ರಾಜ್ಯದ ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರ ಮಹತ್ವದ ಸೌಲಭ್ಯವೊಂದನ್ನು ಕಲ್ಪಿಸಿದೆ. ಇನ್ನು ಮುಂದೆ ಮುಟ್ಟಿನ ರಜೆ ಪಡೆಯಲು ಮೇಲಾಧಿಕಾರಿಗಳ ಅನುಮತಿಗಾಗಿ ಕಾಯಬೇಕಾಗಿಲ್ಲ. ‘ಕರ್ತವ್ಯ’ ಮೊಬೈಲ್ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಿದ ತಕ್ಷಣ ಮುಟ್ಟಿನ ರಜೆ ಸ್ವಯಂಚಾಲಿತವಾಗಿ ಮಂಜೂರು ಆಗುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಈ ಹೊಸ ವ್ಯವಸ್ಥೆ ಅಕ್ಟೋಬರ್ 5ರಿಂದ ಜಾರಿಗೆ ಬಂದಿದೆ ಎಂದು ಸರ್ಕಾರದ ಮಾಧ್ಯಮ ಪ್ರಕಟಣೆ ತಿಳಿಸಿದೆ.

ತಿಂಗಳಿಗೆ ಒಂದು ದಿನ ವೇತನ ಸಹಿತ ಮುಟ್ಟಿನ ರಜೆ

ರಾಜ್ಯ ಸರ್ಕಾರವು 18ರಿಂದ 52 ವರ್ಷದೊಳಗಿನ ಮಹಿಳಾ ಸರ್ಕಾರಿ ನೌಕರರಿಗೆ ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ಪಡೆಯಲು ಈಗಾಗಲೇ ಅವಕಾಶ ಕಲ್ಪಿಸಿತ್ತು.

ಆದರೆ, ರಜೆ ಪಡೆಯಲು ಮೇಲಾಧಿಕಾರಿಗಳ ಅನುಮೋದನೆ ಅಗತ್ಯವಿದ್ದ ಕಾರಣ ಕೆಲವು ಸಂದರ್ಭಗಳಲ್ಲಿ ರಜೆ ಮಂಜೂರಾಗುವುದು ವಿಳಂಬವಾಗುತ್ತಿತ್ತು. ಅಲ್ಲದೆ, ಕೆಲವು ಪ್ರಕರಣಗಳಲ್ಲಿ ಮುಟ್ಟಿನ ರಜೆಯ ಅಗತ್ಯತೆಯನ್ನೇ ಪ್ರಶ್ನಿಸಲಾಗುತ್ತಿತ್ತು. ಇದರಿಂದ ಮಹಿಳಾ ನೌಕರರು ತೊಂದರೆ ಅನುಭವಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಇದೀಗ ಸ್ವಯಂಚಾಲಿತ ರಜೆ ಮಂಜೂರು ವ್ಯವಸ್ಥೆ ಜಾರಿಗೆ ತರಲಾಗಿದೆ.

‘ಕರ್ತವ್ಯ’ ಆ್ಯಪ್ನಲ್ಲಿ ಅರ್ಜಿ ಸಲ್ಲಿಸಿದರೆ ಸಾಕು

ಹೊಸ ನಿಯಮದ ಪ್ರಕಾರ, ಅರ್ಹ ಮಹಿಳಾ ಸರ್ಕಾರಿ ನೌಕರರು ‘ಕರ್ತವ್ಯ’ ಮೊಬೈಲ್ ಆ್ಯಪ್‌ನಲ್ಲಿ ಮುಟ್ಟಿನ ರಜೆಗಾಗಿ ಅರ್ಜಿ ಸಲ್ಲಿಸಿದ ತಕ್ಷಣ ರಜೆ ಸ್ವಯಂಚಾಲಿತವಾಗಿ ಮಂಜೂರು ಆಗಲಿದೆ. ಅಂದರೆ, ರಜೆಗಾಗಿ ಮೇಲಾಧಿಕಾರಿಗಳ ಅನುಮೋದನೆಗಾಗಿ ಕಾಯುವ ಅಗತ್ಯ ಇರುವುದಿಲ್ಲ. ನಿಯಮಾನುಸಾರ ಸಲ್ಲಿಸಲಾದ ಅರ್ಜಿಯನ್ನು ಅಧಿಕಾರಿಗಳು ತಿರಸ್ಕರಿಸುವ ಅಥವಾ ತಡೆಹಿಡಿಯುವ ವಿವೇಚನಾಧಿಕಾರವನ್ನು ಹೊಂದಿರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಮುಟ್ಟಿನ ರಜೆಗೆ ವೈದ್ಯಕೀಯ ಪ್ರಮಾಣಪತ್ರ ಬೇಕಿಲ್ಲ

ಮಹಿಳಾ ಸರ್ಕಾರಿ ನೌಕರರು ಮುಟ್ಟಿನ ರಜೆ ಪಡೆಯಲು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸುವ ಅಗತ್ಯವಿಲ್ಲ. ಅರ್ಹತಾ ವಯೋಮಿತಿಯಲ್ಲಿರುವ ಮಹಿಳಾ ನೌಕರರು ನಿಯಮಾನುಸಾರ ‘ಕರ್ತವ್ಯ’ ಆ್ಯಪ್‌ನಲ್ಲಿ ರಜೆ ದಾಖಲಿಸಬಹುದು.

ಹೊಸ ವ್ಯವಸ್ಥೆಯ ಪ್ರಮುಖ ನಿಯಮಗಳು

  • 18ರಿಂದ 52 ವರ್ಷದೊಳಗಿನ ಮಹಿಳಾ ಸರ್ಕಾರಿ ನೌಕರರಿಗೆ ಈ ಸೌಲಭ್ಯ ಅನ್ವಯವಾಗಲಿದೆ.
  • ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆ ಪಡೆಯಬಹುದು.
  • ಮುಟ್ಟಿನ ರಜೆಗೆ ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ.
  • ‘ಕರ್ತವ್ಯ’ ಮೊಬೈಲ್ ಆ್ಯಪ್‌ನಲ್ಲಿ ಅರ್ಜಿ ಸಲ್ಲಿಸಿದ ತಕ್ಷಣ ಸ್ವಯಂಚಾಲಿತವಾಗಿ ರಜೆ ಮಂಜೂರು ಆಗಲಿದೆ.
  • ಒಂದು ತಿಂಗಳ ಮುಟ್ಟಿನ ರಜೆಯನ್ನು ಮುಂದಿನ ತಿಂಗಳಿಗೆ ಮುಂದೂಡಲು ಸಾಧ್ಯವಿಲ್ಲ.

ಬಳಕೆಯಾಗದ ರಜೆಯನ್ನು ಸಂಗ್ರಹಿಸಲು ಅವಕಾಶವಿಲ್ಲ.

ಮುಟ್ಟಿನ ರಜೆಯನ್ನು ಇತರೆ ರಜೆಗಳೊಂದಿಗೆ ಸೇರಿಸಿ ಅಥವಾ ಹೊಂದಾಣಿಕೆ ಮಾಡಿಕೊಂಡು ಪಡೆಯಲು ಅವಕಾಶವಿಲ್ಲ. ನಿಯಮಾನುಸಾರ ಸಲ್ಲಿಸಲಾದ ಅರ್ಜಿಯನ್ನು ಅಧಿಕಾರಿಗಳು ತಿರಸ್ಕರಿಸಲು ಅಥವಾ ತಡೆಹಿಡಿಯಲು ಸಾಧ್ಯವಿಲ್ಲ.

ರಾಜ್ಯ ಸರ್ಕಾರವು 2025ರ ಡಿಸೆಂಬರ್ನಿಂದ ಸರ್ಕಾರಿ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆಯನ್ನು ಜಾರಿಗೆ ತಂದಿತ್ತು. 18ರಿಂದ 52 ವರ್ಷದೊಳಗಿನ ಋತುಮತಿಯಾಗುವ ಮಹಿಳಾ ಸರ್ಕಾರಿ ನೌಕರರು ಈ ರಜೆಗೆ ಅರ್ಹರಾಗಿದ್ದು, ರಜೆ ಪಡೆಯಲು ವೈದ್ಯಕೀಯ ಪ್ರಮಾಣಪತ್ರದ ಅಗತ್ಯವಿಲ್ಲ ಎಂದು ಹಿಂದಿನ ಆದೇಶದಲ್ಲಿಯೂ ತಿಳಿಸಲಾಗಿತ್ತು.

ಇದೀಗ ರಜೆ ಮಂಜೂರಾತಿ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ಉದ್ದೇಶದಿಂದ ‘ಕರ್ತವ್ಯ’ ಆ್ಯಪ್ ಮೂಲಕ ಸ್ವಯಂಚಾಲಿತವಾಗಿ ರಜೆ ಮಂಜೂರು ಮಾಡುವ ಹೊಸ ವ್ಯವಸ್ಥೆ ಜಾರಿಗೆ ಬಂದಿದೆ.