ಇಂಡಿಯಾ ಒಕ್ಕೂಟ ನಿನ್ನೆ( ಸೋಮವಾರ) ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧ ಮತದಾರರ ಹೆಸರುಗಳ ಅಳಿಸುವಿಕೆ ಮತ್ತು ಅಕ್ರಮಗಳನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಅರ್ಜಿ ಸಲ್ಲಿಸಿತ್ತು.  ಆದರೆ ಒಕ್ಕೂಟ ಸಲ್ಲಿಸಿದ್ದ ಅರ್ಜಿಯಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ 10 ಕ್ಕೂ ಹೆಚ್ಚು ದೋಷಗಳನ್ನು ಪತ್ತೆಹಚ್ಚಿದೆ. 

ಅರ್ಜಿದಾರರಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಒಬ್ಬರಾಗಿದ್ದಾರೆ. ಆದರೆ ಅವರ ಗುರುತಿನ ಚೀಟಿಯ ಸ್ಪಷ್ಟ ಪ್ರತಿಯನ್ನು ಸಲ್ಲಿಸುವಂತೆ ಅರ್ಜಿ ಸಲ್ಲಿಸಿದ ವಕೀಲರಿಗೆ ರಿಜಿಸ್ಟ್ರಿ ಸೂಚಿಸಿದೆ. ಅಲ್ಲದೆ, ಅರ್ಜಿಯಲ್ಲಿನ ಕೆಲವು ಪುಟಗಳು ಓದಲು ಅಸಾಧ್ಯವಾಗಿವೆ ಹಾಗೂ ಕೆಲವು ಪುಟಗಳು ನಾಪತ್ತೆಯಾಗಿವೆ.ಜೊತೆಗೆ, ನ್ಯಾಯಾಲಯದ ಶುಲ್ಕದಲ್ಲಿ 200 ರೂ.ಗಳಿಗೂ ಅಧಿಕ ಕೊರತೆಯಿದೆ ಎಂಬುದನ್ನೂ ರಿಜಿಸ್ಟ್ರಿ ಹೇಳಿದೆ. ಇದೇ ವೇಳೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಅರ್ಜಿದಾರರಾಗಿರುವ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಗುರುತಿನ ಚೀಟಿಯ ಸ್ಪಷ್ಟ ಪ್ರತಿಯನ್ನು ಸಲ್ಲಿಸುವಂತೆ ರಿಜಿಸ್ಟ್ರಿ ಅರ್ಜಿದಾರರ ವಕೀಲರಿಗೆ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ

ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪರಿಶೀಲಿಸಬೇಕು, ಸಿಇಸಿ ಜ್ಞಾನೇಶ್ ಕುಮಾರ್ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ಇಂಡಿಯಾ ಒಕ್ಕೂಟ ತನ್ನ ಅರ್ಜಿಯಲ್ಲಿ ತಿಳಿಸಿತ್ತು. ಅಲ್ಲದೇ SIR ಪ್ರಕ್ರಿಯೆ ವೇಳೆ ನಡೆದಿರುವ ಅವೈಜ್ಞಾನಿಕ ಮತದಾರರ ಕೈಬಿಡುವಿಕೆಯನ್ನು ತಡೆಯಬೇಕು ಮತ್ತು ವಿದ್ಯುನ್ಮಾನ ಮತಯಂತ್ರಗಳ ಬಳಕೆ ಮತ್ತು ನಿಯೋಜನೆಯನ್ನು ನಿಯಂತ್ರಿಸುವ ವ್ಯವಸ್ಥೆಯನ್ನು ಪರಿಶೀಲಿಸಬೇಕು ಎಂದು ನಾಯಕರು ಅರ್ಜಿಯಲ್ಲಿ ಒತ್ತಾಯಿಸಿದ್ದರು. 

ಅಲ್ಲದೆ ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಸಿಂಧುತ್ವವನ್ನು ಈ ಅರ್ಜಿಯು ಪ್ರಶ್ನಿಸಿದೆ. ಈ ಪರಿಷ್ಕರಣೆಯ ನೆಪದಲ್ಲಿ ನೈಜ ಮತದಾರರನ್ನು, ಅದರಲ್ಲೂ ವಿಶೇಷವಾಗಿ ಯುವಕರು, ವಲಸಿಗರು ಮತ್ತು ಅಂಚಿನಲ್ಲಿರುವ ಸಮುದಾಯಗಳ ಮತದಾರರನ್ನು ವ್ಯಾಪಕ ಪ್ರಮಾಣದಲ್ಲಿ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಮತ್ತೊಂದು ವಿಚಾರ ಎಂದರೆ ಭಾರತೀಯ ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತ ಜ್ವಾನೇಶ್ ಕುಮಾರ್ ಹಾಗೂ ಇತರ ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರನ್ನು ಈ ಪ್ರಕರಣದಲ್ಲಿ ಪ್ರತಿವಾದಿಗಳನ್ನಾಗಿ ಅರ್ಜಿಯಲ್ಲಿ ಸೇರಿಸಲಾಗಿದೆ.