ರಾಜ್ಯ ರಾಜಕಾರಣದಲ್ಲಿ ಸದ್ಯಕ್ಕೆ ತೀವ್ರ ಸಂಚಲನ ಸೃಷ್ಟಿ ಮಾಡುತ್ತಿರುವ ಸುದ್ದಿ ಎಂದರೆ ಸ್ಟಿಂಗ್ ಆಪರೇಷನ್. ಇದ ಭಾಗವಾಗಿ ವಿಡಿಯೊ ಹೊರಬಿದ್ದಿದೆ ಎಂಬ ಊಹಾಪೋಹಗಳಿದ್ದು ಮಾಜಿ ಸಿಎಂ ಸಿದ್ದರಾಮಯ್ಯ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಆದರೆ ಈಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯನವರು ಈ ವಿಚಾರದಲ್ಲಿ ಸ್ಟೇ ತರದೆ ಧೈರ್ಯವಾಗಿ ಫೈಟ್ ಮಾಡಬೇಕಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಮೈಸೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ರಮೇಶ್ ಜಾರಕಿಹೊಳಿ ಕೆಲ ಹೊತ್ತು ಗೌಪ್ಯ ಮಾತುಕತೆ ನಡೆಸಿದರು ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ವಿಷಯ ಹೇಳಿದ್ದಾರೆ.ತಮ್ಮಿಬ್ಬರ ಭೇಟಿಯ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ ರಮೇಶ್ ಜಾರಕಿಹೊಳಿ ಸಿದ್ದರಾಮಯ್ಯ ಯಾವ ಪಕ್ಷದಲ್ಲಿದ್ದರೂ ಅವರು ನಮ್ಮ ನಾಯಕರು. ನಾನು ಈಗ ಆ ಸ್ಟಿಂಗ್ ವಿಚಾರವಾಗಿ ಹೆಚ್ಚು ಮಾತನಾಡುವುದಿಲ್ಲ.ನಾನು ಬೇರೆಯದೇ ವಿಚಾರವಾಗಿ ಅವರನ್ನು ಮಾತನಾಡಿಸಲು ಬಂದಿದ್ದೆ. ಇದೊಂದು ಖಾಸಗಿ ಭೇಟಿ ಅಷ್ಟೇ ಎಂದು ಹೇಳಿದರು. ಸ್ಟಿಂಗ್ ಗದ್ದಲದ ನಡುವೆಯೇ ಸಿದ್ದರಾಮಯ್ಯ ಹಾಗೂ ರಮೇಶ್ ಜಾರಕಿಹೊಳಿ ಭೇಟಿ ತೀವ್ರ ಚರ್ಚಗೆ ಕಾರಣವಾಗಿದೆ.