ಕಲ್ಕಿ ಭಗವಾನ್ ಅವರ ಪಾರ್ಥಿವ ಶರೀರವನ್ನು ಆಂಧ್ರಪ್ರದೇಶದ ವರದಯ್ಯಪಾಳ್ಯಂನ ಏಕಂ ಕ್ಷೇತ್ರಕ್ಕೆ ತರಲಾಗಿದ್ದು, ಮೂರು ದಿನಗಳ ಕಾಲ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಶನಿವಾರ ಏಕಂ ದೇವಾಲಯದ ಆವರಣದಲ್ಲೇ ಸಂಪ್ರದಾಯಬದ್ಧವಾಗಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.
ಸಾಮಾನ್ಯ ಕುಟುಂಬದಿಂದ ಆಧ್ಯಾತ್ಮಿಕ ಕ್ಷೇತ್ರಕ್ಕೆ
ಕಲ್ಕಿ ಭಗವಾನ್ ಅವರ ಮೂಲ ಹೆಸರು ವಿಜಯ್ ಕುಮಾರ್ ನಾಯ್ಡು. 1949ರ ಮಾರ್ಚ್ 7ರಂದು ತಮಿಳುನಾಡಿನ ವೆಲ್ಲೂರು ಜಿಲ್ಲೆಯ ನಾಥಂ ಗ್ರಾಮದಲ್ಲಿ ಜನಿಸಿದ್ದರು. ಚೆನ್ನೈನ ಡಿ.ಜಿ. ವೈಷ್ಣವ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ ಎಲ್ಐಸಿಯಲ್ಲಿ ಕ್ಲರ್ಕ್ ಆಗಿ ವೃತ್ತಿಜೀವನ ಆರಂಭಿಸಿದ್ದರು.
ನಂತರ ನ್ಯಾಷನಲ್ ಇನ್ಶೂರೆನ್ಸ್ ಏಜೆಂಟ್ ಹಾಗೂ ಶಿಕ್ಷಕರಾಗಿಯೂ ಕೆಲಸ ಮಾಡಿದ್ದರು. 1980ರ ದಶಕದ ಕೊನೆಯಲ್ಲಿ ಆಂಧ್ರಪ್ರದೇಶದ ಕುಪ್ಪಂ ಪ್ರದೇಶದ ಶಾಂತಿಪುರಂನಲ್ಲಿ ಆಶ್ರಮ ಸ್ಥಾಪಿಸಿದರು. ಬಳಿಕ ಚಿತ್ತೂರು ಜಿಲ್ಲೆಯಲ್ಲಿ ‘ಜೀವಾಶ್ರಮ’ ಎಂಬ ಶಾಲೆಯನ್ನು ಆರಂಭಿಸಿ, ಮಕ್ಕಳಲ್ಲಿ ಆತ್ಮಾವಲೋಕನ ಹಾಗೂ ಆಂತರಿಕ ಬೆಳವಣಿಗೆಯನ್ನು ಬೆಳೆಸುವ ಉದ್ದೇಶದೊಂದಿಗೆ ಕಾರ್ಯಕ್ರಮಗಳನ್ನು ನಡೆಸಿದರು.
1990ರ ದಶಕದ ಆರಂಭದಲ್ಲಿ, ಸುಮಾರು 1992-94ರ ಅವಧಿಯಲ್ಲಿ, ತಮ್ಮನ್ನು ವಿಷ್ಣುವಿನ ದಶಮ ಅವತಾರ ‘ಕಲ್ಕಿ’ ಎಂದು ಘೋಷಿಸಿಕೊಂಡಿದ್ದರು. ಬಳಿಕ ತಮಿಳುನಾಡಿನ ನೇಮಂ ಹಾಗೂ ಆಂಧ್ರಪ್ರದೇಶದ ವರದಯ್ಯಪಾಳ್ಯಂನಲ್ಲಿ ತಮ್ಮ ಆಧ್ಯಾತ್ಮಿಕ ಚಟುವಟಿಕೆಗಳನ್ನು ವಿಸ್ತರಿಸಿದರು.
ಧ್ಯಾನ ಹಾಗೂ ‘ಮುಕ್ತಿ ದೀಕ್ಷೆ’ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳ ಮೂಲಕ ದೇಶ-ವಿದೇಶಗಳಲ್ಲಿ ದೊಡ್ಡ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದರು.
200 ಕೋಟಿ ರೂ. ವೆಚ್ಚದ ‘ಏಕಂ’ ದೇವಾಲಯ
ಆಂಧ್ರಪ್ರದೇಶದ ವರದಯ್ಯಪಾಳ್ಯಂ ಮಂಡಲದ ಬತ್ತುಲವಲ್ಲಂ ಸಮೀಪ ಸುಮಾರು 200 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅಮೃತಶಿಲೆಯ ‘ಏಕಂ’ ದೇವಾಲಯ, ಅವರ ಆಧ್ಯಾತ್ಮಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿತ್ತು. ಕಲ್ಕಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಒನ್ನೆಸ್ ಹ್ಯೂಮನ್, ಲೋಕಾ ಫೌಂಡೇಶನ್ ಹಾಗೂ ಮುಕ್ತಿ ಸೇರಿದಂತೆ ವಿವಿಧ ಸಂಸ್ಥೆಗಳ ಮೂಲಕ ಕುಡಿಯುವ ನೀರು, ಉಚಿತ ಕಣ್ಣಿನ ತಪಾಸಣೆ ಮತ್ತು ಶಿಕ್ಷಣ ಸೇರಿದಂತೆ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲಾಗಿತ್ತು.
ಆಧ್ಯಾತ್ಮಿಕ ಚಟುವಟಿಕೆಗಳ ಜತೆಗೆ ಕಲ್ಕಿ ಭಗವಾನ್ ಅವರ ಸಂಸ್ಥೆಗಳು ಹಲವು ವಿವಾದಗಳನ್ನೂ ಎದುರಿಸಿದ್ದವು. ಸಂಸ್ಥೆಗಳ ವಾಣಿಜ್ಯೀಕರಣ ಹಾಗೂ ಭೂ ವಿವಾದಗಳ ಆರೋಪಗಳ ನಡುವೆ 2019ರ ಅಕ್ಟೋಬರ್ನಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿ ದೇಶದ ಗಮನ ಸೆಳೆದಿತ್ತು. ಈ ವೇಳೆ ಅಧಿಕಾರಿಗಳು ನಗದು, ವಿದೇಶಿ ಕರೆನ್ಸಿ ಹಾಗೂ ಚಿನ್ನ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದರು ಎಂದು ವರದಿಯಾಗಿತ್ತು.
2017ರಿಂದಲೇ ಸಂಸ್ಥೆಗಳ ನಿರ್ವಹಣೆಯ ಪ್ರಮುಖ ಜವಾಬ್ದಾರಿಗಳನ್ನು ತಮ್ಮ ಪುತ್ರ ಎನ್.ಕೆ.ವಿ. ಕೃಷ್ಣ ಹಾಗೂ ಸೊಸೆ ಪ್ರೀತಾ ಕೃಷ್ಣ ಅವರಿಗೆ ವಹಿಸಿ ಕಲ್ಕಿ ಭಗವಾನ್ ಆಧ್ಯಾತ್ಮಿಕ ಚಟುವಟಿಕೆಗಳಿಂದ ಹಿಂದೆ ಸರಿದಿದ್ದರು.
ಏಕಂ ಕ್ಷೇತ್ರದಲ್ಲಿ ಅಂತಿಮ ದರ್ಶನ
ಕಲ್ಕಿ ಭಗವಾನ್ ಅವರ ಪಾರ್ಥಿವ ಶರೀರವನ್ನು ಬುಧವಾರ ಬೆಳಗ್ಗೆ ತಿರುಪತಿ ಜಿಲ್ಲೆಯ ವರದಯ್ಯಪಾಳ್ಯಂ ಮಂಡಲದ ಏಕಂ ಕ್ಷೇತ್ರಕ್ಕೆ ತರಲಾಯಿತು. ಬುಧವಾರದಿಂದ ಶುಕ್ರವಾರ ಮಧ್ಯಾಹ್ನದವರೆಗೆ ಭಕ್ತರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ವಿದೇಶಗಳು ಹಾಗೂ ದೇಶದ ವಿವಿಧ ರಾಜ್ಯಗಳಿಂದ ಭಕ್ತರು ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ಏಕಂ ಕ್ಷೇತ್ರದಲ್ಲಿ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ. ವಿದೇಶಗಳಲ್ಲಿರುವ ಭಕ್ತರಿಗೂ ದರ್ಶನಕ್ಕೆ ಅನುಕೂಲವಾಗುವಂತೆ ಆನ್ಲೈನ್ ಲೈವ್ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಶನಿವಾರ ಏಕಂ ದೇವಾಲಯದ ಆವರಣದಲ್ಲೇ ಅಧಿಕೃತ ಲಾಂಛನಗಳು ಹಾಗೂ ಸಂಪ್ರದಾಯಗಳಂತೆ ಕಲ್ಕಿ ಭಗವಾನ್ ಅವರ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಬಳಿಕ ಅಲ್ಲಿಯೇ ಸಮಾಧಿ ನಿರ್ಮಿಸಲು ಟ್ರಸ್ಟ್ ನಿರ್ಧರಿಸಿದೆ ಎಂದು ತಿಳಿದುಬಂದಿದೆ.



