ಸೋಮವಾರ ಬೆಳಗ್ಗೆ ದಲಾಲ್ ಸ್ಟ್ರೀಟ್‌ನಲ್ಲಿ ಕೆಂಪು ಬಣ್ಣವೇ ರಾರಾಜಿಸಿತು. ಸೋಮವಾರ ಬೆಳಗ್ಗೆ ಷೇರು ಮಾರುಕಟ್ಟೆ ಆರಂಭವಾಗುತ್ತಿದ್ದಂತೆ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ಕುಸಿತ ಕಂಡವು. ಸೆನ್ಸೆಕ್ಸ್ ಒಂದು ಹಂತದಲ್ಲಿ 1,000 ಅಂಕಗಳಿಗೂ ಹೆಚ್ಚು ಕುಸಿದರೆ, ನಿಫ್ಟಿ 50 22,850ರ ಮಟ್ಟಕ್ಕಿಂತ ಕೆಳಗೆ ಜಾರಿತು.

ಬೆಳಗ್ಗೆ 10.40ರ ವೇಳೆಗೆ ಸೆನ್ಸೆಕ್ಸ್ 986 ಅಂಕಗಳಷ್ಟು ಕುಸಿದು 72,909ರ ಸಮೀಪದಲ್ಲಿತ್ತು. ನಿಫ್ಟಿ 305 ಅಂಕಗಳಷ್ಟು ಇಳಿದು 22,835ರ ಮಟ್ಟಕ್ಕೆ ಬಂದಿತ್ತು. ಆ ವೇಳೆಗೆ ಬಿಎಸ್‌ಇಯಲ್ಲಿ ಪಟ್ಟಿ ಮಾಡಿರುವ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು ₹6 ಲಕ್ಷ ಕೋಟಿ ಅಳಿಸಿಹೋಗಿತ್ತು. ಸೆನ್ಸೆಕ್ಸ್‌ನ  30 ಷೇರುಗಳು ನಷ್ಟದಲ್ಲಿದ್ದವು.

ಏಕೆ ಈ ಕುಸಿತ?

ಒಂದು ಕಾರಣ ಮಾತ್ರವಲ್ಲ.
ಅಮೆರಿಕ–ಇರಾನ್ ಸಂಘರ್ಷದ ಹಿನ್ನೆಲೆಯಲ್ಲಿ ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತೆ ಏರಿದೆ.

ಬ್ರೆಂಟ್ ಕ್ರೂಡ್ ಬ್ಯಾರೆಲ್‌ಗೆ ಸುಮಾರು $106.5–$106.7 ಕ್ಕೆ ಏರಿದೆ. ಭಾರತ ವಿಶ್ವದ ಪ್ರಮುಖ ಕಚ್ಚಾ ತೈಲ ಆಮದುದಾರ ರಾಷ್ಟ್ರವಾಗಿರುವುದರಿಂದ ತೈಲದ ಬೆಲೆ ಏರಿಕೆ ದೇಶದ ಆಮದು ವೆಚ್ಚ, ಹಣದುಬ್ಬರ ಮತ್ತು ಕಂಪನಿಗಳ ಲಾಭದ ಮೇಲೆ ಒತ್ತಡ ಉಂಟುಮಾಡುವ ಸಾಧ್ಯತೆ ಇದೆ.

ಇದರ ಜೊತೆಗೆ ಅಮೆರಿಕದ ಬಾಂಡ್‌ಗಳ ಯೀಲ್ಡ್ ಏರಿಕೆ, ರೂಪಾಯಿ ಮೇಲಿನ ಒತ್ತಡ, ವಿದೇಶಿ ಹೂಡಿಕೆದಾರರ ನಿರಂತರ ಮಾರಾಟ ಮತ್ತು ಜಾಗತಿಕ ಅನಿಶ್ಚಿತತೆ—ಇವೆಲ್ಲವೂ ಮಾರುಕಟ್ಟೆಯ ಆತಂಕವನ್ನು ಹೆಚ್ಚಿಸಿವೆ.

ಮಾರುಕಟ್ಟೆಯ ಏರಿಳಿತವನ್ನು ಅಳೆಯುವ ಇಂಡಿಯ ವಿಕ್ಸ್‌ ಕೂಡ ಸೋಮವಾರ ಸುಮಾರು 12% ಏರಿಕೆಯಾಗಿದ್ದು, ಹೂಡಿಕೆದಾರರ ಆತಂಕ ಹೆಚ್ಚಿರುವುದನ್ನು ಸೂಚಿಸುತ್ತದೆ.

ಇದು ಇಂದಿನ ಕುಸಿತ ಮಾತ್ರವಲ್ಲ…

ಇಂದಿನ ಕುಸಿತವನ್ನು ಪ್ರತ್ಯೇಕವಾಗಿ ನೋಡಿದರೆ ಚಿತ್ರ ಸಂಪೂರ್ಣವಾಗುವುದಿಲ್ಲ. ಭಾರತೀಯ ಷೇರು ಮಾರುಕಟ್ಟೆ ಈಗಾಗಲೇ ಸತತ ಏಳು ವಾರಗಳಿಂದ ಕುಸಿತದ ಹಾದಿಯಲ್ಲಿದೆ.

ಸೆಪ್ಟೆಂಬರ್ 25ರಂದು ಮುಕ್ತಾಯಗೊಂಡ ವಾರದಲ್ಲಿ ನಿಫ್ಟಿ 50 ಸುಮಾರು 0.9% ಮತ್ತು ಸೆನ್ಸೆಕ್ಸ್ ಸುಮಾರು 0.5% ಕುಸಿದಿತ್ತು. ಇದು ಎರಡೂ ಸೂಚ್ಯಂಕಗಳ ಸತತ ಏಳನೇ ವಾರದ ಕುಸಿತವಾಗಿತ್ತು. ಇದಕ್ಕೂ ಮುನ್ನ ಸೆಪ್ಟೆಂಬರ್ 24ರಂದು ಮಾರುಕಟ್ಟೆಯಲ್ಲಿ ಮತ್ತೊಂದು ದೊಡ್ಡ ಹೊಡೆತ ಕಂಡುಬಂದಿತ್ತು. ಅಂದು ಸೆನ್ಸೆಕ್ಸ್ 1,247.71 ಅಂಕಗಳು ಅಥವಾ 1.67% ಕುಸಿದು 73,580.54ಕ್ಕೆ ತಲುಪಿತ್ತು. ನಿಫ್ಟಿ 383.70 ಅಂಕಗಳು ಅಥವಾ 1.64% ಕುಸಿದು 23,063.10ಕ್ಕೆ ಬಂದಿತ್ತು. ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಷೇರುಗಳಲ್ಲೂ ಮಾರಾಟದ ಒತ್ತಡ ಹೆಚ್ಚಾಗಿತ್ತು. ಅಂದು ಇಂಡಿಯ ವಿಕ್ಸ್‌ ಕೂಡ 22.76% ಏರಿಕೆಯಾಗಿತ್ತು.

ಅಂದರೆ ಕಳೆದ ಹಲವು ದಿನಗಳಿಂದ ಮಾರುಕಟ್ಟೆ ನಿಧಾನವಾಗಿ ದುರ್ಬಲವಾಗುತ್ತಲೇ ಬಂದಿತ್ತು. ಈಗ ತೈಲದ ಬೆಲೆ ಮತ್ತೆ ಏರಿಕೆ, ಅಮೆರಿಕ–ಇರಾನ್ ಸಂಘರ್ಷದ ಅನಿಶ್ಚಿತತೆ ಮತ್ತು ಜಾಗತಿಕ ಬಾಂಡ್ ಯೀಲ್ಡ್‌ಗಳ ಒತ್ತಡ—ಈ ಎಲ್ಲವೂ ಒಂದೇ ಸಮಯದಲ್ಲಿ ಸೇರಿಕೊಂಡಿವೆ. ಇದರಿಂದಾಗಿಯೇ ಸೋಮವಾರದ ಕುಸಿತ ಇನ್ನಷ್ಟು ತೀವ್ರವಾಗಿ ಕಾಣಿಸಿಕೊಂಡಿದೆ.

ಮಾರುಕಟ್ಟೆ ಕೆಂಪಾದರೆ… ಸಾಮಾಜಿಕ ಜಾಲತಾಣ ಕುದಿಯಿತು!

ಸೆನ್ಸೆಕ್ಸ್–ನಿಫ್ಟಿ ಕುಸಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರದ ಬಗ್ಗೆ ಆಕ್ರೋಶ ವ್ಯಕ್ತವಾಯಿತು. ಎಕ್ಸ್‌, ಇನ್‌ಸ್ಟಾಗ್ರಾಮ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೆಕ್ಸ್–ನಿಫ್ಟಿ ಕುಸಿತದ ಬಗ್ಗೆ ಮೀಮ್ಸ್, ರೀಲ್ಸ್, ವ್ಯಂಗ್ಯಚಿತ್ರಗಳು ಮತ್ತು ರಾಜಕೀಯ ಟೀಕೆಗಳು ಹರಿದಾಡತೊಡಗಿವೆ.

“₹6,000,000,000,000” ಎಂಬ 6 ಟ್ರಿಲಿಯನ್ ರೂಪಾಯಿ ಅಂಕಿಯೇ ಸಾಮಾಜಿಕ ಮಾಧ್ಯಮದ ಚರ್ಚೆಯ ಪ್ರಮುಖ ಕೇಂದ್ರವಾಗಿದೆ.

ಕೆಲವರು ಇದನ್ನು ಹೂಡಿಕೆದಾರರ ಆತಂಕದಿಂದ ನೋಡಿದರೆ, ಇನ್ನೂ ಕೆಲವರು ಸರ್ಕಾರದ ಆರ್ಥಿಕ ನೀತಿಗಳು, ಮಾರುಕಟ್ಟೆಯ ನಿರಂತರ ಕುಸಿತ, ವಿದೇಶಿ ಹೂಡಿಕೆದಾರರ ನಿರ್ಗಮನ ಮತ್ತು ಸಾಮಾನ್ಯ ಹೂಡಿಕೆದಾರರ ಪರಿಸ್ಥಿತಿಯನ್ನು ಪ್ರಶ್ನಿಸಿ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆಯ ಗ್ರಾಫ್ ಕೆಳಗೆ ಇಳಿಯುತ್ತಿದ್ದಂತೆ ಮೀಮ್‌ಗಳ ಗ್ರಾಫ್ ಮಾತ್ರ ಮೇಲಕ್ಕೆ ಹೋಗುತ್ತಿದೆ! ದೆಡೆ ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೊ ನೋಡುತ್ತಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಮಾಧ್ಯಮ ಬಳಕೆದಾರರು ಸೆನ್ಸೆಕ್ಸ್ ಮತ್ತು ನಿಫ್ಟಿಯ ಕೆಂಪು ಬಣ್ಣವನ್ನು ಮೀಮ್‌ಗಳಾಗಿ ಪರಿವರ್ತಿಸುತ್ತಿದ್ದಾರೆ.

ಎಕ್ಸ್‌ ಬಳಕೆದಾರ ಅಮರನಾಥ್‌ ಶಿವಶಂಕರ್‍‌ ಅವರು, ' ಪ್ರಧಾನಿ ಮಾರುಕಟ್ಟೆಗಳ ಬಗ್ಗೆ ಮಾತನಾಡುವುದಿಲ್ಲ, ಹಣಕಾಸು ಸಚಿವರೂ ಅಸಂಬದ್ಧವಾಗಿ ಮಾತನಾಡುತ್ತಾರೆ, ಆರ್‌ಬಿಐ ಮುಖ್ಯಸ್ಥರು, ಸೆಬಿ ಮುಖ್ಯಸ್ಥರು ಮಾತನಾಡುವುದಿಲ್ಲ ಮತ್ತು ಜೋಕರ್‌ಗಳು ಅಲಿಯಾಸ್ ಮಂತ್ರಿಗಳು 2047 ಅಮೃತಕಲ್ ಬಗ್ಗೆ ಮಾತನಾಡುತ್ತಾರೆ.

ದೇಶದಲ್ಲಿ ಎಲ್ಲವೂ ತಪ್ಪಾಗಿದೆ ಎಂದು ಹೇಳುತ್ತಾರೆ. ಆದರೆ ನಾವು ಹೂಡಿಕೆದಾರರು ಅಲ್ಪಸಂಖ್ಯಾತರು, ಮತ ಬ್ಯಾಂಕ್ ಅಲ್ಲ, ಉಚಿತ ಸೌಲಭ್ಯಗಳನ್ನು ಕೇಳುವುದಿಲ್ಲ ಮತ್ತು ಅದಕ್ಕಾಗಿ ನಮಗೆ ಇಂತಹ ಉಪಚಾರ ಸಿಗುತ್ತೆ" 
ಎಂದು ಟ್ವೀಟ್ ಮಾಡಿದ್ದಾರೆ. 


ಮೊಹಮ್ಮದ್ ಫ್ಯೂಚರ್‍‌ವಾಲ ಎಂಬ ಬಳಕೆದಾರರು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸೆನೆಕ್ಸ್‌ ಗ್ರಾಫ್‌ ಅನ್ನು ತಲೆಕೆಳಗಾಗಿ ಪ್ರಕಟಿಸಿದ್ದು, "7.8% GDP ಘೋಷಣೆಯ ನಂತರ ಆ ಭಕ್ತರು ಷೇರು ಮಾರುಕಟ್ಟೆ ಚಾರ್ಟ್ ಅನ್ನು ಹೀಗೆ ನೋಡುತ್ತಾರೆ " ಎಂದು ಬರೆದಿದ್ದಾರೆ. 


ಕ್ರಿಪ್ಟೋವಾಲಾ ಎಂಬುವವರು ವಿಡಿಯೋವೊಂದನ್ನು ಪ್ರಕಟಿಸಿದ್ದು, ಇದರಲ್ಲಿ ಷೇರು ಮಾರುಕಟ್ಟೆಯಲ್ಲಿ ಕುಸಿತ ಉಂಟಾಗುತ್ತಿರುವುದಕ್ಕೆ ಕಾರಣ ನೀಡಿದ್ದಾರೆ, ಭಾರತದ ಮೇಲೆ ಎಂತಹ ಪರಿಣಾಮ ಬೀರಲಿದೆ ಎಂಬುದನ್ನು ವಿವರಿಸಿದ್ದಾರೆ. 

ಜೆಮ್ಸ್ ಆಫ್‌ ಬಿಜೆಪಿ ಹೆಸರಿನ ಖಾತೆಯು, ಷೇರು ಮಾರುಕಟ್ಟೆಯಲ್ಲಿ ಸಂಪೂರ್ಣ ಅವ್ಯವಸ್ಥೆ. 25% ಕ್ಕಿಂತ ಹೆಚ್ಚಿನ ಬೆಳವಣಿಗೆ ಹೊಂದಿದ್ದ ಬಂಡವಾಳ ಹೂಡಿಕೆಗಳು ಸಹ ನಕಾರಾತ್ಮಕವಾಗಿ ಮಾರ್ಪಟ್ಟಿವೆ.

ನಮ್ಮ ನೆರೆಯ ರಾಷ್ಟ್ರಗಳು ಹೆಚ್ಚು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಗಮನಿಸಿದರೆ, ಸರ್ಕಾರವು ತನ್ನ ಕಳಪೆ ಕಾರ್ಯಕ್ಷಮತೆಗಾಗಿ 'ಜಾಗತಿಕ ಬಿಕ್ಕಟ್ಟಿನ' ಹಿಂದೆ ಎಷ್ಟು ಕಾಲ ಅಡಗಿಕೊಳ್ಳುತ್ತದೆ ನೋಡಬೇಕಿದೆ' ಎಂದು ಟೀಕಿಸಿದೆ. 

ವಾರದ ಮೊದಲ ದಿನವೇ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಆಘಾತ ನೀಡಿದ್ದು, ಮಂಗಳವಾರದ ಮಾರುಕಟ್ಟೆಯನ್ನು ಆತಂಕದಿಂದ ಎದುರು ನೋಡುವಂತೆ ಮಾಡಿದೆ.