ರಾಜ್ಯ ಆರ್ಥಿಕ ಸಂಕಷ್ಟದಲ್ಲಿದೆ. ಹಳೆಯ ಯೋಜನೆಗಳಿಗೆ ಹಣ ಬಿಡುಗಡೆಯಾಗುತ್ತಿಲ್ಲ. ಹೊಸ ಯೋಜನೆ ಘೋಷಣೆ ಮಾಡಲು ಸರ್ಕಾರ ಹಿಂಜರಿಯುತ್ತಿದೆ.ಹಣಕಾಸು ಇಲಾಖೆ ಕೂಡಾ ಹೊಸ ಯೋಜನೆ ಘೋಷಣೆ ಮುನ್ನ ಯೋಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದೆ. ಮತ್ತೊಂದು ಕಡೆ ಈಗ ಗುತ್ತಿಗೆದಾರರ ಸಂಘ ಕೂಡಾ ಮತ್ತೊಂದು ತಲೆ ನೋವು ತಂದಿಟ್ಟಿದೆ. ಬಾಕಿ ಗುತ್ತಿಗೆ ಹಣವನ್ನು ಶೀಘ್ರದಲ್ಲೇ ಬಿಡುಡಗೆ ಮಾಡುವಂತೆ ಒತ್ತಾಯಿಸಿ ಪತ್ರ ಬರೆದಿದೆ.   

ಗುತ್ತಿಗೆದಾರರ ಸಂಘ ಇದಕ್ಕೆ ಸಂಬಂಧ ಪಟ್ಟಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗೆ ಪತ್ರ ಬರೆದಿದೆ. ಪತ್ರದಲ್ಲಿ ಈ ಹಿಂದೆ ಶಿವಕುಮಾರ್ ಉಪಮುಖ್ಯಮಂತ್ರಿ ಆಗಿದ್ದಾಗ ಕೊಟ್ಟಿದ್ದ ಭರವಸೆಗಳನ್ನು ನೆನಪು ಮಾಡಿದೆ. ತಾವು ಉಪಮುಖ್ಯಮಂತ್ರಿಗಳಾಗಿದ್ದಾಗ ಸರ್ಕಾರ ನಿಮ್ಮ ಜೊತೆ ಇರಲಿದೆ. ನಿಮ್ಮಿಂದ ಈ ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಭರವಸೆ ನೀಡಿದ್ರಿ. ಈಗ ನಿಮ್ಮ ಸರ್ಕಾರವೇ ಅಸ್ಥಿತ್ವಕ್ಕೆ ಬಂದಿದ್ದು ಮೂರು ತಿಂಗಳು ಕಳೆದಿದೆ ಆದರೆ ಹಣ ಬಿಡುಗಡೆ ಮಾಡದಿರುವುದು ನೋವಿನ ಸಂಗತಿ ಎಂದು ಸಂಘ ಪತ್ರದಲ್ಲಿ ತಿಳಿಸಿದೆ. ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಗುತ್ತಿಗೆದಾರರ ಸಂಘ ಅಸಮಾಧಾನ ಹೊರ ಹಾಕಿದೆ. ಅವರು ನಮ್ಮ ಗುತ್ತಿಗೆದಾರರ ಸಮುದಾಯಕ್ಕೆ ಯಾವುದೇ ರೀತಿಯ ಸಹಾಯ ಮಾಡಲಿಲ್ಲ ಸಿದ್ದರಾಮಯ್ಯ ಬರೀ ಆಶ್ವಾಸನೆ ನೀಡುತ್ತಾ ಬಂದಿರುತ್ತಾರೆ. ಸಿದ್ದರಾಮಯ್ಯಗೆ ಹಲವಾರು ಪತ್ರ ವವ್ಯಹಾರ ಮತ್ತು ಭೇಟಿ ಮಾಡಿದರೂ ಯಾವುದೇ ಸ್ಪಂದನೆ ರಾಜ್ಯ ಸಂಘಕ್ಕೆ ಸಿಕ್ಕಿರುವುದಿಲ್ಲ ಎಂದು ಬೇಸರ ಹೊರಹಾಕಿದೆ.

ಮುಂದುವರೆದು ತಾವು ಮುಖ್ಯಮಂತ್ರಿಗಳಾದ ಬಳಿಕ ಜೂನ್ 30ರಂದು ನಮ್ಮ ಸಂಘದ ಪದಾಧಿಕಾರಿಗಳನ್ನು ಕರೆದು ಚರ್ಚೆ ಮಾಡಿದ್ದೀರಿ. ಅಲ್ಲದೇ ಬಾಕಿ ಹಣವನ್ನು 2 ತಿಂಗಳೊಳಗೆ ಬಿಡುಗಡೆ ಮಾಡುವುದಾಗಿಯೂ ಭರವಸೆ ನೀಡಿದ್ರಿ ಆದರೆ ಇಲ್ಲಿಯವರೆಗೂ ಹಣ ಬಿಡುಗಡೆ ಆಗಿಲ್ಲದಿರುವುದಕ್ಕೆ ನಮಗೆ ಬೇಸರವಾಗುತ್ತಿದೆ ಎಂದು ಸಂಘ ಪತ್ರದಲ್ಲಿ ತಿಳಿಸಿದೆ. ಅಲ್ಲದೇ ತಾವು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡುತ್ತೀರಿ. ಆಯಾ ಸ್ಥಳೀಯ ಸಮಸ್ಯೆಗಳನ್ನು ಬಗೆ ಹರಿಸಲು ಪ್ರಯತ್ನ ನಡೆಸುತ್ತಿದ್ದೀರಿ. ಆದರೆ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೂ ಮೂಲ ಕಾರಣರಾದ ನಮ್ಮನ್ನೇ ಮರೆತು ಬಿಟ್ಟಿದ್ದೀರಿ ಎಂದು ಗುತ್ತಿಗೆದಾರರ ಸಂಘ ನೊಂದು ಹೇಳಿದೆ.

ಮುಖ್ಯಮಂತ್ರಿಗಳ ಭರವಸೆ ಪ್ರಕಾರ ಬಾಕಿ ಇರುವ 38,000 ಕೋಟಿ ರೂಪಾಯಿ ಮೊತ್ತವನ್ನು ತುರ್ತಾಗಿ ಬಿಡುಗಡೆ ಮಾಡಲು ಕ್ರಮವಹಿಸಬೇಕು ಎಂದು ಆಗ್ರಹಿಸಿದೆ. ಅಭಿವೃದ್ಧಿ ಇಲಾಖೆಗಳಲ್ಲಿ ಪಾರದರ್ಶಕತೆ ಕಾಪಾಡುತ್ತಿಲ್ಲ. ಆದ್ದರಿಂದ ಇಲಾಖೆಯಲ್ಲಿ ಜೇಷ್ಠತೆ ಕಾಪಾಡಿ, ಅದರ ಪ್ರಕಾರ ಹಣ ಬಿಡುಗಡೆ ಮಾಡಲು ಸೂಕ್ತ ಕ್ರಮ ವಹಿಸಿ ಎಂದು ಮುಖ್ಯಮಂತ್ರಿಗಳಲ್ಲಿ ಸಂಘ ಕೇಳಿಕೊಂಡಿದೆ. ಅದೇ ರೀತಿ Special LOC ಕೊಡುವುದನ್ನೂ ಸರ್ಕಾರ ನಿಲ್ಲಿಸಬೇಕೆಂದು ಗುತ್ತಿಗೆದಾರರ ಸಂಘ ಆಗ್ರಹ ಮಾಡಿದೆ. ಇಲ್ಲಿ ಸರ್ಕಾರ ಈಗಾಗಲೇ ಹಳೇ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಒದ್ದಾಡುತ್ತಿದೆ. ಹೊಸ ಯೋಜನೆ ಘೋಷಿಸಲು ಮನಸ್ಸು ಮಾಡುತ್ತಿಲ್ಲ. ಇದರ ನಡುವೆ ಗುತ್ತಿಗೆದಾರರು ಬಾಕಿ ಹಣಕ್ಕೆ ಒತ್ತಾಯ ಮಾಡುತ್ತಿದ್ದಾರೆ. ಇದನ್ನು ಮುಖ್ಯಮಂತ್ರಿ ಶಿವಕುಮಾರ್ ಹೇಗೆ ನಿಭಾಯಿಸುತ್ತಾರೋ ನೋಡಬೇಕು