
ಸಾಮಾನ್ಯವಾಗಿ ಕಾಗೆ ಬಂಗಾರ ಅಂದ್ರೆ ಮೇಲ್ನೋಟಕ್ಕೆ ಚಂದ ಕಾಣೋ ಮೋಸ ಅಥವಾ ಸುಳ್ಳು ಭ್ರಮೆ ಅಂತ ಅರ್ಥ. ಆದರೆ ಸೂರಿ ತೆರೆಮೇಲೆ ಈ ಶೀರ್ಷಿಕೆಯಡಿ ಏನೆಲ್ಲ ಕಥೆ ಹೆಣೆದಿದ್ದಾರೆ ಅನ್ನೋದೇ ಈಗ ದೊಡ್ಡ ಕುತೂಹಲ. ವಿಶೇಷ ಅಂದ್ರೆ ಈ ಚಿತ್ರವು ಸೂರಿಯವರ ಹಿಂದಿನ ಸೂಪರ್ ಹಿಟ್ ಸಿನಿಮಾಗಳಾದ ಕೆಂಡ ಸಂಪಿಗೆ ಮತ್ತು ಪಾಪ್ಕಾರ್ನ್ ಮಂಕಿ ಟೈಗರ್ ಕಥೆಯೊಂದಿಗೆ ನಂಟನ್ನು ಹೊಂದಿದೆ. ಕೆಂಡ ಸಂಪಿಗೆಯಲ್ಲಿದ್ದ ಪ್ರಶಾಂತ್ ಸಿದ್ಧಿ ಪಾತ್ರವೇ ಇಲ್ಲೂ ಮುಂದುವರಿದಿದ್ದು, ಇವರೊಂದಿಗೆ ನಡುವೆ ಅಂತರವಿರಲಿ ಖ್ಯಾತಿಯ ಸೂರ್ಯ ಪ್ರಖ್ಯಾತ್ ರಗಡ್ ಲುಕ್ನಲ್ಲಿ ಕಾಣಿಸಿದ್ದಾರೆ. ಜೊತೆಗೆ ದುನಿಯಾ ವಿಜಯ್ ಅವರ ಹಿರಿಯ ಮಗಳಾದ ರಿತನ್ಯಾ ವಿಜಯಕುಮಾರ್ ಈ ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ನಾಯಕಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ.

ಹೊಸದಾಗಿ ಬಿಡುಗಡೆಯಾಗಿರುವ ಟೀಸರ್ ನೋಡಿದ್ರೆ ಸಾಕು, ಇದು ಪಕ್ಕಾ ಸೂರಿ ಸಿಗ್ನೇಚರ್ ಸ್ಟೈಲ್ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಡೈರೆಕ್ಟರ್ ಸೂರಿ ಮಾಡಿರೋ ಸಿನಿಮಾಗಳಲ್ಲಿ ಕತ್ತಲೆಯ ರಸ್ತೆಗಳು, ರೌಡಿಸಂ, ಡಾರ್ಕ್ ಕಾಮಿಡಿ ಹಾಗೂ ಸಸ್ಪೆನ್ಸ್-ಥ್ರಿಲ್ಲರ್ ಈ ಅಂಶಗಳು ಇದ್ದೇ ಇರುತ್ತವೆ. ಹಾಗೆಯೇ ಈ ಸಿನಿಮಾದಲ್ಲೂ ಅದೇ ಮುಂದುವರೆದಿದೆ. ಸೂರ್ಯ ಪ್ರಖ್ಯಾತ್, ಪ್ರಶಾಂತ್ ಸಿದ್ಧಿ ಜೊತೆಗಿದ್ದು, ಸೈಲೆಂಟ್ ಆಗಿ ಏನೋ ದೊಡ್ಡ ಇನ್ಫಾರ್ಮೇಷನ್ ಹುಡುಕಾಟದಲ್ಲಿದ್ದಾರೆ ಎಂಬ ಸುಳಿವು ಟೀಸರ್ನಲ್ಲಿದೆ. ಬಾರಿ ಸ್ಟಾರ್ ನಟರ ಬದಲು ಸಂಪೂರ್ಣ ಹೊಸ ಮತ್ತು ಪ್ರತಿಭಾವಂತ ತಂಡವನ್ನು ಸೇರಿಸಿಕೊಂಡು ಈ ಸಿನಿಮಾ ಮಾಡುತ್ತಿದ್ದಾರೆ.
ಇನ್ನು ಹರ್ಷಿತ್ ಆರ್. ಗೌಡ ಅವರ HRG ಪ್ರೊಡಕ್ಷನ್ಸ್ ಅಡಿಯಲ್ಲಿ ಈ ಸಿನಿಮಾ ಮೂಡಿಬರುತ್ತಿದ್ದು, ಇದಕ್ಕೆ PRK ಪ್ರೊಡಕ್ಷನ್ಸ್ ಹಾಗೂ KRG ಸ್ಟುಡಿಯೋಸ್ ಕೂಡ ಸಾಥ್ ನೀಡಿವೆ. ತುಂಬ ವರ್ಷಗಳು ಟೈಮ್ ತಗೊಂಡು ಸೂರಿ ಕಾಗೆ ಬಂಗಾರ ಮೂಲಕ ಕಮ್ ಬ್ಯಾಕ್ ಮಾಡಿದ್ದಾರೆ. ಮುಂದೆ ಈ ಸಿನಿಮಾ ಯಾವ ರೀತಿಯ ಮ್ಯಾಜಿಕ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

