ಸ್ಯಾಂಡಲ್ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಕಾಲಿಟ್ಟು ಬರೋಬ್ಬರಿ 30 ವರ್ಷಗಳಾಗಿವೆ. ಈ ಅದ್ಭುತ ಮೈಲಿಗಲ್ಲನ್ನು ಬಿಗ್ಬಾಸ್ನ ಜಾಲೀವುಡ್ ಸೆಟ್ನಲ್ಲಿ ಇಡೀ ತಂಡ ಸಡಗರದಿಂದ ಆಚರಿಸಿದೆ. ಅವರ ಸಿನಿ ಜರ್ನಿ ಅಷ್ಟು ಸುಲಭದಾಗಿರಲಿಲ್ಲ ಸಾಕಷ್ಟು ಏಳುಬೀಳುಗಳನ್ನು ಕಂಡು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಗಿದ್ದಾರೆ. ಇವರು ಇದುವರೆಗೆ 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ (ಮುಖ್ಯ ಪಾತ್ರಗಳು, ಅತಿಥಿ ಪಾತ್ರಗಳು ಹಾಗೂ ಡಬ್ಬಿಂಗ್ ಸೇರಿ) ನಟಿಸಿ, ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ.

ಕ್ಯಾಮೆರಾ ಮುಂದೆ ಮೊದಲ ಹೆಜ್ಜೆ ಮತ್ತು ಹಿಟ್ಗಳ ಹಾದಿ ನೋಡೋದಾದ್ರೆ... ಬಹಳಷ್ಟು ಜನ ಸುದೀಪ್ ನಟಿಸಿದ ಮೊದಲ ಸಿನಿಮಾ ‘ಸ್ಪರ್ಶ’ ಅಂದುಕೊಂಡಿದ್ದಾರೆ, ಆದರೆ ನಿಜವಾಗಿ ಅವರು ಮೊದಲು ಕ್ಯಾಮೆರಾ ಎದುರಿಸಿದ್ದು 28 ವರ್ಷಗಳ ಹಿಂದೆ, ‘ಬ್ರಹ್ಮ’ ಚಿತ್ರದ ಮೂಲಕ. ಆ ಬಳಿಕ ‘ತಾಯವ್ವ’ ಹಾಗೂ ‘ಓ ಕುಸುಮ ಬಾಲೆ’ ಚಿತ್ರಗಳಲ್ಲಿ ಅಭಿನಯಿಸಿದರೂ ಆದ್ರೆ ಯಾವು ಬಿಡುಗಡೆಯಾಗಲಿಲ್ಲ. ‘ಸ್ಪರ್ಶ’ ಮತ್ತು ‘ಹುಚ್ಚ’ ಸಿನಿಮಾಗಳು ಅವರಿಗೆ ದೊಡ್ಡ ಬ್ರೇಕ್ ನೀಡಿದವು.

‘ಹುಚ್ಚ’ ಚಿತ್ರದ ಅಭಿನಯಕ್ಕೆ ಫಿಲ್ಮ್ಫೇರ್ ಪ್ರಶಸ್ತಿ ಸಿಗುವುದರ ಜೊತೆಗೆ, ಅಭಿಮಾನಿಗಳು ಪ್ರೀತಿಯಿಂದ ಅವರನ್ನು ‘ಕಿಚ್ಚ’ ಎಂದು ಕರೆಯಲು ಶುರು ಮಾಡಿದರು. ನಂತರ ಬಂದ ‘ನಂದಿ’, ‘ಸ್ವಾತಿ ಮುತ್ತು’, ‘ಮೈ ಆಟೋಗ್ರಾಫ್’, ‘ಕೆಂಪೇಗೌಡ’, ‘ಈಗ’ ಮತ್ತು ‘ವಿಕ್ರಾಂತ್ ರೋಣ’ ಚಿತ್ರಗಳು ಅವರ ನಟನಾ ಕೌಶಲ್ಯಕ್ಕೆ ಸಾಕ್ಷಿಯಾದವು.

ನಿರ್ದೇಶನ ಮತ್ತು ಬಹುಭಾಷಾ ತಾರೆ
2006ರಲ್ಲಿ ‘ಮೈ ಆಟೋಗ್ರಾಫ್’ ಚಿತ್ರದ ಮೂಲಕ ನಿರ್ದೇಶಕರಾಗಿಯೂ ಸಕ್ಸಸ್ ಕಂಡ ಸುದೀಪ್, ಸ್ವಂತ ನಿರ್ಮಾಣ ಸಂಸ್ಥೆ 'ಕಿಚ್ಚ ಕ್ರಿಯೇಷನ್ಸ್' ಆರಂಭಿಸಿ 175 ದಿನಗಳ ಯಶಸ್ವಿ ಪ್ರದರ್ಶನ ಕಂಡರು. ಕನ್ನಡ ಮಾತ್ರವಲ್ಲದೆ ತೆಲುಗಿನಲ್ಲಿ ಈಗ, ಬಾಹುಬಲಿ, ಸೈರಾ, ಹಿಂದಿಯಲ್ಲಿ ಫೂಂಕ್, ರನ್, ದಬಾಂಗ್ 3 ಹಾಗೂ ತಮಿಳಿನಲ್ಲಿ ಪುಲಿ, ಮುಡಿಯದಾನ್ ದೊಡ್ಡ ಸಿನಿಮಾಗಳಲ್ಲೂ ಅಭಿನಯಿಸಿ ಸೌತ್ ಇಂಡಿಯಾದ ಪ್ರತಿಭಾವಂತ ನಟನಾಗಿ ಹೊರಹೊಮ್ಮಿದ್ದಾರೆ. ಈಗ ಸಿನಿಮಾವಂತೂ ಅವರಲ್ಲಿರುವ ಪ್ರತಿಭೆಗೆ ಕನ್ನಡಿ ಹಿಡಿದಂತಿತ್ತು.

ಬಿಗ್ಬಾಸ್ ಪಯಣ ಮತ್ತು ನಿರ್ಧಾರಗಳ ಹಗ್ಗಜಗ್ಗಾಟ
ಕನ್ನಡ ಬಿಗ್ಬಾಸ್ ಎಂದರೆ ಸುದೀಪ್, ಸುದೀಪ್ ಎಂದರೆ ಬಿಗ್ಬಾಸ್ ಎನ್ನುವಷ್ಟರ ಮಟ್ಟಿಗೆ ಶೋ ಬೆಳೆದಿದೆ. ಸೀಸನ್ 11ರ ಸಮಯದಲ್ಲಿ "ಇದೇ ನನ್ನ ಕೊನೆಯ ಸೀಸನ್" ಎಂದು ಸುದೀಪ್ ವಿದಾಯದ ಮಾತುಗಳನ್ನಾಡಿದಾಗ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು. ಶೋ ಹಿಂಭಾಗದ ಕೆಲವೊಂದು ಸನ್ನಿವೇಶಗಳು ಮತ್ತು ಶ್ರಮಕ್ಕೆ ತಕ್ಕ ಗೌರವ ಸಿಗುತ್ತಿಲ್ಲ ಎಂಬ ಬೇಸರ ಅವರಿಗಿತ್ತು. ಸೀಸನ್ ೧೧ರಲ್ಲಿ ತಮ್ಮ ತಾಯಿ ಆರೋಗ್ಯ ತೀರಾ ಹದಗೇಟಿರುವುದು ತಿಳಿದಿದ್ದರೂ ಸಹ ಶೋ ನಾ ಮುಂದುವರಿಸಿ ಮುಗಿಸಿಕೊಟ್ಟೆ ಅಲ್ಲಿಂದ ತಾಯಿಯನ್ನು ನೋಡಲು ಹೋದರು, ಅವರ ಆ ಡೆಡಿಕೇಷನ್'ಗೆ ಎಲ್ಲರು ಫಿದಾ ಆಗಿದ್ದರು.

ಇನ್ನು ಈ ವಿದಾಯದ ವಿಷಯಕ್ಕೆ ಬಿಗ್'ಬಾಸ್ ಪ್ರೇಕ್ಷಕರು ಹಾಗೂ ಅವರ ಅಭಿಮಾನಿಗಳಲ್ಲಿ ಎರಡು ರೀತಿಯ ಅಭಿಪ್ರಾಯ ವ್ಯಕ್ತವಾಗಿತ್ತು. ಪ್ರೇಕ್ಷಕರು "ಕೃಷ್ಣನಿಲ್ಲದ ಮಹಾಭಾರತ ಮತ್ತು ಸುದೀಪ್ ಇಲ್ಲದ ಬಿಗ್ ಬಾಸ್ ಎರಡೂ ಒಂದೇ" ಎಂದು ಹೇಳುತ್ತಿದ್ದರು. ಅವರ ವಿಶಿಷ್ಟ ನಿರೂಪಣಾ ಶೈಲಿ, ಶನಿವಾರದ 'ವಾರದ ಕಥೆ ಕಿಚ್ಚನ ಜೊತೆ' ಪಂಚಾಯಿತಿ ಪ್ರದರ್ಶನದ ಮೌಲ್ಯವನ್ನು ಯಾರೂ ತುಂಬಲು ಸಾಧ್ಯವಿಲ್ಲ ಎಂದು ಕನ್ನಡಿಗರು ಕಮೆಂಟ್ ಮಾಡಿದರು. ಇನ್ನೊಂದೆಡೆ, ಸುದೀಪ್ ಅವರ ಅಭಿಮಾನಿಗಳಲ್ಲಿ ಕೆಲವರು ಈ ನಿರ್ಧಾರದಿಂದ ಖುಷಿ ಪಟ್ಟರು.
ಇತ್ತೀಚಿನ ಸೀಸನ್ಗಳಲ್ಲಿ ಸ್ಪರ್ಧಿಗಳ ಗುಣಮಟ್ಟ ಕುಸಿಯುತ್ತಿರುವುದು ಮತ್ತು ಅನಗತ್ಯ ವಿವಾದಗಳಿಂದ ಸುದೀಪ್ ಅವರಿಗೆ ಬೇಸರವಾಗುತ್ತಿತ್ತು. ಹಾಗಾಗಿ, ಬಿಗ್ ಬಾಸ್ಗೆ ನೀಡುವ ಸಮಯವನ್ನು ಅವರು ತಮ್ಮ ಮುಂಬರುವ ಸಿನಿಮಾಗಳಿಗೆ ನೀಡಬಹುದು ಎಂದು ಅಭಿಮಾನಿಗಳು ಈ ನಿರ್ಧಾರವನ್ನು ಬೆಂಬಲಿಸಿದರು. ಈ ಎಲ್ಲ ಬೆಳವಣಿಗೆಯ ನಂತರ ಆಯೋಜಕರ ಜೊತೆಗಿನ ಮಾತುಕತೆ ಬಳಿಕ ಮನಸ್ಸು ಬದಲಿಸಿದ ಅವರು ಮತ್ತೆ ಸೀಸನ್ 12 ಹಾಗೂ ಸೀಸನ್ 13ರ ಯಶಸ್ವಿ ನಿರೂಪಕರಾಗಿ ಮುಂದುವರಿದಿದ್ದಾರೆ.

ಕೆಲ ವರ್ಷಗಳಿಂದ ಬಂದಿರುವ ಸಿನಿಮಾಗಳು ಕಿಚ್ಚನಿಗೆ ದೊಡ್ಡ ಮಟ್ಟದ ಯಶಸ್ಸು ತಂದು ಕೊಟ್ಟಿಲ್ಲ ಎನ್ನುವ ಬೇಸರ ಅವರ ಅಭಿಮಾನಿಗಳಲ್ಲಿ ಇದೆ. ಇನ್ನು ಸುದೀಪ್ ಸಿನಿಮಾಗಳಿಗಿಂತ ಬಿಗ್ಬಾಸ್ಗೇ ಹೆಚ್ಚು ಸಮಯ ನೀಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಎಲ್ಲಿ ಅವರು ಬಿಗ್ಬಾಸ್ಗೆ ಸೀಮಿತವಾಗಿ ಬಿಡುತ್ತಾರೋ ಅನ್ನೋ ಭೀತಿ ಅವರ ಅಭಿಮಾನಿಗಳಲ್ಲಿ ಇರುವುದಂತೂ ಸತ್ಯ.

ಈ ಮಾತುಗಳ ನಡುವೆ ಅವರ ಕೈಯಲ್ಲಿ ಈಗ ಮೆಗಾ ಸಿನಿಮಾಗಳಿವೆ. ವಿಜಯನಗರದ ವೈಭವ ಸಾರುವ 'ಶ್ರೀ ಕೃಷ್ಣದೇವರಾಯ' ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಮೂರು ವಿಭಿನ್ನ ಪಾತ್ರಗಳಿರುವ ಬೃಹತ್ ಕ್ಯಾನ್ವಾಸ್ನ 'ಬಿಲ್ಲ ರಂಗ ಬಾಷಾ' ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರಗಳು ಬೆಳ್ಳಿಪರದೆಗೆ ಬಂದಾಗ ಕಿಚ್ಚನ ಹವಾ ಮತ್ತೆ ಜೋರಾಗುವುದರಲ್ಲಿ ಅನುಮಾನವಿಲ್ಲ ಅನ್ನೋ ಅಭಿಮಾನಿಗಳು ಇನ್ನೊಂದು ಕಡೆ.




