ಮುಂಬೈನಿಂದ ವಿಮಾನದ ಮೂಲಕ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಈ ಮೂವರು ನಾಯಕರು ಆಗಮಿಸಿದ್ದರು. ವಿಮಾನವು ನಿಲ್ದಾಣದಲ್ಲಿ ನಿಂತ ತಕ್ಷಣವೇ ದೆಹಲಿ ಪೊಲೀಸರ ತಂಡವು ವಿಮಾನದೊಳಗೇ ನುಗ್ಗಿ, ಅವರನ್ನು ವಶಕ್ಕೆ ತೆಗೆದುಕೊಂಡಿದೆ. ಯಾವುದೇ ಕಾರಣಕ್ಕೂ ಇವರು ವಿಮಾನ ನಿಲ್ದಾಣದಿಂದ ಹೊರಬಂದು ಜಂತರ್ ಮಂತರ್ಗೆ ತೆರಳಬಾರದು ಎಂದು ಪೊಲೀಸರು ಇವರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಇದೊಂದು ಈ ದಮನಕಾರಿ ಕ್ರಮ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅಭಿಜಿತ್ ದೀಪ್ಕೆ ದೆಹಲಿಗೆ ಆಗಮಿಸುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದರು. ಅದರಲ್ಲಿ ನಾವು ಪ್ರಜಾಪ್ರಭುತ್ವವನ್ನು ಉಳಿಸಲು ದೆಹಲಿಗೆ ತೆರಳುತ್ತಿದ್ದೇವೆ. ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಂತೇ ಪೊಲೀಸರು ನಮ್ಮನ್ನು ಬಂಧಿಸಬಹುದು. ಇಲ್ಲವೇ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿಯಲ್ಲಿ ನಮ್ಮ ವಿರುದ್ಧ ಪ್ರಕರಣ ದಾಖಲಿಸಬಹುದು. ಆದರೆ ನಾವು ಅದ್ಯಾವುದಕ್ಕೂ ಹೆದರುವುದಿಲ್ಲ.ನಮ್ಮ ಹೋರಾಟ ಮುಂದುವರೆಸುತ್ತೇವೆ ಎಂದಿದ್ದರು. ಅವರು ಹೇಳಿದ್ದಂತೆಯೇ ದೆಹಲಿ ಪೊಲೀಸರು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಮತ್ತೊಂದು ಕಡೆ ಸಿಜೆಪಿಯ ಕಾನೂನು ಘಟಕದ ಮುಖ್ಯಸ್ಥೆ ರತ್ನಾಸಿಂಗ್ ಅವರನ್ನು ದೆಹಲಿ ಪೊಲೀಸರು ಅವರ ಮನೆಯಲ್ಲೇ ವಶಕ್ಕೆ ತೆಗೆದುಕೊಂಡಿದ್ದಾರೆ. ರತ್ನಾ ಸಿಂಗ್ ಅವರು ಪ್ರತಿಭಟನಾ ಸ್ಥಳವನ್ನು ತಲುಪಬಾರದು ಮತ್ತು ಬಂಧಿತ ನಾಯಕರು ಮತ್ತು ಕಾರ್ಯಕರ್ತರ ಪರವಾಗಿ ತಕ್ಷಣಕ್ಕೆ ಯಾವುದೇ ಕಾನೂನು ಕ್ರಮ ಜರುಗಿಸದಂತೆ ತಡೆಯುವ ಉದ್ದೇಶದಿಂದ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ದೇಶಾದ್ಯಂತ ಜಂತರ್ ಮಂತರ್ ಚಳವಳಿಗೆ ಬೆಂಬಲ ಸೂಚಿಸಿ ಬಂದಿರುವ ಸಾವಿರಾರು ಯುವಕರು ವಿದ್ಯಾರ್ಥಿ ಸಂಘಟನೆಗಳ ನಾಯಕರು ಹಾಗೂ ರೈತ ಸಂಘಟನೆಗಳ ಪ್ರತಿನಿಧಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬಂಧನಕ್ಕೆ ಒಳಪಡಿಸಲಾಗಿದೆ. ದೆಹಲಿ ಪೊಲೀಸರ ಈ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಿಜೆಪಿ, ಪ್ರಜಾಪ್ರಭುತ್ವದ ವ್ಯಾಪ್ತಿಯಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ವಕೀಲರು ಮತ್ತು ನಾಯಕರನ್ನು ಹೀಗೆ ಅಕ್ರಮವಾಗಿ ಮನೆಗಳಿಂದಲೇ ವಶಕ್ಕೆ ತೆಗೆದುಕೊಳ್ಳುತ್ತಿರುವುದು ಸರ್ವಾಧಿಕಾರಿ ಧೋರಣೆ ಎಂಬ ಆರೋಪ ಕೇಳಿ ಬರುತ್ತಿದೆ. ಅಲ್ಲದೇ ಇಂದಿರಾ ಗಾಂಧಿ ಪ್ರಧಾನಿ ಆಗಿದ್ದಾಗ ತುರ್ತು ಪರಿಸ್ಥಿತಿ ಏರಿ ಸರ್ಕಾರದ ವಿರುದ್ಧ ಧ್ವನಿ ಎತ್ತದಂತೆ ಮಾಡಿದ್ದರು ಎಂದು ಬಿಜೆಪಿ ಸಮಯ ಸಿಕ್ಕಾಗಲೆಲ್ಲಾ ಆರೋಪ ಮಾಡುತ್ತಿದೆ. ಆದರೆ ಇದೀಗ ಇವರು ತುರ್ತು ಪರಿಸ್ಥಿತಿ ಏರದೇ ದಮನಕಾರಿ ನೀತಿಗಳನ್ನು ಹೇರುತ್ತಿದ್ದಾರೆ ಎಂದು ಜನರು ಟೀಕೆ ಮಾಡುತ್ತಿದ್ದಾರೆ.