ಕನ್ನಡ ಚಿತ್ರರಂಗದ ದಿವಂಗತ ಹಿರಿಯ ನಟ, ರೆಬೆಲ್ ಸ್ಟಾರ್ ಅಂಬರೀಶ್ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿಯವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅಂಬರೀಶ್ ಕೇವಲ ಒಬ್ಬ ನಟರಾಗಿ ಮಾತ್ರವಲ್ಲದೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿದ್ದವರು. ಜನಪ್ರಿಯ ರಾಜಕಾರಣಿಯಾಗಿ ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಕಾವೇರಿ ನೀರಾವರಿ ಹೋರಾಟದ ಸಂದರ್ಭದಲ್ಲಿ ಮಂಡ್ಯದ ಜನರ ಹಿತಕ್ಕಾಗಿ ತಮ್ಮ ಕೇಂದ್ರ ಸಚಿವ ಸ್ಥಾನಕ್ಕೇ ರಾಜೀನಾಮೆ ನೀಡಿದ ಮಹಾನ್ ನಾಯಕ. ಚಿತ್ರರಂಗ ಮತ್ತು ಸಮಾಜಕ್ಕೆ ಅವರು ಸಲ್ಲಿಸಿದ ನಿರುಪಮಾನ ಸೇವೆಯನ್ನು ಪರಿಗಣಿಸಿ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ಅಖಿಲ ಕರ್ನಾಟಕ ನ್ಯಾಯ ನೀತಿ ಧರ್ಮ ಡಾ.ಅಂಬರೀಶ್ ಅಭಿಮಾನಿಗಳ ಸಂಘ ಸಲ್ಲಿಸಿರುವ ಮನವಿಯನ್ನು ಪತ್ರದೊಂದಿಗೆ ಸಚಿವರು ಲಗತ್ತಿಸಿದ್ದಾರೆ. ಅಂಬರೀಶ್ ಅವರ ಸೇವೆ, ಜನಪ್ರಿಯತೆ ಹಾಗೂ ನಾಡಿನ ಮೇಲಿನ ಪ್ರೀತಿಯನ್ನು ಪುರಸ್ಕರಿಸಿ ಮುಂಬರುವ ಕನ್ನಡ ರಾಜ್ಯೋತ್ಸವ ಅಥವಾ ಯಾವುದೇ ಸೂಕ್ತ ಸಂದರ್ಭದಲ್ಲಿ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಕರ್ನಾಟಕ ರತ್ನವನ್ನು ಮರಣೋತ್ತರವಾಗಿ ನೀಡಿ ಗೌರವಿಸಬೇಕು ಎಂದು ಕೋರಿದ್ದಾರೆ. ರಾಮಲಿಂಗಾರೆಡ್ಡಿ ಸರ್ಕಾರಕ್ಕೆ ಸಲ್ಲಿಸಿರುವ ಈ ಮನವಿಗೆ ಅಂಬರೀಶ್ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.


