ಇತ್ತೀಚೆಗೆ ನಡೆದ ಪಂದ್ಯಾವಳಿಗಳಲ್ಲಿ ಶಫಾಲಿ ಅದ್ಭುತವಾದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಯುಎಇಯಲ್ಲಿ ನಡೆದ ಮಹಿಳಾ ಏಷ್ಯಾ ಕಪ್‌ನಲ್ಲಿ ಕೇವಲ 5 ಇನ್ನಿಂಗ್ಸ್‌ಗಳಿಂದ ಬರೋಬ್ಬರಿ 236 ರನ್‌ಗಳನ್ನು ಕಲೆಹಾಕಿದ್ದರು. ಇದರೊಂದಿಗೆ ಏಷ್ಯನ್ ಗೇಮ್ಸ್ ಟೂರ್ನಿಯ 3 ಪಂದ್ಯಗಳಲ್ಲಿ 188 ರನ್ ಸಿಡಿಸಿ, ಭಾರತ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
22 ವರ್ಷ ವಯಸ್ಸಿನ ಯುವ ಆಟಗಾರ್ತಿ ಶಫಾಲಿ ವರ್ಮಾ ಈ ಐಸಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಈ ಹಿಂದೆ ಭಾರತದಲ್ಲೇ ನಡೆದ ಐಸಿಸಿ ಮಹಿಳಾ ವಿಶ್ವಕಪ್ ಗೆಲುವಿನ ಸಂಭ್ರಮದ ಬೆನ್ನಲ್ಲೇ, 2025ರ ನವೆಂಬರ್‌ನಲ್ಲಿ ಅವರು ಮೊದಲ ಬಾರಿಗೆ ಈ ಗೌರವಕ್ಕೆ ಪಾತ್ರರಾಗಿದ್ದರು. ಈ ಬಾರಿ ಶ್ರೀಲಂಕಾದ ಸ್ಟಾರ್ ಆಟಗಾರ್ತಿ ಚಾಮರಿ ಅತಪತ್ತು ಹಾಗೂ ಭಾರತದವರೇ ಆದ ಶ್ರೀ ಚರಣಿ ಅವರನ್ನು ಹಿಂದಿಕ್ಕಿ ಅವರು ಈ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಪ್ರಶಸ್ತಿಯ ಬಲದಿಂದ ಶಫಾಲಿ ಐಸಿಸಿ ಮಹಿಳಾ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮತ್ತೊಮ್ಮೆ ಟಾಪ್ 4 ರೊಳಗೆ ಜಾಗ ಪಡೆದುಕೊಂಡಿದ್ದಾರೆ.
ಇನ್ನು ವಿಶೇಷವೆಂದರೆ, ಈ ಬಾರಿ ಪುರುಷರ ವಿಭಾಗದಲ್ಲಿ ಸ್ಟಾರ್ ಆಟಗಾರ ಶುಭಮನ್ ಗಿಲ್ ಹಾಗೂ ಮಹಿಳಾ ವಿಭಾಗದಲ್ಲಿ ಶಫಾಲಿ ವರ್ಮಾ ಇಬ್ಬರೂ ಒಟ್ಟಿಗೆ ಈ ಪ್ರಶಸ್ತಿ ಪಡೆದಿದ್ದಾರೆ. ಐಸಿಸಿ ಇತಿಹಾಸದಲ್ಲಿ ಭಾರತೀಯ ಆಟಗಾರರು ಒಂದೇ ತಿಂಗಳು ಈ ಎರಡೂ ಪ್ರಶಸ್ತಿಗಳನ್ನು ಒಟ್ಟಿಗೆ ಜಯಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಈ ಹಿಂದೆ ಜೂನ್ 2024 ಮತ್ತು ಸೆಪ್ಟೆಂಬರ್ 2025ರಲ್ಲೂ ಇದೇ ರೀತಿಯ ಅಪರೂಪದ ಸಾಧನೆ ಮಾಡಲಾಗಿತ್ತು. ಒಟ್ಟಿನಲ್ಲಿ ಶಫಾಲಿ ಅವರ ಈ ಅಮೋಘ ಫಾರ್ಮ್ ಭಾರತೀಯ ಮಹಿಳಾ ಕ್ರಿಕೆಟ್‌ಗೆ ದೊಡ್ಡ ಬಲ ತುಂಬಿದೆ.



