ಕೇದಾರನಾಥ ಯಾತ್ರೆಯ ಮಾರ್ಗದಲ್ಲಿ ಸಂಭವಿಸಿದ ಏಕಾಏಕಿ ಭೂಕುಸಿತದಿಂದಾಗಿ ಐದು ವರ್ಷದ ಬಾಲಕ ಮೃತಪಟ್ಟಿದ್ದು, ಸುಮಾರು 1,500 ಯಾತ್ರಿಕರನ್ನು ರಕ್ಷಣಾ ತಂಡಗಳು ಸುರಕ್ಷಿತವಾಗಿ ಸ್ಥಳಾಂತರಿಸಿವೆ.

ಭಾನುವಾರ ತಡರಾತ್ರಿ ಗೌರಿಕುಂಡದಿಂದ ಸುಮಾರು 3 ಕಿಲೋಮೀಟರ್ ದೂರದಲ್ಲಿರುವ ಚಿರ್ಬಾಸಾ ಸಮೀಪದ ಕೇದಾರನಾಥ ಮಾರ್ಗದಲ್ಲಿ ಏಕಾಏಕಿ ಭೂಕುಸಿತ ಸಂಭವಿಸಿದೆ. ಬೆಟ್ಟದಿಂದ ಬಂಡೆಗಳು ಹಾಗೂ ಶಿಲಾಖಂಡಗಳ ರಾಶಿ ಕುಸಿದುಬಿದ್ದ ಪರಿಣಾಮ ಯಾತ್ರಿಕರಲ್ಲಿ ಆತಂಕ ಉಂಟಾಯಿತು.
ಈ ಘಟನೆಯಲ್ಲಿ ಉತ್ತರ ಪ್ರದೇಶದ ಇಟಾ ಮೂಲದ ಐದು ವರ್ಷದ ಬಾಲಕ ಯಶ್ ಮೇಲೆ ಕಲ್ಲು ಬಡಿದು ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಭೂಕುಸಿತದ ಪರಿಣಾಮ ಹಲವು ಯಾತ್ರಿಕರು ಮಾರ್ಗದಲ್ಲಿ ಸಿಲುಕಿಕೊಂಡಿದ್ದರು. ಮಾಹಿತಿ ದೊರೆತ ತಕ್ಷಣ ಸಬ್ಇನ್ಸ್ಪೆಕ್ಟರ್ ಆಶಿಶ್ ಡಿಮ್ರಿ ನೇತೃತ್ವದ ರಾಜ್ಯ ವಿಪತ್ತು ನಿರ್ವಹಣಾ ಪಡೆಗಳ ಜಂಟಿ ತಂಡ ಸ್ಥಳಕ್ಕೆ ಧಾವಿಸಿತು. ರಕ್ಷಣಾ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ಅಪಾಯದ ಪ್ರದೇಶದಲ್ಲಿ ಸಿಲುಕಿದ್ದ ಸುಮಾರು 1,500 ಯಾತ್ರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದರು.

ಯಾತ್ರಿಕರ ಸುರಕ್ಷತೆಗೆ ಆದ್ಯತೆ ನೀಡಿದ ರಕ್ಷಣಾ ತಂಡಗಳು ಭೂಕುಸಿತ ಸಂಭವಿಸಿದ ಪ್ರದೇಶವನ್ನು ದಾಟುವ ವೇಳೆ ತೀವ್ರ ಎಚ್ಚರಿಕೆ ವಹಿಸಿ, ಯಾತ್ರಿಕರನ್ನು ಸುರಕ್ಷಿತವಾಗಿ ಗೌರಿಕುಂಡದತ್ತ ಕರೆತಂದಿವೆ. ಭೂಕುಸಿತದ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರಾ ಮಾರ್ಗದಲ್ಲಿ ರಕ್ಷಣಾ ಕಾರ್ಯಾಚರಣೆ ಮತ್ತು ಸುರಕ್ಷತಾ ಕ್ರಮಗಳನ್ನು ಮುಂದುವರಿಸಲಾಗಿದೆ.