ಮೂಡುಬಿದಿರೆಯ ಆಳ್ವಾಸ್ ಸೆಂಟ್ರಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈ ಅವರು ಕೇವಲ 15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ ನೀಡಿ, 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡ ನಿರ್ವಹಣೆ ಹಾಗೂ ಸಮಯ ನಿರ್ವಹಣೆ ಕುರಿತು ಮಾರ್ಗದರ್ಶನ ನೀಡಿದ್ದಾರೆ. ಅವರ ಈ ವಿಶಿಷ್ಟ ಪ್ರಯತ್ನವನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಗುರುತಿಸಿದೆ.



6ನೇ ತರಗತಿಯಿಂದಲೇ ಸೈಕಾಲಜಿ ಬಗ್ಗೆ ಆಸಕ್ತಿ
ವಿಷ್ಣುಪ್ರಿಯಾ ಅವರಿಗೆ 6ನೇ ತರಗತಿಯಲ್ಲಿದ್ದಾಗ ಆಪ್ತಮಿತ್ರ, ಆಪ್ತ ರಕ್ಷಕ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ನಟನೆಯನ್ನು ನೋಡಿ ಮಾನಸಿಕ ಆರೋಗ್ಯ, ಕೌನ್ಸೆಲಿಂಗ್ ಹಾಗೂ ಸೈಕಾಲಜಿ ವಿಷಯಗಳ ಬಗ್ಗೆ ಆಸಕ್ತಿ ಬೆಳೆದಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ‘ಇಂಡಿಯನ್ ಕೌನ್ಸೆಲಿಂಗ್ ಸರ್ವಿಸಸ್’ ಮೂಲಕ ವಿವಿಧ ಆನ್ಲೈನ್ ಕೋರ್ಸ್ಗಳನ್ನು ಪೂರ್ಣಗೊಳಿಸುವ ಮೂಲಕ ಈ ಕ್ಷೇತ್ರದ ಕುರಿತು ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡಿದ್ದಾರೆ.
ತಾವು ಕಲಿತ ವಿಷಯಗಳನ್ನು ಕೇವಲ ಪುಸ್ತಕ ಹಾಗೂ ತರಗತಿಗೆ ಸೀಮಿತಗೊಳಿಸದೆ, ಪರೀಕ್ಷೆಯ ಸಮಯದಲ್ಲಿ ಆತಂಕ ಎದುರಿಸುವ ತಮ್ಮ ಸಹಪಾಠಿಗಳಿಗೂ ತಲುಪಿಸಬೇಕು ಎಂಬ ಉದ್ದೇಶದಿಂದ ಅವರು ಜಾಗೃತಿ ಅಭಿಯಾನ ಕೈಗೊಂಡಿದ್ದಾರೆ. ಆಗಸ್ಟ್ 24ರಿಂದ ಸೆಪ್ಟೆಂಬರ್ 11ರವರೆಗೆ ನಡೆದ ಅಭಿಯಾನದ ಸಂದರ್ಭದಲ್ಲಿ ವಿಷ್ಣುಪ್ರಿಯಾ ಅವರು ಕರ್ನಾಟಕದ ಹಾಸನ, ಕೊಡಗು, ಬೆಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ 51 ಶಾಲೆಗಳಿಗೆ ಭೇಟಿ ನೀಡಿದ್ದಾರೆ. 15 ದಿನಗಳ ಅವಧಿಯಲ್ಲಿ ವಿಷ್ಣುಪ್ರಿಯಾ ಅವರು 4,500ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಲುಪಿ, ಪರೀಕ್ಷೆಯ ಭಯವನ್ನು ಕಡಿಮೆ ಮಾಡಿಕೊಳ್ಳಲು ಹಾಗೂ ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಲು ಅಗತ್ಯವಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಪ್ರತಿ ಶಾಲೆಯಲ್ಲೂ ಸುಮಾರು ಒಂದು ಗಂಟೆಯ ಕಾರ್ಯಾಗಾರ ನಡೆಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಒತ್ತಡವನ್ನು ಹೇಗೆ ನಿರ್ವಹಿಸಬೇಕು, ಸಮಯವನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ, ಸುಲಭ ಅಧ್ಯಯನ ತಂತ್ರಗಳು ಯಾವುವು ಹಾಗೂ ಪರೀಕ್ಷೆಗೆ ವೈಜ್ಞಾನಿಕವಾಗಿ ಸಿದ್ಧರಾಗುವ ವಿಧಾನಗಳ ಕುರಿತು ಸರಳವಾಗಿ ವಿವರಿಸಿದ್ದಾರೆ.
‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಮಾನ್ಯತೆ
ವಿಷ್ಣುಪ್ರಿಯಾ ಶೈಕ್ಷಣಿಕ ಹಾಗೂ ಸಮಾಜಮುಖಿ ಅಭಿಯಾನವನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ ಸಂಸ್ಥೆ ದಾಖಲೆಯಾಗಿ ಗುರುತಿಸಿದೆ. ಅಕ್ಟೋಬರ್ 1ರಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರ ಉಪಸ್ಥಿತಿಯಲ್ಲಿ ವಿಶ್ವ ದಾಖಲೆಯ ಅಧಿಕೃತ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಗುವುದು.

ವಿಷ್ಣುಪ್ರಿಯಾ ಪ್ರತಿಭೆ ಇಷ್ಟಕ್ಕೆ ಮುಗಿಯಲಿಲ್ಲ. ಸಂಗೀತ, ನೃತ್ಯ ಕ್ಷೇತ್ರದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ತಮ್ಮ ಪ್ರತಿಭೆ ಮತ್ತು ಆಸಕ್ತಿಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ‘ಸ್ವರಸಾವರಿ’ ಸಂಸ್ಥೆಯ ಸ್ಥಾಪಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇಷ್ಟೇ ಅಲ್ಲದೇ, Pride of india 2024ರಲ್ಲಿ ಭಾಗವಹಿಸಿ ಮಿಸ್ ಟೀನ್ ಇಂಡಿಯಾ ಎಂಬ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಮ್ಮ ವಿಭಿನ್ನ ಪ್ರತಿಭೆಗಳನ್ನು ಅನಾವರಣಗೊಳಿಸಿರುವ ಅವರು, ವಿಶ್ವ ದಾಖಲೆಯೊಂದನ್ನೂ ನಿರ್ಮಿಸಿರುವುದು ವಿಶೇಷ.
ಶಿಕ್ಷಣದ ಜೊತೆಗೆ ವೃತ್ತಿಪರ ಕ್ಷೇತ್ರಗಳಲ್ಲೂ ಆಸಕ್ತಿ ಹೊಂದಿರುವ ವಿಷ್ಣುಪ್ರಯಾ ಪೈ, LLB ಹಾಗೂ CA ಶಿಕ್ಷಣದ ಸಂಯೋಜನೆಯ ಮೂಲಕ ಕಾನೂನು ಮತ್ತು ಹಣಕಾಸು ಕ್ಷೇತ್ರಗಳಲ್ಲೂ ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಗುರಿ ಹೊಂದಿದ್ದಾರೆ.
ಕಲೆ, ಶಿಕ್ಷಣ, ಉದ್ಯಮಶೀಲತೆ ಮತ್ತು ಯುವಜನರನ್ನು ಪ್ರೇರೇಪಿಸುವ ಚಟುವಟಿಕೆಗಳನ್ನು ಒಟ್ಟಿಗೆ ಸಾಗಿಸುತ್ತಿರುವ ಈ 15ರ ಬಾಲಕಿ, ಇಂದಿನ ಯುವ ಪೀಳಿಗೆಗೆ ಬಹುಮುಖ ಪ್ರತಿಭೆಯ ಹೊಸ ಮಾದರಿಯಾಗಿ ಗಮನ ಸೆಳೆಯುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲೇ ತನ್ನ ಸಹಪಾಠಿಗಳ ಪರೀಕ್ಷಾ ಆತಂಕ ನಿವಾರಣೆಗೆ ಕೈಗೊಂಡಿರುವ ವಿಷ್ಣುಪ್ರಿಯಾ ಅವರ ಈ ವಿಶಿಷ್ಟ ಪ್ರಯತ್ನಕ್ಕೆ ವಿವಿಧೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.





