ನವರಾತ್ರಿಯ ಪ್ರತಿದಿನವೂ ಶುಭವೇ.. ಈ ಅವಧಿಯಲ್ಲಿ ಪ್ರತಿಯೊಂದು ದಿನವೂ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಅದ್ರಂತೆ ನವರಾತ್ರಿಯ ಎರಡನೇ ದಿನದಂದು ಬ್ರಹ್ಮಚಾರಿಣಿಯನ್ನ ಪೂಜೆ ಮಾಡಲಾಗುತ್ತದೆ. ಈಕೆ ಕೂಡಾ ದುರ್ಗಾ ಮಾತೆಯ ಪ್ರತಿರೂಪ ಎಂದೇ ಹೇಳಲಾಗುತ್ತದೆ. ಈ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರ ಜೊತೆಗೆ ಉಪವಾಸ ವ್ರತವನ್ನೂ ಮಾಡಲಾಗುತ್ತೆ. ಬ್ರಹ್ಮಚಾರಿಣಿಯನ್ನು ಪೂಜಿಸುವುದರಿಂದ ಭಕ್ತರು ಸಂತೋಷವನ್ನು ಪಡೆದುಕೊಳ್ಳುತ್ತಾರೆ. ಇದರೊಂದಿಗೆ ಭಕ್ತರ ಜೀವನದಲ್ಲಿ ದುಃಖ ಮತ್ತು ತೊಂದರೆಗಳು ನಿವಾರಣೆಯಾಗುತ್ತವೆ. ಹಾಗಿದ್ರೆ ನವರಾತ್ರಿ ಹಬ್ಬದ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಹೇಗೆ ಪೂಜಿಸುವುದರ ವಿಶೇಷತೆ ಮತ್ತು ಮಹತ್ವದ ಕುರಿತು ಇವತ್ತು ತಿಳಿದುಕೊಳ್ಳೋಣ. 

ಇವತ್ತು ಪೂಜೆ ಹೇಗಿರಬಹೇಕು ಎಂದರೆ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸ್ಬೇಕು. ಹಾಗೇ ತಾಯಿಗೆ ಹೂವು.. ಅಕ್ಷತೆ, ಕುಂಕುಮ, ಶ್ರೀಗಂಧ ಇತ್ಯಾದಿಗಳನ್ನ ಅರ್ಪಿಸಬೇಕು. ಜೊತೆಗೆ ಧೂಪದ್ರವ್ಯ ಮತ್ತು ದೀಪಗಳನ್ನ ಬೆಳಗಿಸುವ ಮೂಲಕ ಬ್ರಹ್ಮಚಾರಿಣಿ ದೇವಿಯ ಮಂತ್ರಗಳನ್ನು ಭಕ್ತಿಯಿಂದ ಪಠಿಸ್ಬೇಕು. ಹಾಗೇ ಆರತಿ ಮಾಡಿ. ಪಂಚಾಮೃತವನ್ನು ನೈವೇದ್ಯವಾಗಿ ಅರ್ಪಿಸಿ ಮತ್ತು ಸಿಹಿತಿಂಡಿಗಳನ್ನು ಅರ್ಪಿಸಬೇಕು . 

ಯಾವ ಮಂತ್ರವನ್ನು ಪಠಣೆ ಮಾಡಬೇಕು.?
ಯಾ ದೇವಿ ಸರ್ವಭೂತೇಷು ಮಾ ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ಈ ಮಂತ್ರ ಅತ್ಯಂತ ಪ್ರಭಾವಶಾಲಿಯಾಗಿದ್ದು.. ಇದನ್ನ ಪಠಣ ಮಾಡೋದ್ರಿಂದ ದೇವಿ ಪ್ರಸನ್ನಳಾಗ್ತಾಳೆ. 

ಬ್ರಹ್ಮಚಾರಿಣಿ ಪದದ ಅರ್ಥವೇನು.? 
ತಾಯಿ ಬ್ರಹ್ಮಚಾರಿಣಿಯನ್ನು ತಪಸ್ಸಿನ ದೇವತೆ ಎಂದು ಕರೆಯಲಾಗುತ್ತದೆ. ಆಕೆಯ ಹೆಸರೇ ಹಲವು ರೀತಿಯ ಅರ್ಥಗಳನ್ನು ನೀಡುತ್ತದೆ. ಬ್ರಹ್ಮ ಎಂದರೆ ತಪಸ್ಸು ಮತ್ತು ಚಾರಿಣಿ ಎಂದರೆ ನಡೆಸುವವರು. ಬ್ರಹ್ಮಚಾರಿಣಿ ಎಂದರೆ ತಪಸ್ಸನ್ನು ಮಾಡುವವಳು ಎಂಬರ್ಥವಾಗಿದೆ. ಇನ್ನು ತಾಯಿ ಬ್ರಹ್ಮಚಾರಿಣಿ ಕಮಲ ಮತ್ತು ದಾಸವಾಳದ ಹೂವುಗಳನ್ನು ತುಂಬಾ ಇಷ್ಟಪಡುತ್ತಾಳೆ, ಆದ್ದರಿಂದ ಖಂಡಿತವಾಗಿಯೂ ಈ ಹೂವುಗಳನ್ನ ಅರ್ಪಿಸಿ. ಇದರ ಜೊತೆ ಕಲಶ ಮತ್ತು ದೇವತೆಯನ್ನ ವಿಧಿ-ವಿಧಾನಗಳ ಪ್ರಕಾರ ಪೂಜಿಸಿಬೇಕು. ತುಪ್ಪ ಮತ್ತು ಕರ್ಪೂರದಿಂದ ಮಾಡಿದ ದೀಪದಿಂದ ಕಡ್ಡಾಯವಾಗಿ ದೇವಿಗೆ ಆರತಿ ಮಾಡಬೇಕು. ಯಾವ ಓರ್ವ ವ್ಯಕ್ತಿ ತಾಯಿ ಬ್ರಹ್ಮಚಾರಿಣಿಯನ್ನು ಪೂಜಿಸುತ್ತಾನೋ ಅವನು ತಪಸ್ಸು, ತ್ಯಾಗ, ಸಂಯಮ ಮತ್ತು ಪುಣ್ಯವನ್ನ ಪಡೆದುಕೊಳ್ಳುತ್ತಾರೆ. 

ಯಾವ ಬಣ್ಣ, ಯಾವ ಪ್ರಸಾದ ದೇವಿಗೆ ಇಷ್ಟ.? 
ಇದರ ಜೊತೆ ತಾಯಿ ಬ್ರಹ್ಮಚಾರಿಣಿಗೆ ಹಳದಿ ಬಣ್ಣದ ಸಿಹಿ ತಿಂಡಿಯನ್ನ ಅರ್ಪಿಸಲು ಮರೆಯದಿರಿ. ಕೇಸರಿ ಬಾತ್ ರೀತಿಯ ಸಿಹಿತಿಂಡಿಗಳು ಹಾಗೂ ಬಾಳೆಹಣ್ಣು ಇತ್ಯಾದಿಗಳನ್ನ ಅರ್ಪಿಸಬೇಕು. ಇದರಿಂದ ತಾಯಿ ಬ್ರಹ್ಮಚಾರಿಣಿ ಬಹಳ ಸಂತೋಷಪಡುತ್ತಾಳೆ ಮತ್ತು ಆಕೆಯ ಆಶೀರ್ವಾದವನ್ನು ಕರುಣಿಸುತ್ತಾಳೆ ಅನ್ನೋ ನಂಬಿಕೆ ಇದೆ. ಹಾಗೇ ದೇವಿ ಬ್ರಹ್ಮಚಾರಿಣಿಯನ್ನ ಪೂಜಿಸುವಾಗ ಆಕೆಗೆ ಸಕ್ಕರೆ ಅಥವಾ ಬೆಲ್ಲವನ್ನು ಅರ್ಪಿಸುವುದು ಮಂಗಳಕರವೆಂದು ನಂಬಲಾಗಿದೆ. ನೀವು ಸಕ್ಕರೆ ಮತ್ತು ಬೆಲ್ಲದಿಂದ ತಯಾರಿಸಿದ ಖಾದ್ಯವನ್ನ ಕೂಡ ದೇವಿಗೆ ಅರ್ಪಿಸಬಹುದು. ಇದ್ರಿಂದ ದೇವಿ ಪ್ರಸನ್ನಳಾಗ್ತಾಳೆ. 

ಬ್ರಹ್ಮಚಾರಣಿ ಯಾರು.?
ಇದರ ಜೊತೆ ನಾವು ಬ್ರಹ್ಮಚಾರಣಿ ಯಾರು ಅನ್ನೋದನ್ನ ತಿಳಿದುಕೊಳ್ಳೋಣ.. ಈ ದೇವಿಯು ತನ್ನ ಪೂರ್ವ ಜನ್ಮದಲ್ಲಿ ಪರ್ವತ ರಾಜನ ಮನೆಯಲ್ಲಿ ಹುಟ್ಟಿರುತ್ತಾಳೆ. ನಾರದರು ಉಪದೇಶ ಮಾಡಿದಂತೆ ದೇವಿಯು ಶಿವನನ್ನು ಪತಿಯನ್ನಾಗಿ ಪಡೆಯುವುದಕ್ಕೆ ತಪಸ್ಸು ಮಾಡುತ್ತಾಳೆ. ಅನೇಕ ವರ್ಷಗಳ ಕಾಲ ದೇವಿಯು ಹಣ್ಣು ಎಲೆಗಳನ್ನ ತಿಂದು ಜೀವಿಸುತ್ತಾಳೆ. ಆ ನಂತರ ಕೇವಲ ನೆಲದ ಮೇಲೆ ಬಿದ್ದ ಒಣಗಿದ ಬಿಲ್ವಪತ್ರೆಗಳನ್ನ ಮಾತ್ರ ಸೇವಿಸುತ್ತಾಳೆ. ಅದಾದ ಮೇಲೆ ಅವುಗಳನ್ನು ಸಹ ಸೇವಿಸುವುದನ್ನು ನಿಲ್ಲಿಸುತ್ತಾಳೆ. ಹೀಗೆ ವರ್ಷಗಳು ಕಳೆದರೂ ಆಹಾರವನ್ನೂ ಸೇವಿಸದೆ ತಪಸ್ಸು ಮಾಡಿದ ದೇವಿಯು ಎಲೆಗಳನ್ನು ಸಹ ಸೇವಿಸುವುದನ್ನು ನಿಲ್ಲಿಸಿದ್ದರಿಂದ ಆ ತಾಯಿಗೆ ‘ಅಪರ್ಣಾ’ ಅನ್ನೋ ಹೆಸರಿನಿಂದಲೂ ಕರೆಯಲಾಗುತ್ತೆ. ನಂತರ ತಾಯಿಯ ಆ ತಪಸ್ಸಿಗೆ ದೇವತೆಗಳು ಮೆಚ್ಚಿ, ಆ ಸಾಕ್ಷಾತ್ ಚಂದ್ರಮೌಳಿಯೇ ನಿನ್ನ ಪತಿಯಾಗುತ್ತಾನೆ, ಇನ್ನು ತಪಸ್ಸನ್ನು ನಿಲ್ಲಿಸಿ, ಮನೆಗೆ ಹೋಗುವಂತೆ ಹೇಳುತ್ತಾರೆ. 

ಅಂದ ಹಾಗೆ ಅಂಥ ಕಠಿಣ ತಪಸ್ಸು ಮಾಡಿದ್ದರಿಂದ ಕೃಶ ಕಾಯಳಾಗಿದ್ದ ತನ್ನ ಮಗಳನ್ನು ಆಕೆಯ ತಾಯಿಯಾದ ಮೇನಾದೇವಿ ಉ-ಮಾ ಹೀಗೆ ಮಾಡಬೇಡ ಎಂದು ಕೇಳಿಕೊಳ್ಳುತ್ತಾರೆ. ಆದ್ದರಿಂದ ಬ್ರಹ್ಮಚಾರಿಣಿ ದೇವಿಯ ಇನ್ನೊಂದು ಹೆಸರು ಉಮಾ ಅಂತಲೂ ಇದೆ. ಬ್ರಹ್ಮಚಾರಿಣಿಯೆಂದರೆ ಇನ್ನೂ ಮದುವೆಯಾಗದಿರುವ ಯುವತಿ ಎಂದರ್ಥ ಸೌಮ್ಯಳೂ, ಶಾಂತ ಸ್ವಭಾವವನ್ನು ಧರಿಸಿರುವ ಬ್ರಹ್ಮಚಾರಿಣಿಯು ಮನಸ್ಸನ್ನು ಪ್ರಶಾಂತಗೊಳಿಸಿ, ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಾಳೆ.  

ಈ ದೇವಿಯನ್ನು ಶಾಂತ ರೂಪದಲ್ಲಿ ಚಿತ್ರಿಸಲಾಗಿದೆ. ಈಕೆಯು ತನ್ನ ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲವನ್ನು ಹಿಡಿದುಕೊಂಡಿರುತ್ತಾಳೆ. ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿರುತ್ತಾಳೆ. ಈಕೆಯನ್ನು ಪೂಜಿಸುವುದರಿಂದ ಮನಸ್ಸು ಶಾಂತವಾಗಿರುತ್ತೆ. ಈ ತಾಯಿ ಹಂಸವಾಹಿನಿಯಾಗಿ, ಬಿಳಿಯ ಬಣ್ಣದಲ್ಲಿ ಶೋಭಿಸುತ್ತಾ, ಬಿಳಿಯ ಬಣ್ಣದ ಹೂವಿನ ಮಾಲೆಗಳಿಂದ ಅಲಂಕೃತಳಾಗಿರುತ್ತಾಳೆ. ಆದ್ದರಿಂದ ಬ್ರಹ್ಮಚಾರಿಣಿ ಪೂಜೆಯನ್ನು ಮಾಡುವಾಗ ಬಿಳಿಯ ಬಣ್ಣದ ಹೂವುಗಳನ್ನು ಬಳಸುವುದು ಶ್ರೇಷ್ಠ ಅಂತಾನೇ ಹೇಳಲಾಗುತ್ತೆ. 

ಇನ್ನು ಮತ್ತೊಂದು ವಿಷಯ ಎಂದರೆ ಯಾರ ಸಹಾಯವೂ ದೊರೆಯದೆ ಜೀವನದಲ್ಲಿ ಕಷ್ಟ ಪಡುತ್ತಾ ಇರುವವರಿಗೆ ಈ ದೇವಜಾತಾ ಸ್ವರೂಪಿಣಿಯ ಆರಾಧನೆಯಿಂದ ಅನಿರೀಕ್ಷಿತ ಸಹಾಯಗಳು ಲಭಿಸುತ್ತವೆ. ಇನ್ನು ಬೆಳಗ್ಗೆ ಪೂಜೆಯ ನಂತರ ಸಂಧ್ಯಾ ಸಮಯದಲ್ಲಿ ಮುತ್ತೈದೆಯರಿಗೆ ಅರಿಶಿನ- ಕುಂಕುಮವನ್ನು ಅಥವಾ ಬಾಗಿನವನ್ನು ಕೊಡುವುದರಿಂದ ಪೂರ್ಣಫಲ ಸಿಗುತ್ತೆ. ಬ್ರಹ್ಮಚಾರಣಿ ದೇವಿಯು ಮಂಗಳ ಗ್ರಹದ ಅಧಿಪತಿ ಅಂತ ಹೇಳಲಾಗುತ್ತೆ. ಆಕೆಯು ಎಲ್ಲಾ ಅದೃಷ್ಟವನ್ನು ನೀಡುವಳು ಮತ್ತು ಭಕ್ತರ ಮಾನಸಿಕ ಕ್ಷೋಭೆ ನಿವಾರಣೆ ಮಾಡಿ ಅವರ ದುಃಖ ನಿವಾರಿಸುವಳು. ಮಂಗಳ ದೋಷ ಮತ್ತು ಜಾತಕದಲ್ಲಿ ಮಂಗಳ ಗ್ರಹವು ಕೆಟ್ಟ ಸ್ಥಾನದಲ್ಲಿದ್ದರೆ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಿದ್ರೆ ಮಂಗಳ ದೋಷ ನಿವಾರಣೆ ಆಗುತ್ತೆ.

ಬ್ರಹ್ಮಚಾರಿಣಿ ದೇವಿಯನ್ನ ಎರಡನೇ ದಿನ ಪೂಜಿಸುವುದು ದೊಡ್ಡದೊಂದು ತಪಸ್ಸು ಮಾಡಿದ್ದಕ್ಕೆ ಸಮ ಅಂತಾನೇ ಹೇಳಲಾಗುತ್ತೆ.. ಅಲ್ಲದೇ ತಾಯಿ ಭಕ್ತರಿಗೆ ತ್ಯಾಗ, ಸದ್ಗುಣ ಮತ್ತು ಸಂಪತ್ತನ್ನು ನೀಡ್ತಾಳೆ ಯಶಸ್ಸಿಗೆ ಇರುವಂತಹ ಯಾವುದೇ ರೀತಿಯ ಅಡೆತಡೆಗಳನ್ನ ಇದು ನಿವಾರಣೆ ಮಾಡ್ತಾಳೆ. ಮತ್ತು ಕುಟುಂಬದಲ್ಲಿ ಒಳ್ಳೆಯ ಮಾನಸಿಕ ಶಾಂತಿಯು ಬರುವುದು. ನಿಮ್ಮ ಎಲ್ಲಾ ಚಟುವಟಿಕೆಗಳಲ್ಲಿ ಸಂತೃಪ್ತಿಯು ಸಿಗುತ್ತೆ. ಈ ಎಲ್ಲಾ ಕಾರಣಗಳಿಂದ ನವರಾತ್ರಿಯಂದು ಬ್ರಹ್ಮಚಾರಣಿಯನ್ನ ಆರಾಧಿಸಿ ಸಕಲ ಸುಖವನ್ನ ನಮ್ಮದಾಗಿಸಿಕೊಳ್ಳೋಣ.