ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಡಿ.ಕೆ. ಶಿವಕುಮಾರ್, ಎಸ್ಐಆರ್ನಿಂದ ದೇಶದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ಹಾಗೂ ಪ್ರಜಾಸೇವಕರಾಗಿ ಜನರ ಮತವನ್ನು ರಕ್ಷಿಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಈ ವಿಚಾರದಲ್ಲಿ ತಾವು ವಿಫಲರಾಗಿರುವುದನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತದಾರರ ಪಟ್ಟಿಯಲ್ಲಿ ಒಂದು ಕೋಟಿಗೂ ಹೆಚ್ಚು ಮತಗಳು ಕಡಿಮೆಯಾಗಿರುವುದನ್ನು ಗಮನಿಸಿದ್ದೇವೆ. ಇದಕ್ಕೆ ಹಲವು ಕಾರಣಗಳಿರಬಹುದು ಎಂದು ಹೇಳಿರುವ ಅವರು, 50 ಲಕ್ಷಕ್ಕೂ ಹೆಚ್ಚು ಜನರಿಗೆ ನೋಟಿಸ್ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಅರ್ಜಿ ಸಲ್ಲಿಸಲು ಇನ್ನೂ ಮೂರು ದಿನಗಳ ಅವಕಾಶವಿರುವ ಸಂದರ್ಭದಲ್ಲಿ ಕೆಲವರು, ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ಅಲ್ಪಸಂಖ್ಯಾತರು ಮತ್ತು ದಲಿತರ ಮತಗಳನ್ನು ತೆಗೆದುಹಾಕಲು ಫಾರ್ಮ್ 7 ಸಲ್ಲಿಸುತ್ತಿದ್ದಾರೆ ಎಂಬ ಆರೋಪವನ್ನು ಡಿ.ಕೆ. ಶಿವಕುಮಾರ್ ಮಾಡಿದ್ದಾರೆ. ಈ ಕುರಿತು ತಮ್ಮ ಪಕ್ಷದ ನಾಯಕರು ದಾಖಲೆಗಳನ್ನು ನೀಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಕ್ರಿಮಿನಲ್ ತನಿಖೆಯ ಅಗತ್ಯವಿದ್ದು, ತಪ್ಪು ಮಾಹಿತಿ ನೀಡಿ ನಾಗರಿಕರನ್ನು ಮತದಾರರ ಪಟ್ಟಿಯಿಂದ ಹೊರಗಿಡಲು ಪ್ರಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಯಾಗಿ ಜನರ ಮತವನ್ನು ರಕ್ಷಿಸುವುದು ತಮ್ಮ ಕರ್ತವ್ಯ ಎಂದು ಹೇಳಿರುವ ಡಿ.ಕೆ. ಶಿವಕುಮಾರ್, ಬಿಎಲ್ಎ-1, ಬಿಎಲ್ಎ-2 ಹಾಗೂ ಬಿಎಲ್ಒಗಳ ಬಳಿ ಈ ಸಂಬಂಧ ಯಾವುದೇ ಮಾಹಿತಿ ಇದ್ದರೆ ಕೂಡಲೇ ತಮ್ಮ ಕಚೇರಿಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ. dkshivakumarlistens@gmail.com ಇ-ಮೇಲ್ ವಿಳಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕಳುಹಿಸುವಂತೆ ಅವರು ತಿಳಿಸಿದ್ದಾರೆ.
ನಾಳೆ (ಅ.2) ಖುದ್ದಾಗಿ ಚುನಾವಣಾ ಆಯೋಗವನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸುವುದಾಗಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಹಲವು ವಿಚಾರಗಳನ್ನು ಚುನಾವಣಾ ಆಯೋಗದ ಗಮನಕ್ಕೆ ತಂದು ಈ ವಿಷಯವನ್ನು ಬಯಲಿಗೆಳೆಯುವುದಾಗಿ ಅವರು ತಿಳಿಸಿದ್ದಾರೆ.
ಹಲವು ಕ್ಷೇತ್ರಗಳಲ್ಲಿ ಫಾರ್ಮ್ 7 ಸಲ್ಲಿಕೆ ಆರೋಪ
ತಮ್ಮ ವಿಡಿಯೋ ಸಂದೇಶದಲ್ಲಿ ಬಿಜೆಪಿ ವಿರುದ್ಧ ಆರೋಪ ಮಾಡಿರುವ ಡಿ.ಕೆ. ಶಿವಕುಮಾರ್, ರಾಜ್ಯದ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಮತಗಳನ್ನು ತೆಗೆದುಹಾಕುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದ್ದಾರೆ. ಭಾಲ್ಕಿ ಕ್ಷೇತ್ರದ ಶಾಸಕ ಈಶ್ವರ್ ಖಂಡ್ರೆ, ನಯನ ಮೋಟಮ್ಮ ಹಾಗೂ ತನ್ವೀರ್ ಸೇಠ್ ಅವರ ಕ್ಷೇತ್ರಗಳಲ್ಲಿಯೂ ಇಂತಹ ಪ್ರಕರಣಗಳು ವರದಿಯಾಗಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
ರಾಜ್ಯಾದ್ಯಂತ ಈ ಕುರಿತು ಜನರು ಜಾಗೃತರಾಗಿರಬೇಕು ಎಂದು ಕರೆ ನೀಡಿರುವ ಅವರು, ಎಲ್ಲೆಲ್ಲಿ ಫಾರ್ಮ್ 7 ಸಲ್ಲಿಸಲಾಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು 12 ಗಂಟೆಯೊಳಗೆ ಒದಗಿಸುವಂತೆ ಬಿಎಲ್ಎಗಳು, ಬಿಎಲ್ಎ-2 ಹಾಗೂ ಬಿಎಲ್ಒಗಳಿಗೆ ಮನವಿ ಮಾಡಿದ್ದಾರೆ.



