ಕಳ್ಳತನ ಪತ್ತೆಯಾಗಿದ್ದು ಹೇಗೆ?
ಚಾರ್ಜ್ಶೀಟ್ ಪ್ರಕಾರ, ಜೂನ್ 3ರಂದು ಅವಿನಾಶ್ ಶುಕ್ಲಾ, ಕರುಣೇಶ್ ಪಾಂಡೆ, ಅನುಕಲ್ಪ್ ಮಿಶ್ರಾ ಹಾಗೂ ಲವ್ ಕುಶ್ ಮಿಶ್ರಾ ಅವರು ಕಾಣಿಕೆ ಹಣದ ನೋಟುಗಳ ಕಂತೆಗಳನ್ನು ಅಡಗಿಸುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದರು. ಹಣ ಎಣಿಕೆ ಸಿಬ್ಬಂದಿ ಮದನ್ ಗೋಪಾಲ್ ನಿಗಮ್ ಅವರು ಈ ಕೃತ್ಯವನ್ನು ಗಮನಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮರುದಿನ ಅಂದರೆ ಜೂನ್ 4ರಂದು ಮತ್ತೊಂದು ಕಳ್ಳತನದ ಘಟನೆ ಬೆಳಕಿಗೆ ಬಂದಿತ್ತು. ಅವಿನಾಶ್ ಶುಕ್ಲಾ ಹಣ ಕಳವು ಮಾಡುತ್ತಿದ್ದುದನ್ನು ಹಣ ಎಣಿಕೆ ಸಿಬ್ಬಂದಿ ಸಂತ ಪ್ರಸಾದ್ ವರ್ಮಾ ಗಮನಿಸಿದ್ದರು. ಬಳಿಕ ಮದನ್ ಗೋಪಾಲ್ ನಿಗಮ್ ಹಾಗೂ ಸಂತ ಪ್ರಸಾದ್ ವರ್ಮಾ ನೀಡಿದ ದೂರಿನ ಆಧಾರದ ಮೇಲೆ ಮಂದಿರದ ಗೇಟ್‌ಗಳಲ್ಲಿ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಅವಿನಾಶ್ ಶುಕ್ಲಾ ಕಳವು ಮಾಡಿದ್ದ ಎನ್ನಲಾದ ₹2.25 ಲಕ್ಷವನ್ನು ಬಾತ್ರೂಮ್‌ನಲ್ಲಿ ಅಡಗಿಸಿಟ್ಟಿರುವುದು ಪತ್ತೆಯಾಗಿತ್ತು. ಶೋಧ ಕಾರ್ಯಾಚರಣೆಯಲ್ಲಿ ಈ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಜೂನ್ 4ರ ರಾತ್ರಿ ದೆಹಲಿಯಿಂದ ರೈಲಿನಲ್ಲಿ ಅಯೋಧ್ಯೆಗೆ ಪ್ರಯಾಣಿಸುತ್ತಿದ್ದ ಚಂಪತ್ ರೈ ಅವರಿಗೆ ಕಾಣಿಕೆ ಹಣ ಕಳುವಿನ ಕುರಿತು ಮಾಹಿತಿ ನೀಡಲಾಗಿತ್ತು. ಕಳ್ಳತನಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನೂ ಅವರಿಗೆ ಕಳುಹಿಸಲಾಗಿತ್ತು ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಜೂನ್ 5ರಂದು ಅಯೋಧ್ಯೆಗೆ ತಲುಪಿದ ಬಳಿಕ ಚಂಪತ್ ರೈ ಅವರು ಕಾರ್ ಸೇವಕ್ಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರೊಂದಿಗೆ ಸಭೆ ನಡೆಸಿದ್ದರು. ಈ ವೇಳೆ ಲ್ಯಾಪ್‌ಟಾಪ್‌ನಲ್ಲಿ ಕಳ್ಳತನಕ್ಕೆ ಸಂಬಂಧಿಸಿದ ಹಲವು ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ವೇಳೆ ಚಂಪತ್ ರೈ, ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರ ಪಾತ್ರದ ಕುರಿತು ಪರಿಶೀಲನೆ ನಡೆಸಲಾಗಿದ್ದು, ಅಂತಿಮವಾಗಿ ಅವರನ್ನು ಆರೋಪಿಗಳ ಪಟ್ಟಿಗೆ ಸೇರಿಸದೆ ಸಾಕ್ಷಿಗಳನ್ನಾಗಿ ಮಾಡಲಾಗಿದೆ.
ಪ್ರಕರಣ ದಾಖಲಿಸಿದ ಕೃಷ್ಣ ಮೋಹನ್ ಅವರನ್ನು ಪೊಲೀಸರು ಮೊದಲ ಸಾಕ್ಷಿಯನ್ನಾಗಿ ಮಾಡಿದ್ದಾರೆ. ಚಾರ್ಜ್‌ಶೀಟ್‌ನಲ್ಲಿ ಒಟ್ಟು 133 ಸಾಕ್ಷಿಗಳ ಉಲ್ಲೇಖವಿದೆ. ಚಂಪತ್ ರೈ, ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರ ಜೊತೆಗೆ ಕೊತ್ವಾಲಿ ಠಾಣೆಯ ಇನ್ಸ್‌ಪೆಕ್ಟರ್, ರಾಮ ಜನ್ಮಭೂಮಿ ಠಾಣೆಯ ಇನ್ಸ್‌ಪೆಕ್ಟರ್, ಅಯೋಧ್ಯೆಯ ಸಿಒ ಸೇರಿದಂತೆ ಒಟ್ಟು 27 ಪೊಲೀಸ್ ಸಿಬ್ಬಂದಿಯನ್ನೂ ಸಾಕ್ಷಿಗಳನ್ನಾಗಿ ಮಾಡಲಾಗಿದೆ.
ಹೀಗಾಗಿ ರಾಮ ಮಂದಿರದ ಕಾಣಿಕೆ ಹಣ ಕಳವು ಪ್ರಕರಣದ ತನಿಖೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳು, ಹಣ ವಶಪಡಿಸಿಕೊಂಡಿರುವುದು, ಹಣ ಎಣಿಕೆ ಸಿಬ್ಬಂದಿಯ ಹೇಳಿಕೆಗಳು ಹಾಗೂ ಪೊಲೀಸ್ ಅಧಿಕಾರಿಗಳ ಸಾಕ್ಷ್ಯಗಳು ಪ್ರಮುಖ ಅಂಶಗಳಾಗಿ ಚಾರ್ಜ್‌ಶೀಟ್‌ನಲ್ಲಿ ದಾಖಲಾಗಿವೆ.




