ಕರಾವಳಿ ಕರ್ನಾಟಕದಲ್ಲಿ ಜನಪರ ಹೋರಾಟ ಎಂದ ತಕ್ಷಣ ನೆನಪಾಗುವ ಹೆಸರು ಮುನೀರ್ ಕಾಟಿಪಳ್ಳ. ಸುರತ್ಕಲ್ ಟೋಲ್‌ಗೇಟ್ ತೆರವುಗೊಳಿಸಲು ನಡೆದ ಐತಿಹಾಸಿಕ ಹೋರಾಟದ ಮುಖಂಡರಾಗಿದ್ದ ಇವರು, ಪ್ರಸ್ತುತ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿಯಾಗಿ ಸಾರ್ವಜನಿಕರ ಪರವಾಗಿ ನಿರಂತರ ಧ್ವನಿ ಎತ್ತುತ್ತಿದ್ದಾರೆ. ಇತ್ತೀಚೆಗೆ ಮಂಗಳೂರಿನ MRPL ಸಂಸ್ಥೆಯಲ್ಲಿ ನಡೆದ ಸರಣಿ ಅಪಘಾತ ಹಾಗೂ ಸ್ಫೋಟದ ಹಿನ್ನೆಲೆಯಲ್ಲಿ, ಅವರು 'ತಾಯ್ನಾಡು ನ್ಯೂಸ್' ಜೊತೆ ಮಾತನಾಡಿ ಅಲ್ಲಿನ ಕಟು ವಾಸ್ತವವನ್ನು ತೆರೆದಿಟ್ಟಿದ್ದಾರೆ.
ಕನಸಾಗಿಯೇ ಉಳಿದ ಉದ್ಯೋಗದ ಭರವಸೆ

90ರ ದಶಕದಲ್ಲಿ ಉದ್ಯೋಗವಿಲ್ಲದೆ ಯುವಕರು ಮುಂಬೈ ಹಾಗೂ ಗಲ್ಫ್ ದೇಶಗಳಿಗೆ ವಲಸೆ ಹೋಗುತ್ತಿದ್ದರು. ಆ ಸಮಯದಲ್ಲಿ ಎಂಆರ್‌ಪಿಎಲ್ ಬಂದಾಗ ಲಕ್ಷಾಂತರ ಜನರಿಗೆ ಕೆಲಸ ಸಿಗುತ್ತದೆ, ವಲಸೆ ನಿಲ್ಲುತ್ತದೆ ಎಂಬ ದೊಡ್ಡ ನಿರೀಕ್ಷೆ ಇತ್ತು. ಹಾಗಾಗಿ ಆರಂಭದಲ್ಲಿ ಅಷ್ಟೇನೂ MRPL ವಿರುದ್ಧ ತಕರಾರು ಇರಲಿಲ್ಲ. ಆದರೆ ಶುದ್ಧೀಕರಿಸದ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಹರಿಸಲು ಪೈಪ್‌‌ಲೈನ್ ಹಾಕಿದಾಗ ಮೀನುಗಾರರು ಮೊದಲ ಬಾರಿಗೆ ರಸ್ತೆಗಿಳಿದರು. 1997-98ರಲ್ಲಿ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಬೃಹತ್ ಹೋರಾಟ ನಡೆಸಿ ಹೆದ್ದಾರಿಯನ್ನು ಸುಮಾರು 100 ಕಿ.ಮೀ ಬಂದ್ ಮಾಡಿದ್ದರು. ಅದನ್ನು ಹೊರತುಪಡಿಸಿದರೆ, ಆರಂಭದಲ್ಲಿ ಪರಿಸರ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಕರಾವಳಿಯಲ್ಲಿ ದೊಡ್ಡ ಹೋರಾಟಗಳೇನೂ ಇರಲಿಲ್ಲ, ಮೇಲಾಗಿ ಬಹುತೇಕ ರಾಜಕಾರಣಿಗಳು ಕಂಪನಿಯ ಪರವಾಗಿಯೇ ಇದ್ದರು.
ಪ್ರಮುಖ ಸಮಸ್ಯೆಗಳು ಹಾಗೂ ವಾಸ್ತವ ಸ್ಥಿತಿ

ಉಸಿರುಗಟ್ಟಿಸುವ ರಾಸಾಯನಿಕ ಮಾಲಿನ್ಯ: ಜೋಕಟ್ಟೆ ಮತ್ತು ಕಲಾವಾರು ಭಾಗದಲ್ಲಿ ನಿರಂತರವಾಗಿ ಕಪ್ಪು ಹೊಗೆ ಹಾಗೂ ತ್ಯಾಜ್ಯ ನೀರು ಹೊರಬರುತ್ತಿದ್ದು, ಪ್ರತಿದಿನ ಬೆಳಗಿನ ಜಾವ 3-4 ಗಂಟೆಗೆ ಕೆಟ್ಟ ದುರ್ವಾಸನೆ ಆವರಿಸಿಕೊಳ್ಳುತ್ತಿದೆ.

ಆರೋಗ್ಯದ ಮೇಲೆ ಗಂಭೀರ ಪರಿಣಾಮ: ಸೂಕ್ತ ಹಸಿರು ವಲಯ ಇಲ್ಲದೆ ಕಾರ್ಯಾಚರಣೆ ನಡೆಸುತ್ತಿರುವುದರಿಂದ ಸ್ಥಳೀಯರಲ್ಲಿ ಕೆಮ್ಮು, ಉಸಿರಾಟದ ತೊಂದರೆ, ಚರ್ಮರೋಗ ಹಾಗೂ ಕ್ಯಾನ್ಸರ್‌ನಂತಹ ಗಂಭೀರ ರೋಗಗಳು ಹೆಚ್ಚುತ್ತಿವೆ.

ಸರಣಿ ದುರಂತ ಮತ್ತು ಸುರಕ್ಷತೆಯ ನಿರ್ಲಕ್ಷ್ಯ: 2014ರ ಜುಲೈನಲ್ಲಿ ನಡೆದ ಹೈಡ್ರೋಜನ್ ಸಲ್ಫೈಡ್ ಅನಿಲ ಸೋರಿಕೆಗೆ ಇಬ್ಬರು ಕಾರ್ಮಿಕರು ಬಲಿಯಾಗಿದ್ದರು. ಕಂಪನಿಯು ಸುರಕ್ಷತಾ ನಿಯಮಗಳನ್ನು ಗಾಳಿಗೆ ತೂರಿದ್ದೇ ಇದಕ್ಕೆ ಮುಖ್ಯ ಕಾರಣ. ಒಟ್ಟಿನಲ್ಲಿ ಇಲ್ಲಿ ಸಾವೇನೂ ಹೊಸದಲ್ಲ. 
ಸಂತ್ರಸ್ತರ ಕಣ್ಣಿಗೆ ಮಣ್ಣೆರಚಿದ ಆಡಳಿತ: 2016ರಲ್ಲಿ ಪರಿಸರ ನಿಯಂತ್ರಣಕ್ಕಾಗಿ ಸರ್ಕಾರ ರೂಪಿಸಿದ್ದ 6 ಅಂಶಗಳನ್ನು ಕಂಪನಿ ಅರೆಬರೆಯಾಗಿ ಅನುಷ್ಠಾನಗೊಳಿಸಿದೆ. ಸಂತ್ರಸ್ತ 408 ಕುಟುಂಬಗಳಿಗೆ 27 ಎಕರೆ ಜಾಗ ನೀಡಿದ್ದರೂ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಆಟವಾಡುತ್ತಿದೆ.

ಉದ್ಯೋಗದಲ್ಲೂ ವಂಚನೆ ಹಾಗೂ ಶೋಷಣೆ: ಸ್ಥಳೀಯರಿಗೆ ಕಾಯಂ ಉದ್ಯೋಗ ನೀಡದೆ ಗುತ್ತಿಗೆ ಆಧಾರದ ಮೇಲೆ ಶೋಷಿಸಲಾಗುತ್ತಿದೆ. ಸಿಪಿಎಲ್ ಪ್ಲ್ಯಾಂಟ್‌ನಲ್ಲಿ 15-20 ವರ್ಷ ಕೆಲಸ ಮಾಡಿದ ಬಾಗಲಕೋಟೆ ಭಾಗದ ಕಾರ್ಮಿಕರನ್ನು ವಿಆರ್‌ಎಸ್ ಹೆಸರಿನಲ್ಲಿ ಕಿತ್ತುಹಾಕಲಾಗಿದ್ದು, ಅವರು ಗೇಟ್ ಬಳಿ ಧರಣಿ ನಡೆಸುತ್ತಿದ್ದಾರೆ.

ಸಿಎಸ್‌ಆರ್ ಮೂಲಕ ಧ್ವನಿ ಅಡಗಿಸುವ ತಂತ್ರ: ಮಂದಿರ, ಮಸೀದಿ, ದೇವಸ್ಥಾನಗಳಿಗೆ ಹಾಗೂ ಕಂಬಳ, ಯಕ್ಷಗಾನಕ್ಕೆ ಕಂಪನಿ ಸ್ಪಾನ್ಸರ್‌ಶಿಪ್ ನೀಡಿ ಜನರ ಧ್ವನಿಯನ್ನು ಅಡಗಿಸುತ್ತಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ವಿಮರ್ಶಿಸಬಾರದು ಎಂಬ ವಿಚಿತ್ರ ಷರತ್ತುಗಳನ್ನು ವಿಧಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಜೋಕಟ್ಟೆ, ಕಳವಾರು ಮತ್ತು ಬಾಳ ಗ್ರಾಮಗಳಲ್ಲಿ ಎಂಆರ್‌ಪಿಎಲ್‌ನ 3ನೇ ಹಂತದ ಕೋಕ್ ಹಾಗೂ ತ್ಯಾಜ್ಯದಿಂದ ವಿಪರೀತ ಮಾಲಿನ್ಯವಾಗುತ್ತಿದ್ದು, ಇದನ್ನು ತಡೆಯಲು 27 ಎಕರೆ ಜಾಗದಲ್ಲಿ ಹಸಿರು ವಲಯ ಮಾಡಲು ಜಿಲ್ಲಾಡಳಿತ ಪ್ರಕ್ರಿಯೆ ಮುಗಿಸುತ್ತಿದೆ. ನಾಗರಿಕ ಹೋರಾಟ ಸಮಿತಿಯ ಸತತ ಧರಣಿಯ ಫಲವಾಗಿ, ಈಗ ಕೆಐಎಡಿಬಿ ಬದಲು ಜಿಲ್ಲಾಡಳಿತವೇ ನೇರವಾಗಿ ಹಣ ನೀಡಲು ಮುಂದಾಗಿದೆ. ಅದರಂತೆ ಜಮೀನಿಗೆ ಎಕರೆಗೆ ಸುಮಾರು 80 ಲಕ್ಷ ಹಾಗೂ ಕೆಲಸದ ಬದಲು 22 ಲಕ್ಷ ನಗದು ಪರಿಹಾರ ಕೊಡುವ ಒಪ್ಪಂದವಾಗಿದ್ದು, ಸರ್ಕಾರ ವಿತರಣೆಗೆ ಚಾಲನೆ ನೀಡಿದೆ. ಬಿಡದಿಯಲ್ಲಿ ನಡೆಯುತ್ತಿರುವ ಭೂಸ್ವಾಧೀನದ ಗಲಾಟೆಗೆ ಹೋಲಿಸಿದರೆ ಇಲ್ಲಿ ಯಾವುದೇ ಸಣ್ಣ ವಿರೋಧವೂ ಇಲ್ಲದೆ ಜನರು ಒಪ್ಪಿಕೊಂಡಿದ್ದಾರೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.

ಒಂದು ಕಡೆ ಉದ್ಯೋಗದ ಹೆಸರಿನಲ್ಲಿ ವಂಚನೆ, ಇನ್ನೊಂದು ಕಡೆ ಪರಿಸರ ನಾಶ ಹಾಗೂ ಜೀವಕ್ಕೆ ಕಂಟಕ ಇವುಗಳ ವಿರುದ್ಧ ಮುನೀರ್ ಕಾಟಿಪಳ್ಳನವರು ಸೇರಿದಂತೆ ಹಲವರು ನಿರಂತರವಾಗಿ ಹೋರಾಟ ಮಾಡುತ್ತಾ ಬರುತ್ತಿದ್ದಾರೆ. ಆದರೆ ಅಧಿಕಾರಿಗಳು ಹೆಚ್ಚಾಗಿ ಎಂಆರ್‌ಪಿಎಲ್‌ ಕಂಪನಿ ಪರವಾಗಿಯೇ ಇದ್ದಾರೆ ಅನ್ನೋದೇ ವಿಪರ್ಯಾಸ.