ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮತ್ತೊಂದು ಹೊರೆ ಬಿದ್ದಿದೆ. ಇಂಧನ ಬೆಲೆ ಏರಿಕೆ ಹಾಗೂ ವಾಹನದ ಬಿಡಿಭಾಗಗಳ ವೆಚ್ಚ ಹೆಚ್ಚಾಗಿರುವುದರಿಂದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಿದ್ದು, ಬರುವ ನವೆಂಬರ್ 1, 2026 ರಿಂದ ಹೊಸ ದರಗಳು ಜಾರಿಗೆ ಬರಲಿವೆ.

ಹೊಸ ಪ್ರಯಾಣ ದರ ಹೀಗಿದೆ

ಕನಿಷ್ಠ ದರ: ಮೊದಲ 1.5 ಕಿ.ಮೀ. ಪ್ರಯಾಣಕ್ಕೆ 40 ರೂಪಾಯಿ ನಿಗದಿಪಡಿಸಲಾಗಿದೆ.

ಹೆಚ್ಚುವರಿ ಕಿ.ಮೀ. ದರ: 1.5 ಕಿ.ಮೀ. ನಂತರ ಸಾಗುವ ಪ್ರತಿ ಕಿ.ಮೀ.ಗೆ 23 ರೂಪಾಯಿ ಪಾವತಿಸಬೇಕು. ಈ ಹಿಂದೆ ಇದು 20 ಇತ್ತು.

ಪ್ರಯಾಣಿಕರು & ರಾತ್ರಿ ದರ: ಗರಿಷ್ಠ ಮೂವರಿಗೆ ಮಾತ್ರ ಈ ದರ ಅನ್ವಯ. ರಾತ್ರಿ 10 ರಿಂದ ಬೆಳಗಿನ ಜಾವ 5 ರವರೆಗೆ ಸಂಚರಿಸಿದರೆ ಮಾಮೂಲಿ ದರಕ್ಕಿಂತ ಒಂದೂವರೆ ಪಟ್ಟು ದರ ನೀಡಬೇಕಾಗುತ್ತದೆ.

ಆಟೋ ನಿಲ್ಲಿಸಿ ಕಾಯುವ ಮೊದಲ 10 ನಿಮಿಷ ಸಂಪೂರ್ಣ ಉಚಿತ. ಆ ನಂತರ ಬರುವ ಪ್ರತಿ 15 ನಿಮಿಷಕ್ಕೆ 5 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇನ್ನು ಲಗೇಜ್ ವಿಷಯಕ್ಕೆ ಬಂದರೆ, ಮೊದಲ 20 ಕೆ.ಜಿ.ವರೆಗೆ ಯಾವುದೇ ಶುಲ್ಕವಿಲ್ಲ. ಅದಕ್ಕಿಂತ ಹೆಚ್ಚಿದ್ದರೆ ಪ್ರತಿ 20 ಕೆ.ಜಿ.ಗೆ 5 ರೂಪಾಯಿ ಹೆಚ್ಚುವರಿ ಕೊಡಬೇಕು.

ನವೆಂಬರ್ 1 ರ ಒಳಗಾಗಿ ಎಲ್ಲಾ ಆಟೋ ಚಾಲಕರು ತಮ್ಮ ಫ್ಲ್ಯಾಗ್ ಮೀಟರ್‌ಗಳನ್ನು ರಿಕ್ಯಾಲಿಬ್ರೇಶನ್ ಮಾಡಿಸಿ ಸೀಲ್ ಹಾಕಿಸಿಕೊಳ್ಳುವುದು ಕಡ್ಡಾಯ. ವಾಹನದೊಳಗೆ ಹೊಸ ದರಪಟ್ಟಿ ಪ್ರದರ್ಶಿಸಬೇಕು. ಒಂದು ವೇಳೆ ಮೀಟರ್ ಹಾಕದೆ ನಖರಾ ಮಾಡಿದರೆ ಅಥವಾ ಪ್ರಯಾಣಿಕರಿಂದ ಜಾಸ್ತಿ ಹಣ ವಸೂಲಿ ಮಾಡಿದರೆ ಪರ್ಮಿಟ್ ರದ್ದು ಮಾಡುವ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಟಿಒ ಮತ್ತು ಪೊಲೀಸರು ಎಚ್ಚರಿಸಿದ್ದಾರೆ.