ಈ ಸ್ಟಿಂಗ್ ಆಪರೇಷನ್ ಎನ್ನುವುದು ಹನಿ ಟ್ರ್ಯಾಪ್ ನ ಒಂದು ಭಾಗವಾಗಿದೆ. ಸದ್ಯ ರಾಜ್ಯ ರಾಜಕಾರಣದಲ್ಲಿ ಇದಕ್ಕೆ ಸಂಬಂಧಿಸಿದ ಆರೋಪ-ಪ್ರತ್ಯಾರೋಪಗಳ ಸುಂಟರಗಾಳಿ ಎದ್ದಿದ್ದು, ಈ ರಹಸ್ಯ ಕಾರ್ಯಾಚರಣೆಯ ಹಿಂದಿರುವ ಸೂತ್ರಧಾರರು ಯಾರು.? ಇದಕ್ಕೆ ಕಾರಣವಾದರೂ ಏನು ಎನ್ನುವ ಹಲವಾರು ಪ್ರಶ್ನೆಗಳು ತೀವ್ರ ಕುತೂಹಲವನ್ನು ಮೂಡಿಸಿವೆ.
ಹನಿಟ್ರ್ಯಾಪ್ ಎಂದರೆ ಏನು.?
ಅಷ್ಟಕ್ಕೂ ಈ ಹನಿಟ್ರ್ಯಾಪ್ ಎಂದರೆ ಸುಂದರ ಯುವತಿಯರನ್ನು ಮುಂದೆ ಬಿಟ್ಟು ಗಣ್ಯರನ್ನು ಖೆಡ್ಡಾಗೆ ಬೀಳಿಸುವುದಕ್ಕೆ ಇರೋ ಹೆಸರೇ ಈ ಹನಿ ಟ್ರ್ಯಾಪ್. ಯಾರಾದ್ರೂ ಪ್ರಭಾವಿ ವ್ಯಕ್ತಿಯನ್ನು ಗುರಿಯಾಗಿಸಿಕೊಂಡು, ಒಬ್ಬ ಮಹಿಳೆಯ ಮೂಲಕ ಅವರಿಗೆ ಲೈಂಗಿಕ ಆಮಿಷ ತೋರಿಸಿ, ಅವರ ರಹಸ್ಯ ಮಾಹಿತಿಯನ್ನಾಗಲಿ ಅಥವಾ ಹಣವನ್ನಾಗಲಿ ಕಿತ್ತುಕೊಳ್ಳುವುದೇ ಈ ಹನಿಟ್ರ್ಯಾಪ್ ಉದ್ದೇಶ. ಭಾರತದಲ್ಲಿ ಹನಿಟ್ರ್ಯಾಪ್ ಹೊಸದೇನಲ್ಲ.ಆದರೆ ಇತ್ತೀಚೆಗೆ ಇದನ್ನ ಹಣ ಸಂಪಾದಿಸುವ ದಂಧೆಯಾಗಿ ಹಾಗೂ ಅಧಿಕಾರಸ್ಥರನ್ನು ಹದ್ದುಬಸ್ತಿನಲ್ಲಿ ಇಡುವ ಸಲುವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಹನಿಟ್ರ್ಯಾಪ್ ಮಾಡುವುದಾದರೂ ಏಕೆ.?
ಸದ್ಯ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದನ್ನು ಇಂತಹದ್ದೇ ನಿರ್ದಿಷ್ಟ ರಾಜಕಾರಣಿಗಳು ನಿರ್ವಹಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆಯಾದರೂ ಅದಕ್ಕೆ ಯಾವುದೇ ಸ್ಪಷ್ಟ ಪುರಾವೆ ಇಲ್ಲ. ಇದರಿಂದ ಯಾರ ಮೇಲೆ ಬೆರಳು ಮಾಡಿ ತೋರಿಸುವುದು ಸಾಧ್ಯವಾಗದ ಮಾತು. ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯಲು ಮತ್ತು ತಮ್ಮದೇ ಪಕ್ಷದ ನಾಯಕರು ತಮ್ಮನ್ನು ಬೆಂಬಲಿಸುವಂತೆ ಒತ್ತಡ ಹೇರಲು, ಕೆಲವು ನಿರ್ದಿಷ್ಟ ರಾಜಕಾರಣಿಗಳು ಇದನ್ನು ಮಾಡುತ್ತಾರೆ ಎಂದು ಹಲವರು ಆರೋಪಿಸುತ್ತಾರೆ. ಆದರೆ ಅವರೂ ಕೂಡ ಈ ಹನಿಟ್ರ್ಯಾಪ್ ಕಾರ್ಟೆಲನ್ನು ಯಾರು ನಿರ್ವಹಿಸುತ್ತಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟವಾಗಿ ಬಾಯಿ ಬಿಡುವುದಿಲ್ಲ. ಸುಮ್ಮನೆ ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಕೆಲವರ ಮೇಲೆ ಅನುಮಾನಗಳು ಬರುವಂತೆ ಮಾತನಾಡುತ್ತಿದ್ದಾರೆ. ಸದ್ಯ ಈಗ ನಮ್ಮ ರಾಜ್ಯದಲ್ಲಿ ಆಗುತ್ತಿರುವುದು ಕೂಡಾ ಅದೇ…
ರಾಜ್ಯ ರಾಜಕಾರಣದಲ್ಲಿ ಯಾವಾಗ ಶುರುವಾಯಿತು ಹನಿಟ್ರ್ಯಾಪ್.?
ಉಡುಪಿ ಶಾಸಕರಾಗಿದ್ದ ರಘುಪತಿ ಭಟ್ ಸಿ.ಡಿ ಪ್ರಕರಣ ರಾಜ್ಯಾದ್ಯಂತ ಭಾರೀ ಸದ್ದು ಮಾಡಿತ್ತು. 2013 ರಲ್ಲಿ ಯುವತಿಯೊಬ್ಬಳ ಜೊತೆ ಇದ್ದರೆನ್ನಲಾದ ಹಸಿ ಹಸಿ ದೃಶ್ಯಾವಳಿಗಳು ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದವು. ಇದು ಅವರ ರಾಜಕೀಯ ಭವಿಷ್ಯದ ಮೇಲೂ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು. 2018 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಕೊಡುವಾಗಲೂ ಈ ವಿಚಾರ ಚರ್ಚೆಯ ಮುನ್ನಲೆಗೆ ಬಂದಿತ್ತು. ಆದರೆ ಕೊನೆಯ ಗಳಿಗೆಯಲ್ಲಿ ಟಿಕೆಟ್ ಪಡೆಯುವಲ್ಲಿ ಹಾಗೂ ಗೆಲವು ಸಾಧಿಸುವಲ್ಲಿ ಯಶ್ವಸಿ ಆಗಿದ್ದರು. ಆದರೆ 2023 ರ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೈತಪ್ಪಿತು ಇದೀಗ ರಘುಪತಿ ಭಟ್ ರಾಜಕೀಯವಾಗಿ ಅತಂತ್ರರಾಗಿದ್ದಾರೆ.
2016ರಲ್ಲಿ ಸದ್ದು ಮಾಡಿದ ಮೇಟಿ ಪ್ರಕರಣ
2016ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಹೆಚ್.ವೈ. ಮೇಟಿ ಅಬಕಾರಿ ಸಚಿವರಾಗಿದ್ದರು. 2016ರ ಡಿಸೆಂಬರ್ನಲ್ಲಿ, ಅವರು ಉದ್ಯೋಗದ ಆಮಿಷ ಒಡ್ಡಿ ಮಹಿಳೆಯೊಬ್ಬರ ಜೊತೆ ಇದ್ದ ಆಕ್ಷೇಪಾರ್ಹ ವೀಡಿಯೊ ಸಿಡಿ ಮತ್ತು ಆಡಿಯೋ ಬಹಿರಂಗಗೊಂಡಿತ್ತು. ಇದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸಿತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳೆ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಕಾನ್ಸ್ಟೆಬಲ್ ಒಬ್ಬರ ಸಂಬಂಧಿಯಾಗಿದ್ದರು. ಸಚಿವರಿಂದ ಹಣ ವಸೂಲಿ ಮಾಡಲು ಅಥವಾ ರಾಜಕೀಯವಾಗಿ ಅವರನ್ನು ತೇಜೋವಧೆ ಮಾಡಲು ಯೋಜಿತವಾಗಿ ಈ ವೀಡಿಯೊ ಚಿತ್ರೀಕರಿಸಿ, ಬ್ಲ್ಯಾಕ್ಮೇಲ್ ಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ವೀಡಿಯೋ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ನೈತಿಕ ಹೊಣೆ ಹೊತ್ತು ಮೇಟಿ 14 ಡಿಸೆಂಬರ್ 2016 ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣವೇ ರಾಜೀನಾಮೆಯನ್ನು ಅಂಗೀಕರಿಸಿ, ಪ್ರಕರಣವನ್ನು ಸಿಐಡಿತನಿಖೆಗೆ ಒಪ್ಪಿಸಿದರು. ಪ್ರಕರಣದ ತನಿಖೆ ನಡೆಸಿದ ಸಿಐಡಿ ಪೊಲೀಸರು, ಸಚಿವರಿಗೆ ಬ್ಲ್ಯಾಕ್ಮೇಲ್ ಮಾಡಲಾಗಿತ್ತು ಮತ್ತು ವೀಡಿಯೊದಲ್ಲಿದ್ದ ದೃಶ್ಯಗಳು ನಕಲಿಯಾಗಿವೆ ಎಂದು ವರದಿ ನೀಡಿದರು. ಮೇಟಿ ಅವರ ವಿರುದ್ಧ ಯಾವುದೇ ಬಲವಾದ ಸಾಕ್ಷ್ಯಾಧಾರಗಳು ಸಿಗದ ಕಾರಣ ಸಿಐಡಿ ಅವರಿಗೆ ಕ್ಲೀನ್ ಚೀಟ್ ನೀಡಿತು
ಹನಿಟ್ರ್ಯಾಪ್ ಖೆಡ್ಡಾಗೆ ರಮೇಶ್ ಜಾರಕಿಹೊಳಿ.!
ಇದಾದ ನಂತರ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಹೆಸರು ಇದರಲ್ಲಿ ತಳುಕು ಹಾಕಿಕೊಂಡಿತು. ಯುವತಿಯೊಂದಿಗೆ ಖಾಸಗಿ ಕ್ಷಣಗಳೊಂದಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾದ ವಿಡಿಯೋಗಳು ಭಾರೀ ಸಂಚಲವನ್ನೇ ಸೃಷ್ಟಿ ಮಾಡಿದ್ದವು. ನಂತರ ಅವರು ಕೂಡಾ ರಾಜೀನಾಮೆ ನೀಡಬೇಕಾಯಿತು. ಈ ಪ್ರಹಸನ ಇದೀಗ ಸಚಿವರಾಗಿದ್ದ ಕೆ.ಎನ್. ರಾಜಣ್ಣವರೆಗೂ ಬಂದು ನಿಂತಿತ್ತು. ಈ ಅವಧಿಯಲ್ಲಿ ಹತ್ತಾರು ರಾಜಕಾರಣಿಗಳ ವಿರುದ್ಧ ಈ ಹನಿಟ್ರ್ಯಾಪ್ ಆರೋಪಗಳು ಕೇಳಿಬಂದಿದ್ದು, ಇದುವರೆಗೂ ಯಾವ ಪ್ರಕರಣದಲ್ಲೂ ಅಂತಿಮ ಸತ್ಯ ಹೊರಬಿದ್ದಿಲ್ಲ. ಸದ್ಯ ಕರ್ನಾಟಕದಲಿ ಹನಿಟ್ರ್ಯಾಪ್ ಪ್ರಕರಣಗಳ ಬಗ್ಗೆ ಜೋರಾಗಿ ಚರ್ಚೆ ನಡೆಯುತ್ತಿದೆಯಾದರೂ, ಈ ಸಂಭಾವ್ಯ ಹನಿಟ್ರ್ಯಾಪ್ ಬಲೆಗೆ ಬೀಳಿಸುತ್ತಿರುವ ಮಹಿಳೆಯರು ಯಾರು ಎಂಬುದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಅಸ್ತಿತ್ವದಲ್ಲಿ ಇರಬಹುದಾದ ಈ ಹನಿಟ್ರ್ಯಾಪ್ ಸಂಘಟನೆಯಲ್ಲಿ ಎಷ್ಟು ಮಹಿಳೆಯರು, ಪುರುಷರು ಇದ್ದಾರೆ ಅವರ ಅಸಲಿ ಉದ್ದೇಶವಾದರೂ ಏನು ಎಂಬುದು ಬಯಲಿಗೆ ಬಂದಿಲ್ಲ.
ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ ಮತ್ತು ಹೆಚ್.ವೈ ಮೇಟಿ ಹನಿಟ್ರ್ಯಾಪ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮಹಿಳೆಯರ ಹೆಸರುಗಳು ಸಾರ್ವಜನಿಕವಾಗಿ ಕೇಳಿ ಬಂದಿತ್ತು. ಅದನ್ನು ಹೊರತು ಪಡಿಸಿದರೆ ಉಳಿದ ಪ್ರಕರಣಗಳಲ್ಲೂ ಅಸಲಿಗೆ ಈ ಹನಿಟ್ರ್ಯಾಪ್ ಮಾಡುತ್ತಿರುವವರು ಯಾರು ಎಂಬುದು ಅಸ್ಪಷ್ಟವಾಗಿಯೇ ಉಳಿದಿದೆ. ಮತ್ತೊಂದು ವಿಚಾರ ಎಂದರೆ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸಿಡಿ ರಷ್ಯಾದಲ್ಲಿ ರೆಡಿಯಾಗಿತ್ತು ಎಂಬ ಮಾತುಗಳೂ ಕೇಳಿಬಂದಿದ್ದವು.
ಅರವಿಂದ ಲಿಂಬಾವಳಿ ಮೇಲಿನ ಆರೋಪವೇನು.?
ಇನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರದ್ದು ಎನ್ನಲಾಗಿದ್ದ ಅಶ್ಲೀಲ ವಿಡಿಯೋ ವೈರಲ್ ಆಗಿತ್ತು. ಯುವಕನೊಂದಿಗೆ ಈ ವಿಡಿಯೋದಲ್ಲಿ ಅವರು ಕಾಣಿಸಿಕೊಂಡಿದ್ದರು. ಇದು ಅವರ ರಾಜಕೀಯ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ. ಈ ವಿಡಿಯೋ ಹಗರಣ ಬಳಿಕ ಅವರು ರಾಜಕೀಯವಾಗಿ ಸುಧಾರಿಸಿಕೊಂಡಿಲ್ಲ. ಅದೇ ರೀತಿ ಗದಗದ ಮಾಜಿ ಶಾಸಕ ಕಳಕಪ್ಪ ಬಂಡಿ ಅವರದ್ದು ಎನ್ನಲಾಗಿರುವ ವಿಡಿಯೋ ಹರಿದಾಡಿತ್ತು. ಬಂಡಿ ಹನಿಟ್ರ್ಯಾಪ್ ಗೆ ಒಳಪಟ್ಟಿದ್ದರು.
ಮುಂಬೈ ರೆಸಾರ್ಟ್ ರಾಜಕಾರಣದ ಮೇಲೂ ಹನಿಟ್ರ್ಯಾಪ್ ಗುಮ್ಮ.!
ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನ ಮಾಡಿದ ಬಂಡಾಯ ಶಾಸಕರ ಬಗ್ಗೆಯೂ ಇಂಥದೊಂದು ಆರೋಪ ಕೇಳಿ ಬಂದಿತ್ತು. ಮುಂಬೈ ರೆಸಾರ್ಟ್ ನಲ್ಲಿ ತಂಗಿದ್ದ ಶಾಸಕರ ವಿಡಿಯೋಗಳನ್ನು ಮಾಡಲಾಗಿದೆ ಎಂಬ ವಿಷಯ ಜೋರಾಗಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಬಹುತೇಕ ಮಂದಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದರು. ಶಾಸಕರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ತಂದಿದ್ದು ನಾನಾ ರೀತಿಯ ಅನುಮಾನಕ್ಕೆ ಕಾರಣವಾಗಿತ್ತು. ಇದೀಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಇಂಥದ್ದೇ ಅನುಮಾನಗಳು ಮೂಡಿವೆ.
ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಸ್ಟಿಂಗ್ ಆಪರೇಷನ್ ಮೂಲಕ ಹನಿಟ್ರ್ಯಾಪ್ ನಡೆಸಲಾಗುತ್ತಿದೆ. ಇದರ ಸೂತ್ರಧಾರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎನ್ನುವ ಅರ್ಥದಲ್ಲಿ ಆರೋಪ ಮಾಡುತ್ತಿದ್ದಾರೆ. ಹಾಗಿದ್ದರೆ ಇದು ನಿಜವಾ ಎನ್ನುವುದಕ್ಕೆ ಯಾವುದೇ ಸಾಕ್ಷಿ ಆಧಾರಗಳು ಇಲ್ಲ. ಆದರೂ ಶಿವಕುಮಾರ್ ಅವರಿಗೆ ಸರ್ಕಾರವನ್ನು ಕಂಟ್ರೋಲ್ ಮಾಡಲು ಆಗುತ್ತಿಲ್ಲ ಎಂಬ ಮಾತುಗಳು ಇವೆ. ಗುಂಪು ರಾಜಕೀಯ ಮೇಲಾಗುತ್ತಿದೆ. ಇದರಿಂದ ಶಾಸಕರು ಹಾಗೂ ಸಚಿವರನ್ನು ಹದ್ದುಬಸ್ತಿನಲ್ಲಿ ಇಡಲು ಶಿವಕುಮಾರ್ ಈ ಅಸ್ತ್ರ ಬಳಸುತ್ತಿದ್ದಾರೆ ಎನ್ನುವುದು ಕೇಳಿ ಬರುತ್ತಿರುವ ಮಾತು. ಮತ್ತೊಂದು ಕಡೆ ಕಾಂಗ್ರೆಸ್ ನ ಒಳಗೇ ಮತ್ಯಾರೋ ಇಂಥ ಕೃತ್ಯ ಎಸಗುತ್ತಿರಬಹುದು ಎನ್ನುವ ಗುಮಾನಿಯೂ ಇದೆ.
ಹಾಗಿದ್ದರೆ ಇದು ಕಾಂಗ್ರೆಸ್ ನದ್ದೇ ಕೆಲಸ ಎಂದು ಹೇಳುವುದಕ್ಕಾಗಲ್ಲ.. ಇಲ್ಲಿ ಜೆಡಿಎಸ್ ಹಾಗೂ ಬಿಜೆಪಿಯ ಕೈವಾಡಗಳನ್ನೂ ತಳ್ಳಿ ಹಾಕಲು ಸಾಧ್ಯವಿಲ್ಲ. ಸರ್ಕಾರವನ್ನು ಅಸ್ಥಿರಗೊಳಿಸಲು, ಡಿ.ಕೆ.ಶಿವಕುಮಾರ್ ಹೆಸರಿಗೆ ಮಸಿ ಬಳಿಯಲು ಈ ಕೆಲಸ ಮಾಡಿಸುತ್ತಿರಬಹುದಾ ಎನ್ನುಲ ಪ್ರಶ್ನೆಗಳೂ ಇವೆ. ಹಾಗೇ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವಿಪಕ್ಷಗಳು ಸಂಚು ಹೂಡಿರಬಹುದು ಎನ್ನುಲಾಗುತ್ತಿದೆ. ಆದರೆ ಇವೆಲ್ಲಾ ಅದೆಷ್ಟು ಸತ್ಯ.? ಇನ್ನೆಷ್ಟು ಮಿಥ್ಯ ಎಂಬುದನ್ನು ಸ್ಪಷ್ಟವಾಗಿ ಹೇಳುವುದು ಕಷ್ಟ. ಸೂಕ್ತ ತನಿಖೆಯಿಂದ ಮಾತ್ರ ಇದು ಬಯಲಾಗಬಹುದು. ಆದರೆ ಅದನ್ನು ಮಾಡಿಸುವವರು ಯಾರು.?


