ಪ್ರತಿಭಟನಾ ಸಂಬಂಧ ಸೌರವ್ ದಾಸ್ ಅವರು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ದೆಹಲಿ ಪೊಲೀಸರಿಗೆ ಔಪಚಾರಿಕ ಪತ್ರ ನೀಡಿ ಮಾಹಿತಿ ರವಾನೆ ಮಾಡಿದ್ದಾರೆ. ದೇಶಾದ್ಯಂತ ಯುವಜನರು ಮತ್ತು ವಿದ್ಯಾರ್ಥಿ ಸಂಘಟನೆಗಳು ಈ ಪ್ರತಿಭಟನೆಯಲ್ಲಿ ಭಾರಿ ಸಂಖ್ಯೆಯಲ್ಲಿ ಭಾಗವಹಿಸಲಿದ್ದು ಶಾಂತಿ-ಸುವ್ಯವಸ್ಥೆ ಮತ್ತು ಸೂಕ್ತ ಸಂಚಾರ ವ್ಯವಸ್ಥೆ ಕಲ್ಪಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಮುಂದುವರೆದು ಮಾತನಾಡಿದ ಅವರು ಮತದಾರರ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಮೂಲಕ ಬಿಜೆಪಿಗೆ ಚುನಾವಣಾ ಆಯೋಗ ಲಾಭ ಮಾಡಿಕೊಡುತ್ತಿದೆ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘದ ಮುಖಂಡರು ಆರೋಪ ಮಾಡಿದ್ದಾರೆ. ಅವರು ಕೂಡಾ ಈ ಹೋರಾಟಕ್ಕೆ ಪೂರ್ಣ ಬೆಂಬಲ ಘೋಷಿಸಿದ್ದಾರೆ. ಒಂದು ಕಡೆ ಇಡೀ ದೇಶದ ಯುವಕರು, ವಿದ್ಯಾರ್ಥಿಗಳು ಮತ್ತು ಇಂಡಿಯಾ ಒಕ್ಕೂಟ ನಿಂತಿದೆ. ಮತ್ತೊಂದೆಡೆ ಕೇವಲ ಬಿಜೆಪಿ ಮತ್ತು ಚುನಾವಣಾ ಆಯೋಗ ಮಾತ್ರ ನಿಂತಿವೆ. ಇತಿಹಾಸದ ಸರಿ ಬದಿಯಲ್ಲಿ ನಿಲ್ಲಲು ಬಯಸುವವರು ತಕ್ಷಣವೇ ಬಿಜೆಪಿ ಶಿಬಿರವನ್ನು ತೊರೆಯಬೇಕು ಎಂದು ಅವರು ಕರೆ ಕೊಟ್ಟರು.
ಕಳೆದ ಎರಡು ದಿನಗಳ ಹಿಂದಷ್ಟೇ ಸೌರವ್ ದಾಸ್ ಅಕ್ಟೋಬರ್ 10 ರಂದು ನವದೆಹಲಿಯ ಜಂತರ್ ಮಂತರ್ ನಲ್ಲಿ ಹಮ್ಮಿಕೊಳ್ಳಲಾಗಿರುವ ಬೃಹತ್ ಪ್ರತಿಭಟನೆಗೂ ಮುನ್ನ ತಮಗೂ ಹಾಗೂ ಪಕ್ಷದ ಇತರ ಉನ್ನತ ನಾಯಕರಿಗೂ ಬಂಧನದ ಭೀತಿ ಎದುರಾಗಿದೆ ಎಂದು ಆರೋಪ ಮಾಡಿದ್ದರು. ನಮ್ಮನ್ನು ಬಂಧಿಸಿದರೂ ದೇಶದಾದ್ಯಂತದ ಕಾರ್ಯಕರ್ತರು ಮತ್ತು ಯುವಜನತೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದರು.

