
ಸಾಮಾನ್ಯವಾಗಿ ನಾಡಹಬ್ಬ ದಸರಾ ಎಂದರೆ ಕರಾವಳಿ ಭಾಗದಲ್ಲಿ ವಿಶೇಷ ಸಂಭ್ರಮ. ಆದರೆ ಆಗ್ನೆಸ್ ಕಾಲೇಜು ಆಡಳಿತ ಮಂಡಳಿ ಇಂದಿನಿಂದ ಅಕ್ಟೋಬರ್ 28ರವರೆಗೆ ಪರೀಕ್ಷೆಗಳನ್ನು ಆಯೋಜಿಸಿದೆ. ರಜೆ ನೀಡುವಂತೆ ಮುಂಚೆಯೇ ಮನವಿ ಮಾಡಿಕೊಂಡರೂ ಕಾಲೇಜು ಆಡಳಿತ ಕ್ಯಾರೆ ಎನ್ನದೆ ಪರೀಕ್ಷೆ ಮುಂದುವರಿಸಿದೆ ಎಂದು ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಬ್ಬದ ಹೊತ್ತಿನಲ್ಲಿ ಓದುವುದು ಮತ್ತು ಊರಿಗೆ ತೆರಳಲು ಸಾಧ್ಯವಾಗದೆ ಪರದಾಡುವಂತಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಈ ಪ್ರತಿಭಟನೆಗೆ ಎಬಿವಿಪಿ ಸಂಘಟನೆಯೂ ಬೆಂಬಲ ನೀಡಿದ್ದು, ಆಡಳಿತ ಮಂಡಳಿಯ ಈ ಧೋರಣೆಯನ್ನು ಖಂಡಿಸಿ ಘೋಷಣೆಗಳನ್ನು ಕೂಗಲಾಗಿದೆ. ಈಗಾಗಲೇ ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ. ಕಾಲೇಜಿನ ಮುಂಭಾಗದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿನಿಯರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಪೋಲೀಸರ ಕಾರನ್ನು ತಡೆದು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ ವಿದ್ಯಾರ್ಥಿಗಳು. ಪರೀಕ್ಷೆಯನ್ನು ತಕ್ಷಣವೇ ಮುಂದೂಡಬೇಕು ಮತ್ತು ದಸರಾ ಹಬ್ಬಕ್ಕೆ ರಜೆ ಘೋಷಿಸಬೇಕು ಎಂಬುದು ವಿದ್ಯಾರ್ಥಿಗಳ ಮತ್ತು ಸಂಘಟನೆಗಳ ಪ್ರಮುಖ ಆಗ್ರಹವಾಗಿದೆ.

