ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಸಿಎಂ
ಅಷ್ಟಕ್ಕೂ ಈ ಬಿರುಗಾಳಿಗೆ ಮುನ್ನುಡಿ ಬರೆದಿದ್ದೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.. ಸುಮ್ಮನೇ ಇರದೇ ವಿರೋಧ ಪಕ್ಷದವರಿಗೆ ಕೋಲು ಕೊಟ್ಟರು. ಅವರು ಈಗ ಚೆನ್ನಾಗಿ ಬಾರಿಸುತ್ತಿದ್ದಾರೆ. ಸಿಎಂ ಬಾರಿಸುಕೊಳ್ಳುವುದರಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಅಷ್ಟೇ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ತಮ್ಮ ಸಹೋದ್ಯೋಗಿ ಸಚಿವರಿಗೆ ಮತ್ತು ಹಿರಿಯ ಅಧಿಕಾರಿಗಳಿಗೆ ಅತ್ಯಂತ ಜಾಗರೂಕರಾಗಿರಲು ಸೂಚನೆ ನೀಡಿದ್ದರು. ರಾಜ್ಯ ಸರ್ಕಾರದ ಸಚಿವರನ್ನು ಗುರಿಯಾಗಿಸಿಕೊಂಡು, ಹನಿಟ್ರ್ಯಾಪ್ ಅಥವಾ ಆಮಿಷ ಒಡ್ಡುವ ಮೂಲಕ ರಹಸ್ಯವಾಗಿ ವಿಡಿಯೋ ಹಾಗೂ ಆಡಿಯೋ ರೆಕಾರ್ಡ್ ಮಾಡಲು ಸಂಚು ರೂಪಿಸಲಾಗಿದೆ ಎಂಬ ಗುಪ್ತಚರ ಮಾಹಿತಿ ಆಧರಿಸಿ ಈ ಎಚ್ಚರಿಕೆ ನೀಡಲಾಗಿತ್ತು. ಆದರೆ ತಾವು ಬಿಟ್ಟ ಬಾಣ ತಿರುಗುಬಾಣವಾಗುತ್ತೆ ಅಂತ ಅವರಿಗೆ ಗೊತ್ತಿರಲಿಲ್ಲವೇನೋ ಈಗ ಅಸ್ತ್ರವನ್ನು ಇಟ್ಟುಕೊಂಡು ಕುಮಾರಸ್ವಾಮಿ ಎಡೆಬಿಡದೇ ಮುಖ್ಯಮಂತ್ರಿಗಳನ್ನ ಕಾಡುತ್ತಿದ್ದಾರೆ.
ಶಾಂಗ್ರಿಲಾ ಹೋಟೆಲ್ ನಲ್ಲಿ ನಡೆದಿದ್ದು ಏನು.?
ಮುಖ್ಯಮಂತ್ರಿ ಶಿವಕುಮಾರ್ ಅವರ ಶಾಂಗ್ರಿಲಾ ಹೊಟೇಲ್ ಭೇಟಿ ಬಗ್ಗೆ ಪ್ರಸ್ತಾಪ ಮಾಡಿರುವ ಕುಮಾರಸ್ವಾಮಿ ಆವತ್ತು ಹೊಟೇಲ್ ನಲ್ಲಿ ಸಿಎಂ ಡಿಕೆ ಶಿವಕುಮಾರ್ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದ್ದರು. ಅತ ಬೇರೆ ಯಾರೂ ಅಲ್ಲ…ಸ್ಟಿಂಗ್ ಆಪರೇಷನ್ ವ್ಯಕ್ತಿ. ಆತ ಯಾರು ಎಂಬುದನ್ನು ಶಿವಕುಮಾರ್ ಹೇಳಬೇಕು.ಆ ವ್ಯಕ್ತಿಯೇ ಸ್ಟಿಂಗ್ ಆಪರೇಷನ್ ವರದಿ ಕೊಟ್ಟರಾ? ಎಂದು ಸ್ಪಷ್ಟಪಡಿಸಬೇಕು ಅಂತ ಕುಮಾರಸ್ವಾಮಿ ಪಟ್ಟು ಹಿಡಿದಿದ್ದಾರೆ. ಅಲ್ಲದೇ ಕ್ಯಾಬಿನೆಟ್ ಗೆ ಸ್ಟಿಂಗ್ ಆಪರೇಷನ್ ಪಟ್ಟಿ ತೆಗೆದುಕೊಂಡು ಹೋಗಿದ್ದರು. ಉತ್ತರ ಭಾರತದಿಂದ ನಿರ್ದೇಶನಗಳು ಬರುತ್ತಿವೆ, ಕುಮಾರಸ್ವಾಮಿ ಅವರೇ ಸ್ಟಿಂಗ್ ಆಪರೇಷನ್ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಸ್ಟಿಂಗ್ ಆಪರೇಷನ್ ನ ಸಾಮ್ರಾಟ್ ಎಂದು ಯಾರು ಕರೆಸಿಕೊಳ್ಳುವವರು ಎಂಬುದು ರಾಜ್ಯದ ಜನರಿಗೆ ಗೊತ್ತಿದೆ ಎಂದಿದ್ದಾರೆ.
ಮೌನ ಮುರಿದ ಸಿದ್ದರಾಮಯ್ಯ ಹೇಳಿದ್ದೇನು.?
ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎಂಬಂತೆ ಇದ್ದರು. ಆದರೆ ಇಷ್ಟು ದಿನದ ಬಳಿಕ ಮೌನ ಮುರಿದಿದ್ದಾರೆ. ಸ್ಟಿಂಗ್ ಆಪರೇಷನ್ನಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ಬಗ್ಗೆ ಸಿದ್ದರಾಮಯ್ಯ ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸದ್ಯ ಸಿದ್ದರಾಮಯ್ಯ ಅವರ ಹೇಳಿಕೆ ಕುತೂಹಲ ಮೂಡಿಸಿದ್ದು, ಪರೋಕ್ಷವಾಗಿ ಸ್ಟಿಂಗ್ ಆಪರೇಷನ್ ಬಗ್ಗೆ ತನಿಖೆಯಲ್ಲಿ ಹೊರಬರಬೇಕು ಎನ್ನುವ ಅರ್ಥದಲ್ಲಿ ಹೇಳಿರಬಹುದು ಎನ್ನಲಾಗುತ್ತಿದೆ.
ಕರ್ನಾಟಕ ರಾಜಕೀಯಕ್ಕೆ ಸ್ಟಿಂಗ್ ಮತ್ತು ರಹಸ್ಯ ಕ್ಯಾಮೆರಾ ರಾಜಕಾರಣ ಹೊಸದೇನಲ್ಲ. ಆದರೆ ಸ್ವತಃ ಮುಖ್ಯಮಂತ್ರಿಯವರೇ ತಮಗೆ ಮತ್ತು ತಮ್ಮ ಸಚಿವ ಸಂಪುಟಕ್ಕೆ ಇಂತಹದೊಂದು ಬೆದರಿಕೆ ಇದೆ ಎಂದು ಬಹಿರಂಗವಾಗಿ ಹೇಳಿರುವುದು ಆಡಳಿತ ಪಕ್ಷದಲ್ಲಿ ಒಂದು ರೀತಿಯ ಆತಂಕ ಮತ್ತು ಅಸುರಕ್ಷಿತ ಭಾವನೆಯನ್ನು ಸೃಷ್ಟಿಸಿದೆ. ಇದು ಸಾರ್ವಜನಿಕ ವಲಯದಲ್ಲೂ ರಾಜ್ಯದಲ್ಲಿ ಅಭಿವೃದ್ಧಿ ರಾಜಕಾರಣದ ಬದಲು ಬ್ಲ್ಯಾಕ್ಮೇಲ್ ಹಾಗೂ ಕುಟುಕು ಕಾರ್ಯಾಚರಣೆಗಳ ಕೆಟ್ಟ ಸಂಪ್ರದಾಯ ಮುನ್ನೆಲೆಗೆ ಬರುತ್ತಿದೆಯೇ? ಎಂಬ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ.
ಒಂದು ಕಾಲದಲ್ಲಿ ಪತ್ರಿಕೋದ್ಯಮದ ಅಸ್ತ್ರವಾಗಿದ್ದ ಸ್ಟಿಂಗ್ ಆಪರೇಷನ್ ಇಂದು ರಾಜಕೀಯ ಎದುರಾಳಿಗಳನ್ನು ಮುಗಿಸುವ, ಬ್ಲ್ಯಾಕ್ ಮೇಲ್ ಮಾಡುವ ಅಥವಾ ಸ್ವಯಂರಕ್ಷಣೆಯ ಗುರಾಣಿಗಳಾಗಿ ಬಳಕೆಯಾಗುತ್ತಿವೆ. ಇದು ಪ್ರಜಾಪ್ರಭುತ್ವದ ಮೇಲಾಗುತ್ತಿರುವ ದೌರ್ಜನ್ಯ. ಕಾಂಗ್ರೆಸ್ ನಾಯಕರು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಮೇಲೆ 'ಸುಪಾರಿ ರಾಜಕಾರಣ'ದ ಆರೋಪ ಹೊರಿಸುತ್ತಿದ್ದರೆ, ವಿರೋಧ ಪಕ್ಷಗಳು ಇದನ್ನು ಸರ್ಕಾರದ ಹಗರಣಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ 'ಡೈವರ್ಷನ್ ಟ್ಯಾಕ್ಟಿಕ್' ಎಂದು ಕರೆಯುತ್ತಿವೆ. ಆರೋಪಗಳ ಸರಣಿ ಏನೇ ಇರಲಿ, ಅಧಿಕಾರದ ಉನ್ನತ ಸ್ಥಾನದಲ್ಲಿರುವವರು ಸದಾ ಇಂತಹ ನಿಗೂಢ ಆತಂಕದಲ್ಲಿ ಕಾಲ ಕಳೆಯುವಂತಾಗಿರುವುದು ವ್ಯವಸ್ಥೆಯ ದೌರ್ಬಲ್ಯವನ್ನು ಎತ್ತಿ ತೋರಿಸುತ್ತದೆ.
ಸದ್ಯಕ್ಕೆ ಈ ಸ್ಟಿಂಗ್ ಆಪರೇಷನ್ ವಿವಾದ ಕೇವಲ ಆರೋಪ-ಪ್ರತ್ಯಾರೋಪಗಳ ಪೆನ್ ಡ್ರೈವ್ ಸಮರವಾಗಿ ಕಾಣಿಸುತ್ತಿದೆ. ಒಂದು ವೇಳೆ ಸಿಎಂ ಅಥವಾ ಶಾಸಕರು ಹೇಳಿದಂತೆ ಮುಂದಿನ ದಿನಗಳಲ್ಲಿ ನಿಜವಾಗಿಯೂ ವಿಡಿಯೋ ಅಥವಾ ಆಡಿಯೋ ದಾಖಲೆಗಳು ಹೊರಬಂದರೆ ರಾಜ್ಯ ರಾಜಕೀಯದಲ್ಲಿ ಮತ್ತೊಂದು ದೊಡ್ಡ ತಲ್ಲಣ ಸೃಷ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಇದೆಲ್ಲದರ ನಡುವ ಕಾಡುವ ವಿಷಯ ಎಂದರೆ ಈಗ ರಾಜ್ಯದಲ್ಲಿ ಬರ ಇದೆ. ಉದ್ಯೋಗ ಹಾಗೂ ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಇಂಥಹ ಪರಿಸ್ಥಿತಿ ಇರುವಾಗ ಆಡಳಿತ ಪಕ್ಷ ಹಾಗೂ ವಿಪಕ್ಷಗಳು ಇದರ ಬಗ್ಗೆ ಮಾತಾಡಬೇಕು. ಗಂಭೀರ ಚರ್ಚೆ ಮಾಡಿ ಪರಿಹಾರ ಕ್ರಮಗಳನ್ನು ಮಾಡಬೇಕು. ಆದರೆ ಅದನ್ನು ಬಿಟ್ಟು ರಾಜಕೀಯ ಪಕ್ಷಗಳು ಇಂತಹ ರಹಸ್ಯ ಕ್ಯಾಮೆರಾಗಳ ಜಟಾಪಟಿಯಲ್ಲಿ ಮುಳುಗಿರೋದು ವಿಪರ್ಯಾಸ.

