ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ನಿಜಕ್ಕೂ ರೈತರ ಮೇಲೆ ಕಾಳಜಿ ಇದೆಯೇ..ರಾಜ್ಯವನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಮನಸ್ಸಿದೆಯೇ.? ಈ ಪ್ರಶ್ನೆಯನ್ನು ಜನರು ಮತ್ತೊಮ್ಮೆ ಕೇಳಲೇ ಬೇಕಾಗಿದೆ. ಒಂದ್ಕಡೆ ತೀವ್ರವಾದ ಬರಗಾಲ ಬಂದು ರೈತರು ಕಣ್ಣೀರು ಸುರಿಸುತ್ತಿದ್ದಾರೆ. ಮತ್ತೊಂದು ಕಡೆ ಬೆಂಗಳೂರಿನಲ್ಲೂ ಮೂಲಸೌಕರ್ಯದ ಕೊರತೆ ಎದುರಾಗಿದೆ. ಆದರೆ ಸರ್ಕಾರ ಮಾತ್ರ 200 ಕೋಟಿ ರೂಪಾಯಿ ಖರ್ಚು ಮಾಡಿ ಬೆಂಗಳೂರು ಜಾತ್ರೆ ಮಾಡಲು ತುದಿಗಾಲಲ್ಲಿ ನಿಂತಿದೆ. ಇವರಿಗೆ ರೈತರಿಗೆ ಸರಿಯಾದ ಪರಿಹಾರ ನೀಡಲು ಹಣವಿಲ್ಲ, ಬೆಂಗಳೂರು ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಆರ್ಥಿಕ ಕೊರತೆ ಇದೆ. ಆದರೆ ಇದೇ ಸರ್ಕಾರ ಈಗ ಜನರ ದುಡ್ಡಲ್ಲಿ ಸಚಿವರು ಮತ್ತು ಸಂಸದರಿಗೆ ಅಧಿಕೃತ ವಾಹನ ಖರೀದಿಸುವ ಮಿತಿಯನ್ನು ಜಿಎಸ್ ಟಿ ಸೇರಿ 26 ಲಕ್ಷದಿಂದ 31 ಲಕ್ಷಕ್ಕೆ ಹೆಚ್ಚಿಸಿದೆ.


ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹೊರಡಿಸಿರುವ ಆದೇಶದ ಪ್ರಕಾರ, ಪರಿಷ್ಕೃತ ಮಿತಿಯು ಹೊಸ ವಾಹನಗಳ ಖರೀದಿಗೆ ಅನ್ವಯವಾಗಲಿದೆ. ಸಚಿವರಿಗೆ ವಾಹನ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಸಂಸದರಿಗೆ ಸಾರಿಗೆ ಸೌಲಭ್ಯ ಕಲ್ಪಿಸುವ ದೇಶದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಈ ಹಿಂದೆ 2022ರಲ್ಲಿ ವಾಹನ ಖರೀದಿ ಮಿತಿಯನ್ನು 23 ಲಕ್ಷದಿಂದ 26 ಲಕ್ಷಕ್ಕೆ ಹೆಚ್ಚಿಸಲಾಗಿತ್ತು. ಇದೀದ ಅದನ್ನು ಮತ್ತಷ್ಟು ಏರಿಕೆ ಮಾಡಿದೆ.

ಹಿಂದಿನ ಆದೇಶದಲ್ಲಿ ಏನಿತ್ತು ಎಂದರೆ ವಾಹನ ಖರೀದಿಯ ಗರಿಷ್ಠ ಮಿತಿಯನ್ನು 26 ಲಕ್ಷಕ್ಕೆ ನಿಗದಿಪಡಿಸಲಾಗಿತ್ತು. ಆದದೆ ಹಲವು ಸಚಿವರು ಮತ್ತು ಸಂಸದರು ಅದಕ್ಕಿಂತ ಹೆಚ್ಚಿನ ಬೆಲೆಯ ವಾಹನಗಳನ್ನು ಖರೀದಿಸಲು ಮುಂದಾಗುತ್ತಿದ್ದರು. ಇದರಿಂದ ಅನುಮೋದನೆಗಾಗಿ ಕಡತವನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗುತ್ತಿತ್ತು ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ. 

ಮತ್ತೊಂದು ವಿಚಾರ ಎಂದರೆ ವಾಹನ ಖರೀದಿಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸಲಿದೆ. ವಾಹನವನ್ನು ವೈಯಕ್ತಿಕ ಬಳಕೆಗೆ ಬಳಸಬೇಕೇ ಅಥವಾ ಅಧಿಕೃತ ಕೆಲಸಗಳಿಗೆ ಬಳಸಬೇಕೇ ಎಂಬ ಬಗ್ಗೆ ಯಾವುದೇ ನಿರ್ಬಂಧ ಇದರಲ್ಲಿ ಅಡಕವಾಗಿವಿಲ್ಲ. ಕಾರು ಮೂರು ವರ್ಷ ಹಳೆಯದಾಗಿದ್ದರೆ ಅಥವಾ ಒಂದು ಲಕ್ಷ ಕಿಲೋಮೀಟರ್ ಪ್ರಯಾಣಿಸಿದ್ದರೆ, ಹೊಸ ವಾಹನಕ್ಕಾಗಿ ಅರ್ಜಿ ಸಲ್ಲಿಸಬಹುದು. ಇದೀಗ ಸಚಿವರು ಹೊಸ ಕಾರುಬಾರು ಮಾಡಲಿದ್ದು ರಾಜ್ಯದ ಅನ್ನದಾತರು ಸಾಮಾನ್ಯ ಜನರಿಗೆ ಮಾತ್ರ ನೋಡಿ ಸುಮ್ಮನಿರಬೇಕಾದ ಪರಿಸ್ಥಿತಿ ಇದೆ.