ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದ ಕಾಂತಾರ ಸಿನಿಮಾ ರಿಲೀಸ್ ಆಗಿ ನಾಲ್ಕು ವರ್ಷ ಪೂರೈಸಿದೆ. ಕೇವಲ 16 ಕೋಟಿ ಬಜೆಟ್‌ನಲ್ಲಿ ಮೂಡಿಬಂದಿದ್ದ ಈ ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 400 ರಿಂದ 450 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಬರೆದಿತ್ತು. ಆದರೆ ಈ ಖುಷಿಯ ಕ್ಷಣದ ನಡುವೆಯೇ ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ಮಧ್ಯೆ ಏನು ಸರಿಯಿಲ್ಲ ಎನ್ನುವ ವದಂತಿ ಗಾಂಧಿನಗರದಲ್ಲಿ ಮತ್ತೆ ಸೌಂಡ್ ಮಾಡುತ್ತಿದೆ.   

ಕಾಂತಾರದ 4 ವರ್ಷದ ಪಯಣವನ್ನು ನೆನೆದು ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ಗಳಲ್ಲಿ ಪ್ರತ್ಯೇಕವಾಗಿ ಸಂಭ್ರಮ ಹಂಚಿಕೊಂಡಿದ್ದಾರೆ. ಆದರೆ ಹೊಂಬಾಳೆ ಸಂಸ್ಥೆ ತನ್ನ ಪೋಸ್ಟ್‌ನಲ್ಲಿ ರಿಷಬ್ ಹೆಸರನ್ನೇ ಉಲ್ಲೇಖಿಸಿಲ್ಲ, ಹಾಗೆಯೇ ರಿಷಬ್ ಕೂಡ ಹೊಂಬಾಳೆ ಹೆಸರನ್ನು ಎಲ್ಲೂ ಹಾಕಿಲ್ಲ. ಇದನ್ನು ಗಮನಿಸಿದ ನೆಟ್ಟಿಗರು ಕಾಮೆಂಟ್ ಬಾಕ್ಸ್‌ನಲ್ಲಿ "ಯಾಕೆ ಇಬ್ಬರೂ ಟ್ಯಾಗ್ ಮಾಡಿಲ್ಲ? ಹಣವೇ ಮುಖ್ಯವಾಯಿತೇ?" ಎಂದು ಪ್ರಶ್ನೆಗಳ ಸುರಿಮಳೆ ಬಂದಿವೆ. 

ಈ ಅನುಮಾನಗಳಿಗೆ ಮೂಲ ಕಾರಣ ಶುರುವಾಗಿದ್ದು ಮಾರ್ಚ್‌ ತಿಂಗಳಲ್ಲಿ. ರಿಷಬ್ ಶೆಟ್ಟಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಂಬಾಳೆ ಫಿಲ್ಮ್ಸ್, ಕಾಂತಾರ ಅಧಿಕೃತ ಪೇಜ್ ಹಾಗೂ ಸಹನಟರಾದ ರಾಜ್ ಬಿ. ಶೆಟ್ಟಿ ಮತ್ತು ರುಕ್ಮಿಣಿ ವಸಂತ್ ಅವರನ್ನು ಅನ್‌ಫಾಲೋ ಮಾಡಿದ್ದು ಅಭಿಮಾನಿಗಳ ಕಣ್ಣಿಗೆ ಬಿದ್ದಿತ್ತು. ಇದಾದ ಬಳಿಕ ಜುಲೈ 7ರಂದು ರಿಷಬ್ ಹುಟ್ಟುಹಬ್ಬಕ್ಕೆ ಹೊಂಬಾಳೆ ಸಂಸ್ಥೆ ಯಾವುದೇ ಸೋಷಿಯಲ್ ಮೀಡಿಯಾ ಶುಭಾಶಯ ಕೋರದಿರುವುದು ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿತ್ತು.  

ಕಾಂತಾರ ಸಿನಿಮಾದ ಯಶಸ್ಸಿನ ನಂತರ ಲಾಭದ ಹಂಚಿಕೆ ಹಾಗೂ ಬಜೆಟ್ ವಿಷಯದಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎನ್ನಲಾಗುತ್ತಿತ್ತು. ಇದರ ಜೊತೆಗೆ ರಿಷಬ್ ಅವರು ಮೈತ್ರಿ ಮೂವಿ ಮೇಕರ್ಸ್‌ನ ಜೈ ಹನುಮಾನ್ ಚಿತ್ರ ಒಪ್ಪಿಕೊಂಡಿದ್ದು ಮತ್ತು ತಮ್ಮದೇ ರಿಷಬ್ ಶೆಟ್ಟಿ ಫಿಲ್ಮ್ಸ್ ಬ್ಯಾನರ್ ಕಡೆಗೆ ಹೆಚ್ಚು ಗಮನ ಹರಿಸುತ್ತಿರುವುದು ಹೊಂಬಾಳೆ ಸಂಸ್ಥೆಗೆ ಇಷ್ಟವಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿದ್ದವು.  

ಈ ಕುರಿತು ಮಾಧ್ಯಮಗಳು ರಿಷಬ್ ಅವರಲ್ಲಿ ಪ್ರಶ್ನಿಸಿದಾಗ, "ಸಮಯ ಬಂದಾಗ ನಾನೇ ಎಲ್ಲದಕ್ಕೂ ಉತ್ತರ ಕೊಡುತ್ತೇನೆ" ಎಂದು ಹೇಳಿ ಸುಮ್ಮನಾಗಿದ್ದಾರೆ. ನಿಜಕ್ಕೂ ಇಬ್ಬರ ಮಧ್ಯೆ ಬಿರುಕು ಮೂಡಿದೆಯಾ ಅಥವಾ ಇವೆಲ್ಲ ಬರಿ ಗಾಳಿ ಸುದ್ದಿಯಾ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.