ಮಾರ್ಗಮಧ್ಯೆ ಪೊಲೀಸ್ ಬ್ಯಾರಿಕೇಡ್ಗಳನ್ನು ದಾಟಲು ಯತ್ನಿಸಿದ ರಾಹುಲ್ ಗಾಂಧಿ ಮತ್ತು ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಬ್ಯಾರಿಕೇಡ್ಗಳ ಮೇಲೆಯೇ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ತಕ್ಷಣವೇ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದರು. ಬಳಿಕ ರಾಹುಲ್ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಇತರ ಸಂಸದರೊಂದಿಗೆ ಪೊಲೀಸ್ ಬಸ್ನಲ್ಲಿ ಕರೆದೊಯ್ಯಲಾಯಿತು. ಆದರೆ ಅವರಿಬ್ಬರೂ ಬಸ್ನಿಂದ ಹೊರಬಂದು ಆಕಾಶವಾಣಿ ಭವನದ ಬಳಿ ಮತ್ತೆ ಧರಣಿ ಕುಳಿತರು. ಇತ್ತ ಅಖಿಲೇಶ್ ಯಾದವ್ ಮತ್ತು ಅಭಿಷೇಕ್ ಬ್ಯಾನರ್ಜಿ ಅವರನ್ನು ಪೊಲೀಸರು ಮತ್ತೊಂದು ಬಸ್ನಲ್ಲಿ ಸ್ಥಳದಿಂದ ದೂರ ಕರೆದೊಯ್ದರು.
ಪ್ರತಿಭಟನೆಯ ವೇಳೆ ತೀವ್ರ ಗಮನ ಸೆಳೆದ ರಾಹುಲ್ ಗಾಂಧಿ Gyanesh, it’s done bro! (ಜ್ಞಾನೇಶ್, ಮುಗಿಯಿತು ಸಹೋದರ) ಎಂಬ ಬರಹವಿದ್ದ ಪೋಸ್ಟರ್ ಪ್ರದರ್ಶಿಸಿದರು.. ಇದೇ ಘೋಷಣೆಯನ್ನು ಸಾಮಾಜಿಕ ಜಾಲತಾಣ ತಮ್ಮ X ಖಾತೆಯಲ್ಲೂ ಹಂಚಿಕೊಂಡರು.ಇದು ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡಬೇಕಾದ ಸಮಯ ಎಂದು ಬರೆದುಕೊಂಡಿದ್ದಾರೆ. ಮತ್ತೊಂದು ಕಡೆ ಪ್ರತಿಭಟನಾಕಾರರು ಜ್ಞಾನೇಶ್ ಕುಮಾರ್ ಆರ್ಎಸ್ಎಸ್ ಸಮವಸ್ತ್ರ ಧರಿಸಿರುವ ಕಟೌಟ್ಗಳನ್ನು ಪ್ರದರ್ಶಿಸಿದರು. ಇದರೊಂದಿಗೆ BJP hai CEC hai”, “Vote chor, gaddi chhod” ಮತ್ತು “Democracy not for sale” ಎಂಬ ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆ ಹಿನ್ನೆಲೆಯಲ್ಲಿ ನವದೆಹಲಿಯಾದ್ಯಂತ ಭಾರೀ ಭದ್ರತೆ ಮಾಡಲಾಗಿತ್ತು. ಸಂಸತ್ ನ ಮಕರ ದ್ವಾರದಿಂದ ಚುನಾವಣಾ ಆಯೋಗದ ಕಚೇರಿವರೆಗೆ ಮಾರ್ಗದಲ್ಲಿ ಸ್ಥಳೀಯ ಪೊಲೀಸರೊಂದಿಗೆ ಐದಕ್ಕಿಂತ ಹೆಚ್ಚು ಅರೆಸೇನಾ ಪಡೆಗಳ ಕಂಪನಿಗಳನ್ನು ನಿಯೋಜಿಸಲಾಗಿತ್ತು. ಆಕಾಶವಾಣಿ ಹಾಗೂ ಚುನಾವಣಾ ಆಯೋಗದ ಕಚೇರಿ ಸುತ್ತಮುತ್ತ ಆರ್ ಎ ಎಫ್ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿತ್ತು.
ಚುನಾವಣಾ ಆಯೋಗದ ಮುಖ್ಯ ಪ್ರವೇಶ ದ್ವಾರ ಹಾಗೂ ಜಂತರ್ ಮಂತರ್ ಸುತ್ತಮುತ್ತ ಪೊಲೀಸರು ಬಹುಹಂತದ ಬ್ಯಾರಿಕೇಡ್ಗಳನ್ನು ಅಳವಡಿಸಿದ್ದರು. ನವದೆಹಲಿ ಜಿಲ್ಲೆಯಲ್ಲಿ ಬಿಎನ್ ಎಸ್ ಎಸ್ ಸೆಕ್ಷನ್ 163 ರ ಅಡಿಯಲ್ಲಿ ನಿರ್ಬಂಧಾಜ್ಞೆಗಳು ಜಾರಿಯಲ್ಲಿದ್ದ ಕಾರಣ, ಸಾರ್ವಜನಿಕ ಸಭೆ ನಡೆಸಲು ಮತ್ತು ಗುಂಪು ಸೇರುವುದಕ್ಕೆ ಅನುಮತಿ ಇರಲಿಲ್ಲ. ಇವತ್ತು ಬೆಳಗ್ಗೆ ಸುಮಾರು 10.30ರಿಂದ 11 ಗಂಟೆಯ ನಡುವೆ ಸಂಸದರ ಪ್ರತಿಭಟನಾ ಮೆರವಣಿಗೆ ಆರಂಭವಾಗುವ ನಿರೀಕ್ಷೆಯಿತ್ತು. ಆದರೆ, ಸಂಸದರು ಚುನಾವಣಾ ಆಯೋಗದ ಕಚೇರಿ ಕಡೆಗೆ ಮುನ್ನಡೆಯುತ್ತಿದ್ದಂತೆ ಪೊಲೀಸರು ಅವರನ್ನು ಮಾರ್ಗಮಧ್ಯದಲ್ಲೇ ತಡೆದರು. ಪೊಲೀಸರು ತಡೆದರೂ ವಿರೋಧ ಪಕ್ಷಗಳ ಸಂಸದರು ರಸ್ತೆಯ ಮೇಲೆಯೇ ಕುಳಿತು ಧರಣಿ ನಡೆಸಿದರು.
ಚುನಾವಣಾ ಆಯೋಗದ ಕಚೇರಿ ಬಳಿ ನಡೆಯುತ್ತಿದ್ದ ಪ್ರತಿಭಟನೆಯ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆಕಾಶವಾಣಿ ಭವನದ ಗ್ರಿಲ್ ಮೇಲೆ ಹತ್ತಿ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಕೆಳಗಿಳಿಯುವಂತೆ ಸತತವಾಗಿ ಮನವಿ ಮಾಡಿದರೂ, ಅವರು ಪ್ರತಿಭಟನಾ ಸ್ಥಳದಿಂದ ತೆರಳಲು ನಿರಾಕರಿಸಿದರು. ಇದೇ ವೇಳೆ ತೀವ್ರ ನೂಕುನುಗ್ಗಲಿನ ಮಧ್ಯೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭಾ ಸಂಸದ ಮಲ್ಲಿಕಾರ್ಜುನ ಖರ್ಗೆ ಹಠಾತ್ ಅಸ್ವಸ್ಥರಾದರು ಇದರಿಂದ ಅವರು ಪ್ರತಿಭಟನಾ ಸ್ಥಳದಿಂದ ತೆರಳಿದರು.
ಸಿಇಸಿ ಜ್ಞಾನೇನೇಶ್ ಕುಮಾರ್ ರಾಜೀನಾಮೆ ಮತ್ತು SIR ಹಿಂಪಡೆಯುವಂತೆ ಆಗ್ರಹಿಸಿರುವ ವಿರೋಧ ಪಕ್ಷಗಳು ತಮ್ಮ ಪ್ರತಿಭಟನೆಯನ್ನು ಹೆಚ್ಚು ಮಾಡುತ್ತಿವೆ. ಇದು ಮತದಾರರ ಪಟ್ಟಿ ಪರಿಷ್ಕರಣೆ ಕುರಿತ ರಾಜಕೀಯ ಮತ್ತು ಕಾನೂನು ಸಂಘರ್ಷವನ್ನು ಮತ್ತಷ್ಟು ತೀವ್ರಗೊಳಿಸಿದೆ.



