ರಾಜ್ಯದಲ್ಲಿ ಸುಮಾರು 50 ಲಕ್ಷ ಮತದಾರರನ್ನು ಕೈಬಿಡಲು ಪ್ರಯತ್ನ ನಡೆದಿವೆ ಎನ್ನುವ ಆರೋಪವನ್ನು ಕಾಂಗ್ರೆಸ್ ಮಾಡಿತ್ತು. ಅಲ್ಲದೇ ರಾಜ್ಯ ಚುನಾವಣಾ ಆಯೋಗದ ಮುಂದೆ ಪ್ರತಿಭಟನೆಯನ್ನೂ ಮಾಡಿತ್ತು. ಆದರೆ ಇದೀಗ ಅದಕ್ಕೆಲ್ಲಾ ಚುನಾವಣಾ ಆಯೋಗ ಉತ್ತರ ನೀಡಿದೆ. ಶುಕ್ರವಾರದ ಅಂತ್ಯಕ್ಕೆ ಕೇವಲ 1,10,654 ಫಾರ್ಮ್ 7 ಅರ್ಜಿ ಸಲ್ಲಿಕೆಯಾಗಿರುವುದನ್ನು ಆಯೋಗ ಬಹಿರಂಗಪಡಿಸಿದೆ.

ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡುವ ಅಥವಾ ಆಕ್ಷೇಪಣೆ ಸಲ್ಲಿಸುವ ಸಂಬಂಧ ಎಷ್ಟು ಅರ್ಜಿಗಳು ಸಲ್ಲಿಕೆ ಆಗಿವೆ ಎಂಬುದರ ಬಗ್ಗೆ ವಿವರವಾಗಿ ಮಾಹಿತಿ ನೀಡಲಾಗಿದೆ. ರಾಜ್ಯಾದ್ಯಂತ 1,10,654 ಫಾರ್ಮ್ 7 ಅರ್ಜಿಗಳು ಸಲ್ಲಿಕೆಯಾಗಿವೆ. ಅಕ್ಟೋಬರ್ 9ರ ವೇಳೆಗೆ ರಾಜ್ಯದಲ್ಲಿ ಒಟ್ಟು 4,51,61,393 ಮತದಾರರಿದ್ದು, ಅವರಲ್ಲಿ 2,24,03,422 ಪುರುಷರು, 2,27,55,113 ಮಹಿಳೆಯರು ಹಾಗೂ 2,858 ತೃತೀಯ ಲಿಂಗದ ಮತದಾರರಿದ್ದಾರೆ ಎಂದು ಚುನಾವಣಾ ಆಯೋಗ ಅಂಕಿ-ಅಂಶಗಳ ಮೂಲಕ ಬಹಿರಂಪಡಿಸಿದೆ. 
ಆದರೆ ಇಲ್ಲೊಂದು ವಿಷಯ ಎಂದರೆ ಈವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಯಲ್ಲಿ ಒಟ್ಟು 43,82,315 ನೋಟಿಸ್ಗಳನ್ನು ಸಿದ್ಧಪಡಿಸಲಾಗಿಜೆ. ಈ ಪೈಕಿ 43,73,745 ನೋಟಿಸ್ಗಳನ್ನು ವಿತರಿಸಲಾಗಿದೆ. ಇದರ ಬಗ್ಗೆಯೂ ಆಯೋಗ ಲೆಕ್ಕ ನೀಡಿದೆ.

ಈ ಮೂಲಕ ಶೇ.99.80ರಷ್ಟು ನೋಟಿಸ್ ವಿತರಣೆ ಪೂರ್ಣಗೊಂಡಿದೆ ಎಂದು ಹೇಳಿರುವ ಆಯೋಗ ಇವುಗಳಲ್ಲಿ ವಿತರಿಸಲಾದ ನೋಟಿಸ್ ಗಳಿಗೆ ಸಂಬಂಧಿಸಿದಂತೆ 40,88,099 ವಿಚಾರಣೆಗಳು ಪೂರ್ಣಗೊಂಡಿವೆ ಎಂದಿದೆ. ಇದು ಶೇ.93.47 ರಷ್ಟಾಗಿದೆ. ಇನ್ನೂ 2,85,646 ವಿಚಾರಣೆಗಳು ಬಾಕಿ ಉಳಿದಿವೆ ಎಂದು ತಿಳಿಸಿದೆ.

ಇದರ ಜೊತೆ ಜೂ.16ರಿಂದ ಅಕ್ಟೋಬರ್ 8ರವರೆಗೆ ರಾಜ್ಯದಲ್ಲಿ ವಿವಿಧ ಉದ್ದೇಶಗಳಿಗಾಗಿ ಒಟ್ಟು 23,02,215 ಅರ್ಜಿಗಳು ಸಲ್ಲಿಕೆಯಾಗಿರೋದು ಬೆಳಕಿಗೆ ಬಂದಿವೆ. ಇವುಗಳಲ್ಲಿ 9,52,497 ಫಾರ್ಮ್-6, 4,712 ಫಾರ್ಮ್-6ಎ, 1,10,654 ಫಾರ್ಮ್-7 ಹಾಗೂ 12,34,352 ಫಾರ್ಮ್-8 ಅರ್ಜಿಗಳು ಸೇರಿವೆ ಎಂದು ಆಯೋಗ ತನ್ನ ವರದಿಯಲ್ಲಿ ದೃಢಪಡಿಸಿದೆ. ಹಾಗೇ ಫಾರ್ಮ್-6 ಅನ್ನು ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮತ್ತು ಎನ್ಯುಮರೇಶನ್ ಮ್ಯಾಪಿಂಗ್ನಲ್ಲಿ ಬಿಟ್ಟು ಹೋದವರ ಮರು ಸೇರ್ಪಡೆಗೆ ಬಳಸಲಾಗುತ್ತದೆ. ವಿದೇಶದಲ್ಲಿ ವಾಸಿಸುವ ಭಾರತೀಯ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಫಾರ್ಮ್-6ಎ ಸಲ್ಲಿಸಬಹುದಾಗಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.