‘In India, a Food Inspector Sparks Fear in Mumbai Restaurants’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ, ಮುಂಡೆ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಆಹಾರ ಸುರಕ್ಷತಾ ತಪಾಸಣೆಗಳು ಹಾಗೂ ಮುಂಬೈನ ಹೋಟೆಲ್ಗಳು, ರೆಸ್ಟೋರೆಂಟ್ಗಳು ಸೇರಿದಂತೆ ಆಹಾರ ಉದ್ಯಮಗಳ ಮೇಲೆ ಅದರ ಪರಿಣಾಮವನ್ನು ವಿವರಿಸಲಾಗಿದೆ.

109 ದಿನಗಳಲ್ಲಿ 12 ಸಾವಿರಕ್ಕೂ ಹೆಚ್ಚು ತಪಾಸಣೆ
ಮೇ 2026ರಲ್ಲಿ ಮಹಾರಾಷ್ಟ್ರ FDA ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಬಳಿಕ ತುಕಾರಾಂ ಮುಂಡೆ ನೇತೃತ್ವದಲ್ಲಿ ಆಹಾರ ಸುರಕ್ಷತಾ ನಿಯಮ ಉಲ್ಲಂಘನೆಗಳ ವಿರುದ್ಧ ವ್ಯಾಪಕ ಕಾರ್ಯಾಚರಣೆ ನಡೆಸಲಾಗಿದೆ. ವರದಿಯ ಪ್ರಕಾರ, 109 ದಿನಗಳಲ್ಲಿ 12,083 ತಪಾಸಣೆಗಳನ್ನು ನಡೆಸಲಾಗಿದ್ದು, 5,269 ಸುಧಾರಣಾ ನೋಟಿಸ್ಗಳನ್ನು ನೀಡಲಾಗಿದೆ.
ಇದೇ ಅವಧಿಯಲ್ಲಿ 603 ಆಹಾರ ಉದ್ಯಮಗಳ ಪರವಾನಗಿಗಳನ್ನು ಅಮಾನತುಗೊಳಿಸಲಾಗಿದೆ. ಅಲ್ಲದೆ, ಸುಮಾರು ₹67.2 ಕೋಟಿ ಮೌಲ್ಯದ ಅಕ್ರಮ ಹಾಗೂ ಕಲುಷಿತ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದ್ದು, 875 ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ.
ಹೋಟೆಲ್ಗಳು, ರೆಸ್ಟೋರೆಂಟ್ಗಳ ಮೇಲೆ ಕಠಿಣ ಕ್ರಮ
ಆಹಾರ ಸಂಸ್ಥೆಗಳಲ್ಲಿ ನಡೆಸಿದ ತಪಾಸಣೆ ವೇಳೆ ಜಿರಳೆಗಳ ಹಾವಳಿಯಿಂದ ಆಹಾರ ಕಲುಷಿತಗೊಳ್ಳುವ ಸಾಧ್ಯತೆ, ಕೋಲ್ಡ್-ಚೈನ್ ನಿಯಮಗಳ ಉಲ್ಲಂಘನೆ ಸೇರಿದಂತೆ ಹಲವು ಲೋಪಗಳು ಪತ್ತೆಯಾಗಿವೆ ಎನ್ನಲಾಗಿದೆ. ಮುಂಬೈನ ಕೆಲವು ಪ್ರಸಿದ್ಧ ಆಹಾರ ಸಂಸ್ಥೆಗಳ ಮೇಲೂ ಈ ಕಾರ್ಯಾಚರಣೆಯ ಪರಿಣಾಮ ಬೀರಿದೆ.
ಇದೀಗ ಆಹಾರ ಸುರಕ್ಷತೆಯ ಜೊತೆಗೆ ನ್ಯುಟ್ರಾಸ್ಯುಟಿಕಲ್ ಮತ್ತು ಡಯೆಟರಿ ಸಪ್ಲಿಮೆಂಟ್ಗಳ ಮೇಲೂ FDA ಗಮನ ಹರಿಸಲು ಮುಂದಾಗಿದೆ. ಉತ್ಪನ್ನಗಳ ಲೇಬಲ್ಗಳನ್ನು ಮಾತ್ರವಲ್ಲದೆ, ಅವುಗಳಲ್ಲಿರುವ ಅಂಶಗಳು, ಬಳಕೆ, ವೈದ್ಯರ ಶಿಫಾರಸು ಮತ್ತು ಮಾರಾಟದ ಬಗ್ಗೆಯೂ ಪರಿಶೀಲನೆ ನಡೆಸುವ ಉದ್ದೇಶವಿದೆ ಎಂದು ಮುಂಡೆ ತಿಳಿಸಿದ್ದಾರೆ.
ಬಿಬಿಸಿ ವರದಿಯ ಬಳಿಕ ಇದೀಗ ನ್ಯೂಯಾರ್ಕ್ ಟೈಮ್ಸ್ನಲ್ಲೂ ತುಕಾರಾಂ ಮುಂಡೆ ಅವರ ಕಾರ್ಯಾಚರಣೆಗೆ ಪ್ರಮುಖ ಸ್ಥಾನ ದೊರೆತಿರುವುದು ಗಮನಾರ್ಹವಾಗಿದೆ. ಅವರ ವೈಯಕ್ತಿಕ ಜನಪ್ರಿಯತೆಗಿಂತಲೂ ಆಹಾರ ಸುರಕ್ಷತೆ ಮತ್ತು ಆಡಳಿತದಲ್ಲಿ ಕಟ್ಟುನಿಟ್ಟಿನ ಜಾರಿ ಕ್ರಮಗಳು ಹೇಗೆ ಸಾರ್ವಜನಿಕ ಹಾಗೂ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿವೆ ಎಂಬುದನ್ನು ಈ ವರದಿ ಮುಂದಿಟ್ಟಿದೆ.

