ಕಾಂಗ್ರೆಸ್ ಕಳೆದ ಎಲೆಕ್ಷನ್ ನಲ್ಲಿ ಗೆದ್ದಿರುವ ಹುರುಪಿನಲ್ಲೇ ಇನ್ನೂ ಇದೆಯಾ.? ಅಥವಾ ಮುಂದಿನ ಚುನಾವಣೆಯನ್ನು ಗೆಲ್ಲುವ ಧಾವಂತ ಹಾಗೂ ಆತಂಕದಲ್ಲಿದೆಯಾ.? ಈ ಪ್ರಶ್ನೆ ಈಗ ರಾಜಕೀಯ ಕಾರಿಡಾರ್ ಗಳಲ್ಲಿ ಓಡಾಡುತ್ತಿವೆ. ಏಕೆಂದ್ರೆ ಚುನಾವಣೆಗೆ ಇನ್ನೂ ಸಾಕಷ್ಟು ದಿನಗಳು ಎಂದರೆ 18 ತಿಂಗಳು ಬಾಕಿ ಇರುವಾಗಲೇ ನಾಯಕರು ಮೈ ಚಳಿ ಬಿಟ್ಟು ಎದ್ದಿದ್ದಾರೆ. ಶತಾಯ-ಗತಾಯ ಬಿಜೆಪಿ-ಜೆಡಿಎಸ್ ಪಕ್ಷಗಳನ್ನು ಮುಂದಿನ ಬಾರಿಯೂ ವಿರೋಧ ಪಕ್ಷದ ಸಾಲಿನಲ್ಲೇ ಕೂರಿಸಬೇಕು ಎಂದು ಪಣ ತೊಟ್ಟಂತೆ ಇದೆ. ಇಲ್ಲಿ ಮತ್ತೊಂದು ಅಂಶ ಏನಂದರೆ ಕಾಂಗ್ರೆಸ್ ಬ್ಯಾಕ್ ಟು ಬ್ಯಾಕ್ ಗೆದ್ದು ಎರಡನೇ ಅವಧಿಗೆ ಅಧಿಕಾರ ಹಿಡಿದು ಸಾಕಷ್ಟು ವರ್ಷಗಳೇ ಆಗಿವೆ. ಅದನ್ನು ಈ ಬಾರಿಯಾದರೂ ಮುರಿದು ಗೆದ್ದು ಗದ್ದುಗೆ ಹಿಡಿಯಲು ಹಠ ತೊಟ್ಟಿದೆ. ಇದಕ್ಕಾಗಿ ಭಾರತ್ ಜೋಡೋ 2.0 ಹಮ್ಮಿಕೊಂಡಿದೆ.

ಭಾರತ್ ಜೋಡೋ 2.0 ನಡೆಸುತ್ತಿರುವ ಕಾಂಗ್ರೆಸ್ ಚೆನ್ನಾಗಿಯೇ ಹೋಮ್ ವರ್ಕ್ ಮಾಡಿಕೊಂಡಂತೆ ಇದೆ. ಇದರ ಟಾರ್ಗೆಟ್ ಈಗ ಕಳೆದ ಬಾರಿ ಮಕಾಡೆ ಮಲಗಿದ 84 ಕ್ಷೇತ್ರಗಳು. ಇಲ್ಲಿ ಸೋಲಿಗೆ ಕಾರಣ ಏನು ಎನ್ನುವುದನ್ನು ಮೊದಲು ಪಡೆದುಕೊಂಡಿದೆ. ಸ್ಥಳೀಯ ಕಾರ್ಯಕರ್ತರನ್ನು ಮೊದಲಿಗಿಂತಲೂ ಹೆಚ್ಚು ವಿಶ್ವಾಸಕ್ಕೆ ಪಡೆದು ಅವರಿಂದ ಸಾಕಷ್ಟು ಮಾಹಿತಿಗಳನ್ನು ಪಡೆದುಕೊಳ್ಳಲಾಗಿದೆ. ಜಿಲ್ಲಾ ಘಟಕಗಳನ್ನು ಪುನರ್ ರಚಿಸಲಾಗಿದೆ. ಇದರ ಜತೆಗೆ, ಸದ್ಯ ವಿವಾದಕ್ಕೊಳಗಾಗಿರುವ SIR ವಿಚಾರವನ್ನು ಮುನ್ನೆಲೆಗೆ ತಂದುಕೊಂಡಿದೆ. ಅದರ ವಿರುದ್ಧದ ಅಭಿಯಾನವನ್ನೂ ಕಾಂಗ್ರೆಸ್ ತೀವ್ರಗೊಳಿಸಿದೆ. ತಳಮಟ್ಟದಲ್ಲಿ ಪಕ್ಷದ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಗ್ರಾಮ ಪಂಚಾಯತ್ ಹಾಗೂ ವಾರ್ಡ್ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕಾಂಗ್ರೆಸ್ ಕೈಗೊಂಡಿದೆ.

ಕಳೆದ ಬಾರಿ 84 ಕ್ಷೇತ್ರಗಳಲ್ಲಿ ಸೋತಿದ್ದರೂ ಭಾರತ್ ಜೋಡೋ ಆರಂಭಿಸಲು ಆಯ್ಕೆ ಮಾಡಿಕೊಂಡಿದ್ದು ಮಾತ್ರ ಶಿಕಾರಿಪುರವನ್ನು ಇದಕ್ಕೆ ರಾಜಕೀಯವಾಗಿ ಹಲವಾರು ಲೆಕ್ಕಾಚಾರಗಳು ಇವೆ. ಅದರಲ್ಲೂ ಮುಖ್ಯವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಯೇಂದ್ರರ ಓಟಕ್ಕೆ ಬ್ರೇಕ್ ಹಾಕುವುದು. ಇದೇ ನಿಟ್ಟಿನಲ್ಲಿ ಇಲ್ಲಿಂದ ಭಾರತ್ ಜೋಡೋ 2.0 ಶುರು ಮಾಡಲಾಗಿದೆ.ಅಲ್ಲದೇ ಬಿಜೆಪಿಯ ಭದ್ರಕೋಟೆ ಮತ್ತು ಆರೆಸ್ಸೆಸ್ ಪ್ರಭಾವವಿರುವ ಭಾಗಗಳಲ್ಲೇ ಅಬ್ಬರಿಸುವ ಮೂಲಕ ಪ್ರತಿಪಕ್ಷಗಳಿಗೆ ರಾಜಕೀಯವಾಗಿ ಠಕ್ಕರ್ ಕೊಡುವುದು ಕಾಂಗ್ರೆಸ್ ನ ಪ್ಲಾನ್ ಆಗಿದೆ.

ಇದರೊಂದಿಗೆ ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡುವುದು ಇದರ ಬಗ್ಗೆ ಯುವಜನರ ಗಮನ ಸೆಳೆಯುವುದು ಭಾರತ್ ಜೋಡೋದ ಮತ್ತೊಂದು ಯೋಜನೆಯಾಗಿದೆ. ನಿರುದ್ಯೋಗ ಸಮಸ್ಯೆ ನಿವಾರಣೆ, ರೈತರು, ಕಾರ್ಮಿಕರು ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳ ರಕ್ಷಣೆ ಮತ್ತು ಸಾಂವಿಧಾನಿಕ ತತ್ವಗಳನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ನಾಗರಿಕರನ್ನು ನೇರವಾಗಿ ಸಂಪರ್ಕಿಸುವುದು ಕೂಡಾ ಈ ಯಾತ್ರೆಯ ಪ್ರಮುಖ ಆಶಯವಾಗಿದೆ. ಹಾಗೇ ವಿಧಾನಸಭಾ ಚುನಾವಣೆಗೂ ಮುನ್ನ ಹೆಚ್ಚಿನ ಗಮನ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸಲು ಮತ್ತು ನಾಲ್ಕು ವರ್ಷಗಳ ಅನುಷ್ಠಾನದ ಬಳಿಕ ಗ್ಯಾರಂಟಿ ಯೋಜನೆಗಳ ಕುರಿತು ವಾಸ್ತವಿಕ ಪ್ರತಿಕ್ರಿಯೆ ಪಡೆಯಲು ಇದು ನೆರವಾಗಲಿದೆ ಎಂಬುದು ಕಾಂಗ್ರೆಸ್ ನಾಯಕರ ಅಭಿಪ್ರಾಯ.

ಭಾರತ್ ಜೋಡೋ ಯಾತ್ರೆ ಕೇವಲ ಪಕ್ಷದ ಕಾರ್ಯಕ್ರಮವಲ್ಲ ಎನ್ನುವುದನನ್ನ ಕಾಂಗ್ರೆಸ್ ಮನದಟ್ಟು ಮಾಡಲು ಮುಂದಾಗಿದೆ. ಇದು ದೇಶದ ಐಕ್ಯತೆ, ಸಮಗ್ರತೆ ಹಾಗೂ ಜನರ ನೋವು-ನಲಿವುಗಳನ್ನು ಅರಿತು, ಅವರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಹಕಾರಿ ಆಗಲಿದೆ. ಜೊತೆಗೆ ಬದಲಾವಣೆಯ ಹೊಸ ದಾರಿ ತೋರಿಸಲು ಸಹಕಾರ ಎಂಬುದನ್ನು ಈ ಮೂಲಕ ಬಿಂಬಿಸಲು ಕಾಂಗ್ರೆಸ್ ಹೊರಟಿದೆ.