ದೆಹಲಿ ಜಂತರ್ ಮಂತರ್ ಮೈದಾನದಲ್ಲಿ ಇನ್ಮುಂದೆ ಪ್ರತಿಭಟನೆ ಮಾಡುವ ಹಾಗಿಲ್ಲ. ಇದನ್ನು ಅಧಿಕೃತ ಪ್ರತಿಭಟನಾ ತಾಣಗಳ ಪಟ್ಟಿಯಿಂದ ದೆಹಲಿ ಪೊಲೀಸರು ತೆಗೆದು ಹಾಕಿದ್ದಾರೆ.ಪ್ರತಿಭಟನೆ ಮತ್ತು ಧರಣಿಗಳನ್ನು ಆಯೋಜಿಸಲು ರಾಮಲೀಲಾ ಮೈದಾನ, ಬುರಾರಿ ಮೈದಾನ ಹಾಗೂ ಪೂರ್ವ ದೆಹಲಿಯ ಸಿಬಿಡಿ ಮೈದಾನವನ್ನು ಪರ್ಯಾಯ ಸ್ಥಳಗಳಾಗಿ ಪೊಲೀಸರು ಗುರುತಿಸಿದ್ದಾರೆ.ಕೇಂದ್ರ ಗೃಹ ಸಚಿವಾಲಯ ರಚಿಸಿದ್ದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಪೊಲೀಸರು ಈ ಪ್ರಕಟಣೆ ಹೊರಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜಂತರ್ ಮಂತರ್ ಮೈದಾನದಲ್ಲಿ ತೀವ್ರವಾದ ಪ್ರತಿಭಟನೆಗಳು ನಡೆದಿದ್ದವು. SIR ಪ್ರಕ್ರಿಯೆಯಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆಗಳು ನಡೆದಿವೆ. ಇದರಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಎಸ್ಎಫ್ ಐ, ಐಎಸ್ ಎ ಸೇರಿದಂತೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ಮತ್ತು ವಿರೋಧ ಪಕ್ಷಗಳ ಕಾರ್ಯಕರ್ತರು ಜಂತರ್ ಮಂತರ್ ಸುತ್ತಮುತ್ತ ಪ್ರತಿಭಟನೆ ನಡೆಸಿದ್ದರು.

ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳಗಳ ಪಟ್ಟಿಯಿಂದ ಕೈಬಿಟ್ಟಿರುವ ನಿರ್ಧಾರಕ್ಕೆ ರಾಜಕೀಯ ವಲಯ ಹಾಗೂ ನಾಗರಿಕ ಹಕ್ಕುಗಳ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿದೆ. ದೇಶದಲ್ಲಿ ಪ್ರತಿಭಟನೆ ನಡೆಸುವ ಹಕ್ಕು ಮತ್ತು ಅದಕ್ಕೆ ಸೂಕ್ತ ಸ್ಥಳಗಳನ್ನು ನಿಗದಿಪಡಿಸುವ ಅಧಿಕಾರದ ಕುರಿತು ಚರ್ಚೆ ಆರಂಭವಾಗಿದೆ. ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುವ ಅವಕಾಶವನ್ನು ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

 ದಶಕಗಳಿಂದ ಜಂತರ್ ಮಂತರ್ ಭಾರತದ ಪ್ರಜಾಪ್ರಭುತ್ವದಲ್ಲಿ ನಾಗರಿಕರು, ರೈತರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತುವ ಪ್ರಮುಖ ಸಾಂಕೇತಿಕ ವೇದಿಕೆಯಾಗಿತ್ತು. ಸಂಸತ್ ಭವನಕ್ಕೆ ಸಮೀಪದಲ್ಲಿದ್ದುದರಿಂದ ಪ್ರತಿಭಟನಾಕಾರರ ಧ್ವನಿ ನೇರವಾಗಿ ಸರ್ಕಾರದ ಗಮನಕ್ಕೆ ತಲುಪಲು ಇದು ಅನುಕೂಲಕರವಾಗಿತ್ತು.

ಜಂತರ್ ಮಂತರ್ ಅನ್ನು ಪ್ರತಿಭಟನಾ ಸ್ಥಳ ಪಟ್ಟಿಯಿಂದ ಕೈಬಿಡುವ ಸರ್ಕಾರದ ನಿರ್ಧಾರಕ್ಕೆ ಹಲವು ವಿರೋಧಗಳು ವ್ಯಕ್ತವಾಗುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಜೆಪಿ ಇದೊಂದು ಏಕಪಕ್ಷೀಯ ನಿರ್ಧಾರವಾಗಿದ್ದು ಇದನ್ನು ನಾನವು ಒಪ್ಪುವುದಿಲ್ಲ ಎಂದು ಪಕ್,ದ ಸಹ-ಸಂಯೋಜಕ ಸೌರವ್ ದಾಸ್ ಹೇಳಿದ್ದಾರೆ. ಜಂತರ್ ಮಂತರ್ ಭಾರತದ ಜನರಿಗೆ ಸೇರಿದ್ದು. ಗೃಹ ಸಚಿವಾಲಯವು ಭಾರತದ ಜನರೊಂದಿಗೆ ಸಮಾಲೋಚನೆ ನಡೆಸಿತೇ? ಸಂಬಂಧಿತ ಪಾಲುದಾರರೊಂದಿಗೆ ಸಮಾಲೋಚನೆ ನಡೆಸಲಾಯಿತೇ? ಅಥವಾ ಯಾವುದೇ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಲಾಯಿತೇ? ಇದ್ಯಾವುದನ್ನೂ ಮಾಡದೆ ಹೇಗೆ ಏಕಪಕ್ಷೀಯ ನಿರ್ಧಾರ ಕೈಗೊಂಡಿತು ಎಂದು ಅವರು ಪ್ರಶ್ನಿಸಿದ್ದಾರೆ.

ಇದೇ ವೇಳೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಇದನ್ನು ಬರೆದಿಟ್ಟುಕೊಳ್ಳಿ; ಜನರು ಜಂತರ್ ಮಂತರ್ ಅನ್ನು ಬಳಸುವ ಹಕ್ಕನ್ನು ಹೇಗೆ ರದ್ದುಗೊಳಿಸಲಾಗುತ್ತಿದೆಯೋ, ಹಾಗೆಯೇ ಪ್ರಧಾನಿಯವರು ಶೀಘ್ರದಲ್ಲೇ ಭಾರತದಲ್ಲಿ ಪ್ರಜಾಪ್ರಭುತ್ವವನ್ನೇ ರದ್ದುಗೊಳಿಸಲಿದ್ದಾರೆ. ಈ ಕ್ರಮವು ಆ ದಿಕ್ಕಿನಲ್ಲಿನ ಒಂದು ಹೆಜ್ಜೆಯಾಗಿದೆ ಎಂದು ದಾಸ್ ಎಚ್ಚರಿಸಿದರು.