್ಲಿ ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಮಿತ್ ಶಾ, ವಿರೋಧ ಪಕ್ಷಗಳ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕರು ಅಕ್ರಮ ನುಸುಳುಕೋರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ, ತಮ್ಮ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಶಾ ಆಪಾದನೆ ಮಾಡಿದ್ದಾರೆ.
ಅಮಿತ್ ಶಾ ಹೇಳಿಕೆಗಳಿಗೆ ರಾಹುಲ್ ಗಾಂಧಿ ಮತ್ತು ಇಂಡಿಯಾ ಒಕ್ಕೂಟದ ನಾಯಕರು ತಿರುಗೇಟು ಕೊಟ್ಟಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಬಿಜೆಪಿ ಜನರ ಗಮನ ಬೇರೆಡೆ ಸೆಳೆಯಲು ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಟೀಕಿಸಿದ್ದಾರೆ.ನಾವು ರಕ್ಷಿಸುತ್ತಿರುವುದು ನುಸುಳುಕೋರರನ್ನಲ್ಲ, ಬದಲಿಗೆ ಭಾರತದ ಪ್ರತಿಯೊಬ್ಬ ನಾಗರಿಕನ ಮತದಾನದ ಹಕ್ಕನ್ನು ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವನ್ನು ಎಂದು ಪ್ರತಿಪಾದಿಸಿದ್ದಾರೆ.. ಬಿಜೆಪಿಯವರು ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವವನ್ನು ಹತ್ತಿಕ್ಕುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇನ್ನು ಕೇಂದ್ರ ಗೃಹ ಸಚಿವರ ಹೇಳಿಕೆಯನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಸ್ ಐಆರ್ ಹೆಸರಿನಲ್ಲಿ ಕೇಂದ್ರ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರು, ವಿದ್ಯಾರ್ಥಿಗಳು ಮತ್ತು ಸಂಸದರ ಮೇಲೆ ಪೊಲೀಸರನ್ನು ಬಳಸಿ ದೌರ್ಜನ್ಯ ಎಸಗಿರುವುದು ಸರ್ಕಾರದ ಸರ್ವಾಧಿಕಾರಿ ಧೋರಣೆಗೆ ಹಿಡಿದ ಕನ್ನಡಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಮತ್ತೊಂದು ಕಡೆ ತೃಣಮೂಲ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಾಯಕರು ಕೂಡ ಅಮಿತ್ ಶಾ ಹೇಳಿಕೆಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಪಶ್ಚಿಮ ಬಂಗಾಳ ಅಥವಾ ಇತರೆ ರಾಜ್ಯಗಳಲ್ಲಿ ಚುನಾವಣಾ ಸೋಲಿನ ಭಯದಿಂದ ಬಿಜೆಪಿ ಈ ರೀತಿ ವಿನಾಕಾರಣ ಆರೋಪ ಮಾಡುತ್ತಿದೆ ಎಂದಿದ್ದಾರೆ. ಚುನಾವಣಾ ಆಯೋಗವನ್ನು ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿರುವುದೇ ಬಿಜೆಪಿ ಮಾಡುತ್ತಿರುವ ಅತಿ ದೊಡ್ಡ ತಪ್ಪು ಎಂದು ತೀವ್ರವಾಗಿ ಟೀಕಿಸಿದ್ದಾರೆ.



