KPSC ಅಕ್ರಮ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಬಂಧಿಸಿದೆ.ಇದರ ಬೆನ್ನಲ್ಲೇ ಕೆಪಿಎಸ್ಸಿ ಹಾಲಿ ಸದಸ್ಯೆ ಡಾ.ಬಿ.ವಿ.ಗೀತಾ ಅವರನ್ನೂ ಇಡಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. 

ಪಶುವೈದ್ಯಾಧಿಕಾರಿ ಹಾಗೂ ವಿವಿಧ ಹುದ್ದೆಗಳ ನೇಮಕಾತಿ ಹಗರಣದ ತನಿಖೆ ತೀವ್ರಗೊಳಿಸಿರುವ ಇಡಿ ಅಧಿಕಾರಿಗಳು, ಇಂದು ಎರಡನೇ ಬಾರಿಗೆ ಶಿವಶಂಕರಪ್ಪ ಸಾಹುಕಾರ್ ಅವರ ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸದ ಮೇಲೆ ಜಂಟಿ ದಾಳಿ ನಡೆಸಿ ಪ್ರಮುಖ ದಾಖಲೆಗಳನ್ನು ಪರಿಶೀಲಿಸಿದರು. ಕೋಟ್ಯಂತರ ರೂಪಾಯಿ ಲಂಚ ಹಾಗೂ ಅಕ್ರಮ ಹಣ ವರ್ಗಾವಣೆ ಆರೋಪದಡಿ ನಡೆದ ಈ ಸುದೀರ್ಘ ಶೋಧ ಕಾರ್ಯಾಚರಣೆಯ ಬೆನ್ನಲ್ಲೇ ಸಾಹುಕಾರ್ ಅವರ ಬಂಧನವಾಗಿದ್ದು, ಸದಸ್ಯೆ ಗೀತಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಬೆಂಗಳೂರಿನ ಸಂಜಯನಗರದಲ್ಲಿರುವ ಶಿವಶಂಕರಪ್ಪ ಸಾಹುಕಾರ್ ನಿವಾಸಕ್ಕೆ ಎರಡು ಇನೋವಾ ವಾಹನಗಳಲ್ಲಿ ನಾಲ್ಕಕ್ಕೂ ಹೆಚ್ಚು ಇಡಿ ಅಧಿಕಾರಿಗಳ ತಂಡ ಆಗಮಿಸಿತು. ಕೇಂದ್ರ ಮೀಸಲು ಪೊಲೀಸ್ ಪಡೆಯ ಭದ್ರತೆಯಲ್ಲಿ ಸುಮಾರು 12 ಗಂಟೆಯಿಂದಲೇ ಸುದೀರ್ಘ ಪರಿಶೀಲನೆ ನಡೆಸಿತು. ಶಿವಶಂಕರಪ್ಪ ಕೆಪಿಎಸ್ ಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ನಡೆದ ಹುದ್ದೆಗಳ ಹಂಚಿಕೆ, ಪ್ರಶ್ನೆಪತ್ರಿಕೆ ಸೋರಿಕೆ, ಬ್ಯಾಂಕ್ ಖಾತೆಗಳ ವಹಿವಾಟು ಹಾಗೂ ಆಸ್ತಿ-ಪಾಸ್ತಿಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನು ಅಧಿಕಾರಿಗಳು ತೀವ್ರ ತನಿಖೆಗೆ ಒಳಪಡಿಸಿದರು.

ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಶಿವಶಂಕರಪ್ಪ ಅವರ ಜೊತೆಗೆ ಕೆಪಿಎಸ್ಸಿ ಸದಸ್ಯೆ ಡಾ. ಬಿ.ವಿ. ಗೀತಾ ಅವರ ನಿವಾಸದ ಮೇಲೂ ಏಕಕಾಲದಲ್ಲಿ ದಾಳಿ ನಡೆಸಿ ಮಹತ್ವದ ಕಡತಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಅವರು ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪಶುವೈದ್ಯಾಧಿಕಾರಿ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಯಲ್ಲಿ ಕೋಟ್ಯಂತರ ರೂಪಾಯಿ ಲಂಚ ಪಡೆಯಲಾಗಿದೆ ಎಂಬ ಗಂಭೀರ ಆರೋಪಗಳಿವೆ. ಅರ್ಹ ಅಭ್ಯರ್ಥಿಗಳಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿ, ಅಕ್ರಮ ಮಾರ್ಗಗಳ ಮೂಲಕ ಒಎಂಆರ್ ಶೀಟ್ ಮೌಲ್ಯಮಾಪನ ಮತ್ತು ಮೆರಿಟ್ ಪಟ್ಟಿಯಲ್ಲಿ ಅಕ್ರಮ ಎಸಗಲಾಗಿದೆ ಎಂಬ ತನಿಖಾ ವರದಿಗಳ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಈ ಮಹತ್ವದ ಕ್ರಮ ಕೈಗೊಂಡಿದ್ದಾರೆ.