ಬಿಡದಿ ಟೌನ್‌ಶಿಪ್‌ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಮತ್ತಷ್ಟು ತೀವ್ರಗೊಂಡಿದೆ. ನಿನ್ನೆ ಸಂಜೆ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದ ರೈತರನ್ನು ಪೊಲೀಸರು ಬಂಧಿಸಿದ್ದು, ಬಳಿಕ ಅವರನ್ನು ಚನ್ನಪಟ್ಟಣದ ಪೊಲೀಸ್ ಭವನದಲ್ಲಿ ಇರಿಸಲಾಗಿತ್ತು. ಆದರೆ ಬಂಧನದ ಬಳಿಕವೂ ರೈತರ ಉಪವಾಸ ಸತ್ಯಾಗ್ರಹ ಮುಂದುವರಿದಿದೆ. 100 ಮಂದಿ ರೈತರನ್ನು ಪೊಲೀಸ್ ಭವನದಲ್ಲಿರಿಸಿದ್ದು, ಹೊರಗಡೆಯೂ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ವಶಕ್ಕೆ ಪಡೆದಿರುವವರನ್ನು ಬಿಡುವಂತೆ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸಿದ್ದಾರೆ.

ಪ್ರತಿಭಟನಾ ನಿರತ ರೈತರು ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ತಮ್ಮ ಸಮಸ್ಯೆ ಆಲಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಟೌನ್‌ಶಿಪ್‌ ಯೋಜನೆಗಾಗಿ ಭೂಮಿ ನೀಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದು, “ಪ್ರಾಣ ಹೋದರೂ ಭೂಮಿ ಕೊಡಲ್ಲ” ಎಂದು ಘೋಷಿಸಿದ್ದಾರೆ. ಇತ್ತ ರೈತ ಸಂಘಟನೆಗಳು ಚನ್ನಪಟ್ಟಣದ ಗಾಂಧಿ ವೃತ್ತದಲ್ಲಿ ರಸ್ತೆ ತಡೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಭೈರಮಂಗಲ ಗ್ರಾಮದಲ್ಲೂ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ರೈತರ ಬಂಧನ ಖಂಡಿಸಿ ಪ್ರತಿಭಟನೆ

ಟೌನ್‌ಶಿಪ್‌ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಬಂಧನವನ್ನು ಖಂಡಿಸಿ ವಿವಿಧ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಚನ್ನಪಟ್ಟಣದ ಗಾಂಧಿ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರು-ಮೈಸೂರು ಹಳೇ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ರೈತರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಎಚ್.ಸಿ. ಬಾಲಕೃಷ್ಣ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿರುವ ಕ್ರಮವನ್ನು ಖಂಡಿಸಿದ ರೈತ ಮುಖಂಡರು, ಪೊಲೀಸರು ಪ್ರತಿಭಟನಾಕಾರರೊಂದಿಗೆ ದೌರ್ಜನ್ಯದಿಂದ ವರ್ತಿಸಿದ್ದಾರೆ ಎಂದು ಆರೋಪಿಸಿದರು.

ರೈತ ಸಂಘಟನೆಗಳಿಂದ ರಸ್ತೆ ತಡೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಚನ್ನಪಟ್ಟಣ ಡಿವೈಎಸ್ಪಿ ಗಿರಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ಪರಿಶೀಲಿಸಿದರು. ಬಳಿಕ ಪ್ರತಿಭಟನಾ ಸ್ಥಳದಿಂದ ರಸ್ತೆ ತೆರವು ಮಾಡುವಂತೆ ರೈತರಿಗೆ ಸೂಚಿಸಿದರು. ಈ ವೇಳೆ ರೈತ ಮುಖಂಡರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.

ಇದೇ ವೇಳೆ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬಾರದು ಎಂದು ಆಗ್ರಹಿಸಿ ಹಲವು ರೈತರು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಬಿಡದಿ ಟೌನ್‌ಶಿಪ್‌ ಯೋಜನೆಗೆ ಸಂಬಂಧಿಸಿದಂತೆ ರೈತರ ವಿರೋಧ ಮುಂದುವರಿದಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದ್ದು, ಭೈರಮಂಗಲ ಸೇರಿದಂತೆ ವಿವಿಧೆಡೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.