ಜಯದೇವಪ್ಪ ಹಾಲಪ್ಪ ಪಾಟೇಲ್..ಕರ್ನಾಟಕ ಕಂಡ ಕೆಲವೇ ಕೆಲವು ವರ್ಣರಂಜಿತ ರಾಜಕಾರಣಿಗಳಲ್ಲಿ ಇವರೂ ಕೂಡಾ ಒಬ್ಬರು..ಸಂಸದರಾಗಿ, ಶಾಸಕರಾಗಿ, ಮಂತ್ರಿಯಾಗಿ ಉಪಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿಯಾಗಿ ಹಲವು ಅಧಿಕಾರಗಳನ್ನು ಅನುಭವಿಸಿದವರು..ನಡೆಸಿದವರು. ಆದರೆ ಎಂದೂ ಅದರ ಅಮಲನ್ನು ತಲೆಗೆ ಏರಿಸಿಕೊಂಡವರಲ್ಲ.ಮೈ-ಕೈಗೂ ಅಂಟಿಸಿಕೊಂಡವರಲ್ಲ.ಇದರಿಂದಲೇ ಇವರನ್ನು ಅಭಿಮಾನಿಗಳು ರಾಜಕೀಯ ಸಂತ ಅಂತಾನೂ ಕರೆಯುತ್ತಿದ್ದರು. ಇವತ್ತು ಇಂಥ ಪಟೇಲರ ಜನ್ಮದಿನ. ಅವರಿಲ್ಲದ ಅವರ ಜನ್ಮದಿನದಂದು ಅವರನ್ನೊಮ್ಮೆ ನೆನಪು ಮಾಡಿಕೊಳ್ಳೋಣ.
 
ಈಗಿನ ರಾಜಕಾರಣಿಗಳು ರಾಜಕಾರಣ ಎಂದರೆ ಅಧಿಕಾರ ಎಂದುಕೊಂಡಿರುವುದು ಸತ್ಯ. ಆದರೆ ಪಟೇಲರು ಎಂದೂ ಹಾಗೇ ಭಾವಿಸಿದವರಲ್ಲ. ಅಧಿರಾರ ಎಂದರೆ ಅದೊಂದು ತತ್ವ ಅದೊಂದು ಸಿದ್ಧಾಂತ ಎಂದು ಕೊಂಡಿದ್ದರು. ಆ ಅಧಿಕಾರಕ್ಕೆ ನೇರ ನಡೆ-ನುಡಿ ಮತ್ತು ಧೀಮಂತ ವ್ಯಕ್ತಿತ್ವದ ಸ್ಪರ್ಶ ನೀಡಿದರು. ಜೆ.ಹೆಚ್.ಪಟೇಲರು ಹುಟ್ಟಿದ್ದು 1 ಅಕ್ಟೋಬರ್ 1930ರಲ್ಲಿ. ದಾವಣಗೆರೆಯಲ್ಲಿ ಇಂಟರ್ ಮೀಡಿಯೆಟ್ ಮುಗಿಸಿದರು. ಇಂಟರ್ ಮೀಡಿಯೆಟ್ನಲ್ಲಿ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ಪಟೇಲರಿಗೆ ರಾಜಕೀಯದತ್ತ ಒಲವು ಮೂಡಲು ಶುರುವಾಯ್ತು. ಇದರಿಂದ ಬಿಎ ತರಗತಿ ಓದುವುದು ಹೆಚ್ಚು ಸೂಕ್ತ ಅನ್ನಿಸಿ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪ್ರವಶ ಪಡೆದರು. ಮಹಾರಾಜ ಕಾಲೇಜಿನ ವ್ಯಾಸಂಗ ಬಹುಮಟ್ಟಿಗೆ ಅವರ ವ್ಯಕ್ತಿತ್ವವನ್ನು ರೂಪಿಸಿತು.

ಸಮಾಜವಾದದ ಕಡೆ ಜೀವನದ ಹೆಜ್ಜೆ ಇಡುತ್ತಿದ್ದ ಅವರಿಗೆ ಮತ್ತೊಂದು ತಿರುವು ದೊರಕಿದ್ದು ಇಲ್ಲೇ. ಅದು 1951ರ ಸಮಯ ಆಗಷ್ಟೇ ದೇಶ ಸ್ವಾತಂತ್ರದ ಬೆಳಕಿಗೆ ಬಂದು ಕೇವಲ ನಾಲ್ಕು ವರ್ಷವಾಗಿತ್ತು ಅಷ್ಟೇ. ಆಗ ರಾಷ್ಟ್ರದಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಿತ್ತು. ಈ ವೇಳೆ ಜಯಪ್ರಕಾಶ್ ನಾರಾಯಣ್ ಸಮಾಜವಾದಿ ಪಕ್ಷದ ನಾಯಕರಾಗಿ, ಚುನಾವಣೆ ಪ್ರಚಾರಕ್ಕೆ ಮೈಸೂರಿಗೆ ಬಂದಿದ್ದರು. ಅಂದು ಅವರನ್ನು ನೋಡಿ ಅವರ ಭಾಷಣ ಕೇಳಿ ಅವರ ಕಡೆಗೆ ಪ್ರಭಾವಿತರಾಗಿ ಬಿಟ್ಟರು. ಬಳಿಕ ಕಾಗೋಡು ಸತ್ಯಾಗ್ರಹ ಆರಂಭವಾಗಿ ಡಾ.ಲೋಹಿಯಾ ಕರ್ನಾಟಕಕ್ಕೆ ಬಂದು ಆ ಸತ್ಯಾಗ್ರಹದಲ್ಲಿ ಭಾಗಹಿಸಿದ್ದರು. ಇದು ಸಮಾಜವಾದಿ ತತ್ವದಲ್ಲಿ ವಿಶ್ವಾಸವಿಟ್ಟಿದ್ದ ಪಟೇಲರಿಗೆ ಒಂದು ಹೊಸ ಹುರುಪು ನೀಡಿತು. ಈ ಸಮಾಜವಾದದ ಗುಂಗಿನಲ್ಲಿಯೇ ಪಟೇಲರು 1954ರವರೆಗೆ ಬೆಳಗಾವಿಯಲ್ಲಿ ಅಭ್ಯಾಸ ಮಾಡಿ ಎಲ್.ಎಲ್.ಬಿ. ಪದವಿ ಪಡೆದರು. 

ಹೀಗಿರುವಾಗಲೇ 1955ರಲ್ಲಿ ಶಿವಮೊಗ್ಗದಲ್ಲಿ ತನ್ನ ಸಹಪಾಠಿ ಮಿತ್ರ ಶಂಕರನಾರಾಯಣ ಭಟ್ಟರ ಜತೆಗೆ ವಕೀಲಿ ವೃತ್ತಿ ಆರಂಭಿಸಿದರು. ವಕೀಲ ವೃತ್ತಿ ಮಾಡಿಕೊಂಡೇ 1957ರ ನಂತರ ಸಮಾಜವಾದಿ ಪಕ್ಷದ ಹೋರಾಟದಲ್ಲಿ ಜನನಾಯಕ ಶಾಂತವೇರಿ ಗೋಪಾಲಗೌಡರ ಜತೆಯಾದರು. 1960ರ ತಾಲೂಕು ಬೋರ್ಡ್ ಚುನಾವಣೆ ಜೆ.ಹೆಚ್. ಪಟೇಲರನ್ನು ಚುನಾವಣಾ ರಾಜಕೀಯಕ್ಕೆ ಧುಮುಕಿಸಿತು. ಆಗ ಬಸವಪಟ್ಟಣ ಕ್ಷೇತ್ರದಿಂದ ಚನ್ನಗಿರಿ ತಾಲೂಕು ಬೋರ್ಡ್ಗೆ ಚುನಾಯಿತರಾದರು. ಈ ಮಧ್ಯೆ ಕಾಗೋಡು ಸತ್ಯಾಗ್ರಹ ಒಂದು ರಾಷ್ಟ್ರೀಯ ಸುದ್ದಿಯಾಗಿ, ಭಾರತದ ಎಲ್ಲ ಕಡೆಗೂ ಲೋಹಿಯಾ ಅವರು ಉಳುವವನಿಗೆ ಭೂಮಿ ಚಳವಳಿ ಪ್ರಾರಂಭಿಸಿದ್ದರು. ರಾಜ್ಯದಲ್ಲಿ ಸಮಾಜವಾದಿ ಪಕ್ಷ ನಡೆಸಿದ ಭೂ ಚಳವಳಿಗಳಲ್ಲಿ ಜೆ.ಹೆಚ್. ಪಟೇಲರು ಎರಡು ಸಾರಿ ಸೆರೆಮನೆ ವಾಸ ಅನುಭವಿಸಿದರು

ತಾಲೂಕು ಬೋರ್ಡ್‌ ನಿಂದ ಲೋಕಸಭೆಗೆ 

ಪಟೇಲರ ರಾಜಕೀಯ ಕನಸು ಕೇವಲ ತಾಲೂಕು ಬೋರ್ಡ್ ಗೆ ಮಾತ್ರ ಸೀಮಿತವಾಗಲಿಲ್ಲ. 1962ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆ.ಹೆಚ್. ಪಟೇಲರು ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದರು. ಪಟೇಲರು ಕಾನೂನು ಪದವಿ ಪಡೆದವರು. ಇಂಗ್ಲಿಷ್ ನಲ್ಲಿ ಪಾಂಡಿತ್ಯ ಗಳಿಸಿದ್ದವರು. ಅವರು ಸಂಸತ್ ಪ್ರವೇಶಿಸಿದಾಗ ಅಲ್ಲಿ ಪ್ರಧಾನ ಭಾಷೆ ಹಿಂದಿ ಮತ್ತು ಇಂಗ್ಲಿಷ್. ಮಾತ್ರ. ಕನ್ನಡ ಮಾತ್ರವಲ್ಲ ಪ್ರಾದೇಶಿಕ ಭಾಷೆ ಒಂದು ಪದ ಆಡುವರೂ ಅಲ್ಲಿರಲಿಲ್ಲ. ಜೆ.ಹೆಚ್. ಪಟೇಲರದ್ದು, ತನ್ನ ತಾಯ್ನಾಡು ಭಾಷೆಯಲ್ಲಿಯೇ ವ್ಯವಹರಿಸಬೇಕೆಂಬ ಮನಸು. ಇನ್ನು ಸಂಸತ್ ಪ್ರವೇಶಿಸಿದ ಕೂಡಲೇ ಕನ್ನಡದಲ್ಲಿ ಸಂಸತ್ತಿನಲ್ಲಿ ಮಾತನಾಡಿ ಜಯಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಸಂಸದರಾಗಿ ಜೆ.ಎಚ್. ಪಟೇಲರು ಸಂಸತ್ ನಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಅದು ಒಮ್ಮೆ ನಿಂತರೆ ಐದಾರು ತಾಸು ಕನ್ನಡದಲ್ಲಿ ಮಾತನಾಡುತ್ತಿದ್ದರು. ಈ ಮೂಲಕ ಆಡಳಿತ ನಡೆಸುವರಲ್ಲಿ ಕನ್ನಡ ಪ್ರೀತಿ ಎಂದರೆ ಹೇಗಿರಬೇಕು ಎಂದು ತೋರಿಸಿಕೊಟ್ಟಿದ್ದರು. ಅವರು ಲೋಕಸಭೆಯಲ್ಲಿ ಪ್ರಥಮ ಬಾರಿಗೆ ಕನ್ನಡದಲ್ಲಿ ಮಾತನಾಡಿದ್ದು, ನಂತರ ಗೃಹಮಂತ್ರಿಗಾಳಗಿದ್ದ ವೈ.ವಿ. ಚವ್ಹಾಣ್ ಅವರೊಡನೆ ಮಹಾಜನ ಆಯೋಗದ ಸಂಬಂಧವಾಗಿ ಕರ್ನಾಟಕದ ಪರವಾಗಿ ವಾಗ್ಯುದ್ಧ ನಡೆಸಿದ್ದು, ಕರ್ನಾಟಕದಲ್ಲಿ ಮನೆಮಾತಾಗಿತ್ತು. 

ತುರ್ತು ಪರಸ್ಥಿತಿ ಸಂದರ್ಭದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ಜೊತೆಗೂಡಿ ಹೋರಾಟಕ್ಕೆ ಇಳಿದರು. ಇದರಿಂದ ಸೆರೆಮನೆವಾಸವನ್ನೂ ಅನುಭವಿಸಿದರು. ನಂತರ ಚನ್ನಗಿರಿ ಕೇತ್ರದಿಂದ ವಿಧಾನಸಭೆಗೆ ಪ್ರವೇಶ ಕೊಟ್ಟರು. ಆಗ ರಾಜ್ಯದಲ್ಲಿ ಇದ್ದಿದ್ದು ದೇವರಾಜ ಅರಸು ಅವರ ಕಾಂಗ್ರೆಸ್ ಸರ್ಕಾರ. ಅದೊಂದು ದಿನ ಬಜೆಟ್ ಮೇಲಿನ ಚರ್ಚೆಯಲ್ಲಿ ಪಟೇಲರು ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸತತ ಮೂರು ಗಂಟೆ ಮಾತಾಡಿದರು. ಇದರಿಂದ ಪ್ರಭಾವಿರಾತ ಅರಸು ಅವರು ಕೆಲ ಅಂಶಗಳನ್ನ ಪಡೆದು ಸಲಹೆ ಸೂಚನೆಗಳನ್ನು ಪಡೆದಿದ್ದರಂತೆ. ಮುಂದೆ ಇವರಿಬ್ಬರ ಗೆಳೆತನ ಗಾಢವಾಗಿ ಅರಸು ತಾವು ಕಾಂಗ್ರೆಸ್ ಗೆ ಬಂದರೆ ನಿಮ್ಮನ್ನು ಮಂತ್ರಿ ಮಾಡುವುದಾಗಿ ಆಶ್ವಾಸನೆ ನೀಡಿದರಂತೆ ಆದರೆ ಅದನ್ನು ಪಟೇಲರು ನಯವಾಗಿ ನಿರಾಕರಿಸಿದ್ದರು.
 

ಮುಖ್ಯಮಂತ್ರಿಯಾಗಿ ಕೈಗೊಂಡ ಐತಿಹಾಸಿಕ ನಿರ್ಧಾರಗಳು 

ಬಳಿಕ 1983ರಲ್ಲಿ ಏನಾಯ್ತ.. ಮೊದಲ ಬಾರಿಗೆ ಕಾಂಗ್ರೆಸೇತರ ಪಕ್ಷ ಆಡಳಿತಕ್ಕೆ ಬಂತು ರಾಮನಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು. ಆಗ ಅವರ ಸಂಪುಟದಲ್ಲಿ ಮೊದಲ ಬಾರಿಗೆ ಮಂತ್ರಿಯಾದರು. 90ರದಶಕದಲ್ಲಿ ಮತ್ತೊಮ್ಮೆ ಇವರ ರಾಜಕೀಯ ಜೀವನ ಮತ್ತೊಂದು ಮಗ್ಗಲು ಬದಲಿಸಿತು. ದೇವೇಗೌಡರು ಮುಖ್ಯಮಂತ್ರಿಯಾದರು ಪಟೇಲರು ಉಪಮುಖ್ಯಮಂತ್ರಿಯಾದರು. ಇದೇ ವೇಳೆ ನಡೆದ ಲೋಕಸಭಾ ಚುನಾವಣೆ ವೇಳೆ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಹೋಗಿದ್ದರಿಂದ ದೇವೇಗೌಡರಿಗೆ ಅಚಾನಕ್ ಆಗಿನ ಪ್ರಧಾನಿಯಾಗೋ ಭಾಗ್ಯ ಬಂತು ಹಾಗೇ ಪಟೇಲರಿಗೂ ಮುಖ್ಯಮಂತ್ರಿಯಾಗೋ ಯೋಗ ಒದಗಿತು ಅಧಿಕಾರ ವಹಿಸಿಕೊಂಡ ಜೆ.ಹೆಚ್. ಪಟೇಲ್ ತಮ್ಮ ಮೂರೂವರೆ ವರ್ಷಗಳ ಅಲ್ಪಾವಧಿಯಲ್ಲೇ ರಾಜ್ಯದ ಅಭಿವೃದ್ಧಿಗೆ ದಿಕ್ಸೂಚಿಯಾಗಬಲ್ಲ ಹಲವು ದೃಢ ಮತ್ತು ದೂರದರ್ಶಿ ಯೋಜನೆಗಳನ್ನು ಜಾರಿಗೆ ತಂದರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಅವರು ಆಡಳಿತ ವಿಕೇಂದ್ರೀಕರಣ, ತಂತ್ರಜ್ಞಾನ ಮತ್ತು ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿದರು. ಜೆ.ಹೆಚ್. ಪಟೇಲ್ ಅವರ ಆಡಳಿತಾವಧಿಯ ಅತ್ಯಂತ ಧೀಮಂತ ಮತ್ತು ಐತಿಹಾಸಿಕ ನಿರ್ಧಾರವೆಂದರೆ ಜಿಲ್ಲೆಗಳ ಮರುವಿಂಗಡಣೆ. ಆಡಳಿತವು ಜನಸಾಮಾನ್ಯರ ಮನೆಬಾಗಿಲಿಗೆ ತಲುಪಬೇಕು ಮತ್ತು ಸಣ್ಣ ನಗರಗಳೂ ಬೆಳೆಯಬೇಕು ಎಂಬ ಉದ್ದೇಶದಿಂದ, ಅವರು ಒಂದೇ ಬಾರಿಗೆ 7 ಹೊಸ ಜಿಲ್ಲೆಗಳನ್ನು ರಚಿಸಿದರು. 

ಇಂದು ಬೆಂಗಳೂರು ಜಾಗತಿಕ ಮಟ್ಟದಲ್ಲಿ ಸಿಲಿಕಾನ್ ಸಿಟಿ ಹಾಗೂ ಐಟಿ ಹಬ್ ಆಗಿ ಗುರುತಿಸಿಕೊಳ್ಳಲು ಜೆ.ಹೆಚ್. ಪಟೇಲರ ದೂರದೃಷ್ಟಿಯೇ ಕಾರಣ.1997 ರಲ್ಲಿ ಪಟೇಲ್ ಸರ್ಕಾರವು ದೇಶದಲ್ಲೇ ಮೊಟ್ಟಮೊದಲ ಬಾರಿಗೆ ಪ್ರತ್ಯೇಕ ಮಾಹಿತಿ ತಂತ್ರಜ್ಞಾನ ನೀತಿಯನ್ನು ಜಾರಿಗೆ ತಂದಿತು.ಜಾಗತಿಕ ಐಟಿ ಕಂಪನಿಗಳು ಬೆಂಗಳೂರಿನಲ್ಲಿ ಬಂಡವಾಳ ಹೂಡಲು ಇದು ರತ್ನಗಂಬಳಿ ಹಾಸಿತು. ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಇಂಟರ್ ನ್ಯಾಷನಲ್ ಟೆಕ್ ಪಾರ್ಕ್ ನಂತಹ ಬೃಹತ್ ಯೋಜನೆಗಳಿಗೆ ಇವರ ಕಾಲದಲ್ಲೇ ಹೆಚ್ಚಿನ ಪ್ರೋತ್ಸಾಹ ದೊರೆಯಿತು. ಇನ್ನು ರೈತರ ಒಡನಾಡಿಯಾಗಿದ್ದ ಪಟೇಲರು ಉತ್ತರ ಕರ್ನಾಟಕದ ಭಾಗ್ಯವಿಧಾತ ಎಂದೇ ಕರೆಯಲಾಗುವ ಕೃಷ್ಣಾ ಮೇಲ್ದಂಡೆ ಯೋಜನೆಗೆ ಅತಿ ಹೆಚ್ಚಿನ ಅನುದಾನ ನೀಡಿ, ಕಾಮಗಾರಿಯನ್ನು ಚುರುಕುಗೊಳಿಸಿದರು. ಆಲಮಟ್ಟಿ ಅಣೆಕಟ್ಟಿನ ಎತ್ತರ ಹೆಚ್ಚಿಸುವ ಕಾನೂನು ಹೋರಾಟ ಮತ್ತು ಕಾವೇರಿ ನದಿ ನೀರು ಹಂಚಿಕೆ ಬಿಕ್ಕಟ್ಟುಗಳನ್ನು ಅತ್ಯಂತ ಚಾಣಾಕ್ಷತನದಿಂದ ನಿಭಾಯಿಸಿ, ರಾಜ್ಯದ ರೈತರ ಹಿತರಕ್ಷಣೆಗೆ ನಿಂತರು.

ಅಬ್ದುಲ್ ನಜೀರ್ ಸಾಬ್ ಅವರು ಹಾಕಿಕೊಟ್ಟ ಪಂಚಾಯತ್ ರಾಜ್ ವ್ಯವಸ್ಥೆಗೆ ಪಟೇಲರು ಮತ್ತಷ್ಟು ಶಕ್ತಿ ತುಂಬಿದರು. ಗ್ರಾಮೀಣ ಭಾಗದ ರಸ್ತೆಗಳು, ಕುಡಿಯುವ ನೀರು ಮತ್ತು ನೈರ್ಮಲ್ಯೀಕರಣ ಯೋಜನೆಗಳಿಗೆ ಆದ್ಯತೆ ನೀಡಿದರು. ವಿಕೇಂದ್ರೀಕೃತ ಯೋಜನಾ ಸಮಿತಿಗಳ ಮೂಲಕ ಹಳ್ಳಿಗಳ ಅಭಿವೃದ್ಧಿಗೆ ನೇರವಾಗಿ ಹಣ ತಲುಪುವಂತೆ ಮಾಡಿದರು.ರಾಜ್ಯದಲ್ಲಿ ತೀವ್ರವಾಗಿದ್ದ ವಿದ್ಯುತ್ ಕೊರತೆಯನ್ನು ನೀಗಿಸಲು ಪಟೇಲರು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವನ್ನು ಸ್ಥಾಪಿಸಿದರು. ಈ ಮೂಲಕ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯನ್ನು ಸುಧಾರಿಸಲು ಖಾಸಗಿ ಸಹಭಾಗಿತ್ವಕ್ಕೆ ಮುಕ್ತ ಅವಕಾಶ ಮಾಡಿಕೊಟ್ಟರು, ಇದು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಸ್ವಾವಲಂಬನೆಗೆ ದಾರಿಯಾಯಿತು.

ಕುರ್ಚಿಗೆ ಅಂಟಿಕೊಳ್ಳದ ಪಟೇಲರು 

ರಾಜಕೀಯ ಅಂದರೆ ಅಧಿಕಾರ, ಕುರ್ಚಿ ಉಳಿಸಿಕೊಳ್ಳಲು ಕೊನೆಕ್ಷಣದವರೆಗೂ ನಡೆಸುವ ಸರ್ಕಸ್ ಎಂಬ ಇಂದಿನ ದಿನಗಳಲ್ಲಿ, ತತ್ವ ಮತ್ತು ಸಿದ್ಧಾಂತಗಳಿಗಾಗಿ ಮುಖ್ಯಮಂತ್ರಿ ಹುದ್ದೆಯನ್ನೇ ಪಣಕ್ಕಿಟ್ಟಿದ್ದ ಧೀಮಂತ ನಾಯಕ ಜೆ.ಹೆಚ್. ಪಟೇಲ್. ಮಂತ್ರಿಯಾಗಿ ಹಾಗೂ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎಂದಿಗೂ ತಮ್ಮ ಕುಟುಂಬಕ್ಕಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳದ ಪಟೇಲರು, ವಂಶಪಾರಂಪರ್ಯ ರಾಜಕಾರಣದಿಂದ ಸದಾ ದೂರವೇ ಉಳಿದಿದ್ದರು. ತಮ್ಮ ಯಾವುದೇ ಮಕ್ಕಳನ್ನು ಚುನಾವಣಾ ರಾಜಕೀಯಕ್ಕೆ ತರಲು ಅವರು ಎಂದಿಗೂ ಒಪ್ಪಲಿಲ್ಲ. 

ಜೆ.ಹೆಚ್. ಪಟೇಲರು ಮುಖ್ಯಮಂತ್ರಿಯಾಗಿದ್ದಾಗ ಅವರದೇ ಪಕ್ಷದಲ್ಲಿ ದೊಡ್ಡ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಅಂದು ಜನತಾದಳದ 116 ಶಾಸಕರ ಪೈಕಿ 52 ಭಿನ್ನಮತೀಯ ಶಾಸಕರು ಪಟೇಲರನ್ನು ಸಿಎಂ ಗದ್ದುಗೆಯಿಂದ ಕೆಳಗಿಳಿಸಲು ತೀವ್ರ ಆಪರೇಷನ್ ನಡೆಸಿದ್ದರು. ಇಂತಹ ಕಠಿಣ ಪರಿಸ್ಥಿತಿಯಲ್ಲೂ ಪಟೇಲರು ಎಂದಿಗೂ ಭಿನ್ನಮತೀಯರನ್ನು ಸ್ವತಃ ಕರೆದು ಮಾತನಾಡುವ ಸಾಹಸಕ್ಕೆ ಕೈಹಾಕಲಿಲ್ಲ ಅಥವಾ ಕುರ್ಚಿ ಉಳಿಸಿಕೊಳ್ಳಲು ಅವರ ಮುಂದೆ ಮಂಡಿಯೂರಿ ನಿಲ್ಲಲಿಲ್ಲ. ಬದಲಿಗೆ, ಅತ್ಯಂತ ರಾಜಕೀಯ ಸ್ವಾಭಿಮಾನ ಮೆರೆದ ಪಟೇಲರು, ಇದು ಅವರದ್ದೇ ಸರ್ಕಾರ, ಆ ಶಾಸಕರೇ ಸರ್ಕಾರವನ್ನು ಉಳಿಸಿಕೊಳ್ಳಲಿ" ಎಂಬ ಗಡುಸಾದ ಸಂದೇಶವನ್ನು ತಮ್ಮ ಆಪ್ತ ಹಾಗೂ ಹಿರಿಯ ಸಚಿವರಾಗಿದ್ದ ಎಂ.ಪಿ. ಪ್ರಕಾಶ್ ಮತ್ತು ಎಂ.ಸಿ. ನಾಣಯ್ಯನವರ ಮೂಲಕ ರವಾನಿಸಿದ್ದರು 

ಮುಂದೆ ರಾಜ್ಯದಲ್ಲಿ ರಾಜಕೀಯ ಏರುಪೇರುಗಳು ತೀವ್ರಗೊಂಡಾಗ ಅವಧಿಗೂ ಮುನ್ನ ಎಂದರೆ ಇನ್ನೂ 6 ತಿಂಗಳುಗಳು ಬಾಕಿ ಇರುವಾಗಲೇ 1999 ರ ಅಕ್ಟೋಬರ್ 7 ರಂದು ಪಟೇಲರು ಸರ್ಕಾರವನ್ನು ವಿಸರ್ಜಿಸುವ ದಿಟ್ಟ ತೀರ್ಮಾನ ಪ್ರಕಟಿಸಿದರು. ತದನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಒಲ್ಲದ ಮನಸ್ಸಿನಿಂದಲೇ ತಮ್ಮ ಬಹುಕಾಲದ ಆತ್ಮೀಯ ಗೆಳೆಯರಾದ ಜಾರ್ಜ್ ಫರ್ನಾಂಡೀಸ್ ಮತ್ತು ರಾಮಕೃಷ್ಣ ಹೆಗಡೆಯವರ ಒತ್ತಾಯಕ್ಕೆ ಕಟ್ಟುಬಿದ್ದು ಬಿಜೆಪಿಯ ಜೊತೆಗೆ ಮೈತ್ರಿ ಮಾಡಿಕೊಂಡರು. ಆದರೆ ದುರದೃಷ್ಟವಶಾತ್ ಆ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಪಟೇಲರು ತಮ್ಮ ಸ್ವಕ್ಷೇತ್ರವಾದ ಚನ್ನಗಿರಿಯಲ್ಲೇ ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿದ್ದ ವಡ್ನಾಳ್ ರಾಜಣ್ಣ ಅವರ ವಿರುದ್ಧ ಅನಿರೀಕ್ಷಿತ ಸೋಲನ್ನು ಅನುಭವಿಸಬೇಕಾಯಿತು.

ತಮ್ಮದೇ ಕ್ಷೇತ್ರದಲ್ಲಿ ಸೋತು ರಾಜಕೀಯವಾಗಿ ಮುಜುಗರದ ಸನ್ನಿವೇಶ ಎದುರಾಗಿದ್ದರೂ, ಪಟೇಲರು ತಮ್ಮ ಘನತೆಯನ್ನು ಬಿಟ್ಟುಕೊಡಲಿಲ್ಲ.ಚುನಾವಣೆಯ ನಂತರ ಬೆಂಗಳೂರಿನಲ್ಲಿ ನೂತನ ಮುಖ್ಯಮಂತ್ರಿಯಾಗಿ ಎಸ್.ಎಂ. ಕೃಷ್ಣ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದ ಸಮಾರಂಭಕ್ಕೆ ಖುದ್ದಾಗಿ ಆಗಮಿಸಿದ್ದರು. ಸೋಲಿನ ಕಹಿಯ ನಡುವೆಯೂ ಮುಗುಳ್ನಗುತ್ತಾ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಜೆ.ಹೆಚ್. ಪಟೇಲರು ದೊಡ್ಡತನ ಮೆರೆದಿದ್ದರು.

ರಾಜಕೀಯದಲ್ಲಿ ಚಾರಿತ್ರ್ಯ ವಧೆ ಹಾಗೂ ವಿರೋಧಿಗಳ ವ್ಯಕ್ತಿತ್ವ ಹರಣ ಮಾಡುವುದು ಹೊಸದೇನಲ್ಲ. ಆದರೆ, ಕರ್ನಾಟಕ ಕಂಡ ಅತ್ಯಂತ ಪ್ರಾಮಾಣಿಕ ಮತ್ತು ಮುಕ್ತ ಮನಸ್ಸಿನ ಮುಖ್ಯಮಂತ್ರಿ ಜೆ.ಹೆಚ್. ಪಟೇಲ್ ಅವರ ರಾಜಕೀಯ ಜೀವನದಲ್ಲೂ ಇಂತಹದ್ದೇ ಒಂದು ಕರಾಳ ಅಧ್ಯಾಯ ನಡೆದುಹೋಗಿತ್ತು. ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗಲೂ ನಯಾಪೈಸೆ ಭ್ರಷ್ಟಾಚಾರದ ಕಳಂಕವಿಲ್ಲದೆ, ಸ್ವಜನಪಕ್ಷಪಾತ ಮಾಡದೆ ಬದುಕಿದ ಈ ನಾಯಕನ ಹೆಸರನ್ನು ಕೆಡಿಸಲು ಕಾಣದ ಕೈಗಳು ರಾಷ್ಟ್ರೀಯ ಮಾಧ್ಯಮವೊಂದನ್ನು ದಾಳವಾಗಿ ಬಳಸಿಕೊಂಡವು. ಪಟೇಲರು ಆಡಿದ್ದ ಮಾತುಗಳನ್ನು ವಿರೂಪಗೊಳಿಸಿ, ಮಾನಿನಿ ಮತ್ತು ಮದಿರೆ ನನ್ನ ದೌರ್ಬಲ್ಯ ಎನ್ನುವ ಅರ್ಥ ಬರುವ ರೀತಿಯಲ್ಲಿ ವಿಕೃತವಾಗಿ ವರದಿ ಬಿತ್ತರಿಸಲಾಯಿತು. ಪಟೇಲರ ಸೋಗಲಾಡಿತನವಿಲ್ಲದ, ಬಿಚ್ಚುಮನಸ್ಸಿನ ಸ್ವಭಾವವನ್ನೇ ಅವರ ವಿರುದ್ಧ ಅಸ್ತ್ರವಾಗಿ ಬಳಸಿ, ಅವರ ಇಡೀ ವ್ಯಕ್ತಿತ್ವಕ್ಕೆ ಕಳಂಕ ತರುವಲ್ಲಿ ಅಂದು ವಿರೋಧಿಗಳು ಸಫಲರಾಗಿದ್ದಂತೂ ಸುಳ್ಳಲ್ಲ. ಆದರೆ ಅಂದು ಕಾಣದ ಕೈಗಳು ಮಾಡಿದ ಆ ವಿಕೃತ ವರದಿ ಮತ್ತು ಸಂಚುಗಳನ್ನೆಲ್ಲ ಮೀರಿ, ಜೆ.ಹೆಚ್. ಪಟೇಲರು ಆಡಳಿತ ಮಾಡಿ ಸೈ ಎನ್ನಿಸಿಕೊಂಡರು.

ದಿಟ್ಟ ನಿರ್ಧಾರಗಳು ಹಾಗೂ ದ್ವೇಷರಹಿತ ರಾಜಕಾರಣದ ಮೂಲಕ ವಿರೋಧಿಗಳ ಮನವನ್ನೂ ಗೆದ್ದಿದ್ದ ಪಟೇಲರು, ಹಿಡಿದ ಕೆಲಸವನ್ನು ಎಂತಹದೇ ಸವಾಲುಗಳು ಎದುರಾದರೂ ಮುಗಿಸಿಯೇ ತೀರುತ್ತಿದ್ದರು. ಇಂಥಹ ಗಟ್ಟಿ ವ್ಯಕ್ತಿತ್ವದ ಪಟೇಲರು ಅಕ್ಟೋಬರ್ 7 1999 ರಂದು ಎಂದರೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡ ಆರು ದಿನಗಳ ಅಂತರದಲ್ಲೇ ನಿಧನರಾದರು. ಇದರೊಂದಿಗೆ ರಾಜ್ಯ ರಾಜಕಾರಣದ ಪ್ರಮುಖ ಸಮಾಜವಾದಿ ಮೂಲದ ಕೊಂಡಿಯೊಂದು ಕಳಚಿ ಬಿದ್ದಿತು. ಅವರ ಜೊತೆ ಒಂದು ವಿಶಿಷ್ಟ ಆಡಳಿತ ಯುಗಾಂತ್ಯಗೊಂಡಿತು.