ಮನೆಬಳಕೆಯ ಡಿಜಿಟಲ್ ಪಾವತಿಗಳಿಗೆ ಬಿಗ್ ರಿಲೀಫ್ ಸಿಗುವ ಸಾಧ್ಯತೆಯಿದೆ. ಅಕ್ಟೋಬರ್ 15, 2026 ರಿಂದ ಜಾರಿಗೆ ಬರಬೇಕಿದ್ದ ಯುಪಿಐ ಎಂಡಿಆರ್ ಶುಲ್ಕ ನಿಯಮವನ್ನು 2027ರ ಜನವರಿವರೆಗೆ ಮುಂದೂಡುವಂತೆ ಸರ್ಕಾರ ಹಾಗೂ ಎನ್‌ಪಿಸಿಐ ಗಂಭೀರ ಚಿಂತನೆ ನಡೆಸಿವೆ.

ಇದಕ್ಕೆ ಕಾರಣ ಹಬ್ಬದ ಸೀಸನ್‌ನಲ್ಲಿ ವ್ಯಾಪಾರಕ್ಕೆ ಯಾವುದೇ ತೊಂದರೆ ಆಗಬಾರದು ಎಂಬುದು ಈ ನಿರ್ಧಾರದ ಪ್ರಮುಖ ಉದ್ದೇಶ. ದೀಪಾವಳಿ ಮತ್ತು ಹೊಸ ವರ್ಷದ ಈ ಬಿಡುವಿಲ್ಲದ ಸಮಯದಲ್ಲಿ ಚಿಲ್ಲರೆ ವ್ಯಾಪಾರ ಗರಿಷ್ಠ ಮಟ್ಟದಲ್ಲಿ ನಡೆಯುತ್ತದೆ. ಈ ಹೊತ್ತಿನಲ್ಲಿ ಹೊಸ ಶುಲ್ಕ ಜಾರಿಗೆ ಬಂದರೆ ವ್ಯಾಪಾರಕ್ಕೆ ಹೊಡೆತ ಬೀಳಬಹುದು ಎಂಬ ಆತಂಕ ವರ್ತಕರದ್ದಾಗಿತ್ತು. ಅಲ್ಲದೆ ಫಿನ್‌ಟೆಕ್ ಸಂಸ್ಥೆಗಳು ಹಾಗೂ ಬ್ಯಾಂಕುಗಳು ತಮ್ಮ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಬದಲಾಯಿಸಲು ಹೆಚ್ಚಿನ ಕಾಲಾವಕಾಶ ಕೇಳಿದ್ದವು. ಈ ಎಲ್ಲಾ ಕಾರಣಗಳಿಂದ ಎಂಡಿಆರ್ ಜಾರಿ ವಿಳಂಬವಾಗುವ ಸುದ್ದಿ ಹೊರಬಿದ್ದ ಬೆನ್ನಲ್ಲೇ, ಪೇಟಿಎಂ ಮತ್ತು ಮೊಬಿಕ್ವಿಕ್‌ನಂತಹ ಪ್ರಮುಖ ಡಿಜಿಟಲ್ ಕಂಪನಿಗಳ ಷೇರುಗಳು ಶೇಕಡಾ 7ಕ್ಕೂ ಹೆಚ್ಚು ಜಿಗಿತ ಕಂಡಿವೆ.

ಇನ್ನು ಸಾಮಾನ್ಯ ಗ್ರಾಹಕರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ ಎಂಬುದು ನಿಮಗೆಲ್ಲ ಈಗಾಗಲೇ ಗೊತ್ತಿದೆ. ರೂ. 2,000ರವರೆಗಿನ ವಹಿವಾಟುಗಳು ಮತ್ತು ಸಾಮಾನ್ಯ ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಹಣ ವರ್ಗಾವಣೆ ಎಂದಿನಂತೆ ಸಂಪೂರ್ಣ ಉಚಿತವಾಗಿರಲಿದೆ. ಕೇವಲ ರೂ. 2,000ಕ್ಕಿಂತ ಹೆಚ್ಚಿನ ವ್ಯಾಪಾರಿ ಪಾವತಿಗಳಿಗೆ ಮಾತ್ರ ಶೇ. 0.4ರಷ್ಟು ಎಂಡಿಆರ್ ವಿಧಿಸುವ ಪ್ರಸ್ತಾವನೆ ಇತ್ತು. 75,000 ಮತ್ತು ಅದಕ್ಕಿಂತ ಹೆಚ್ಚಿನ ದೊಡ್ಡ ಮೊತ್ತದ ವಹಿವಾಟುಗಳಿಗೆ ಗರಿಷ್ಠ ಶುಲ್ಕವನ್ನು 300 ಕ್ಕೆ ಸೀಮಿತಗೊಳಿಸಲಾಗಿದೆ. ಹಾಗೆಯೇ ತಿಂಗಳಿಗೆ ರೂ. 1 ಲಕ್ಷದವರೆಗೆ ಆದಾಯ ಗಳಿಸುವ ಸಣ್ಣ ವ್ಯಾಪಾರಿಗಳಿಗೆ ಈ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಪೆಟ್ರೋಲ್ ಬಂಕ್, ವಿಮೆ ಹಾಗೂ ರೈಲ್ವೆ ಮುಂತಾದ ದೊಡ್ಡ ಮೊತ್ತದ ಸೇವೆಗಳಿಗೆ ಗರಿಷ್ಠ ಶುಲ್ಕದ ಮಿತಿಯನ್ನೂ ನಿಗದಿಪಡಿಸಲಾಗಿದೆ. 

ಸದ್ಯಕ್ಕೆ ಈ ಬಗ್ಗೆ ಎಲ್ಲೆಡೆ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಎನ್‌ಪಿಸಿಐ ಅಥವಾ ಸರ್ಕಾರದಿಂದ ಅಧಿಕೃತ ಆದೇಶ ಇನ್ನಷ್ಟೇ ಹೊರಬೀಳಬೇಕಿದೆ. ಹಬ್ಬದ ಸಮಯದಲ್ಲಿ ವ್ಯಾಪಾರಿಗಳಿಗೆ ಹಾಗೂ ಯುಪಿಐ ಗ್ರಾಹಕರಿಗೆ ಇದೊಂದು ದೊಡ್ಡ ಸಮಾಧಾನದ ಸುದ್ದಿಯಾಗಿದೆ.