ಮಂದಿರದಲ್ಲಿ ದೇಣಿಗೆ ಹಣ ಲೂಟಿಯಾಗಿದ್ದು ಹೇಗೆ ಪತ್ತೆಯಾಯಿತು ಎನ್ನುವ ಅಂಶವನ್ನೂ ಚಾರ್ಜ್ಶೀಟ್ನಲ್ಲಿ ದಾಖಲು ಮಾಡಲಾಗಿದೆ. ಕಳ್ಳತನ ನಡೆದ ದಿನದಿಂದ ಹಿಡಿದು ಪೊಲೀಸರು ಕೈಗೊಂಡ ಕ್ರಮಗಳವರೆಗಿನ ಸಂಪೂರ್ಣ ಘಟನೆಗಳ ವಿವರವನ್ನು ಅದರಲ್ಲಿ ಉಲ್ಲೇಖ ಮಾಡಲಾಗಿದೆ. ಅದರ ಪ್ರಕಾರ ಜೂನ್ 3ರಂದು ಅವಿನಾಶ್ ಶುಕ್ಲಾ, ಕರುಣೇಶ್ ಪಾಂಡೆ, ಅನುಕಲ್ಪ್ ಮಿಶ್ರಾ ಹಾಗೂ ಲವ್ ಕುಶ್ ಮಿಶ್ರಾ ಇವರೆಲ್ಲಾ ಕಳ್ಳತನ ಮಾಡುತ್ತಿದ್ದಾಗ ಮೊದಲ ಬಾರಿಗೆ ಸಿಕ್ಕಿಬಿದ್ದಿದ್ದರು. ಆವತ್ತು ಹಣ ಎಣಿಕೆ ಸಿಬ್ಬಂದಿ ಮದನ್ ಗೋಪಾಲ್ ನಿಗಮ್ ಈ ನಾಲ್ವರು ನೋಟಿನ ಕಂತೆಗಳನ್ನು ಅಡಗಿಸುತ್ತಿರುವುದನ್ನು ಗಮನಿಸಿದ್ದರು.
ಇದಾದ ಮರುದಿನ ಅಂದರೆ ಜೂನ್ 4ರಂದು ಮತ್ತೊಂದು ಕಳ್ಳತನದ ಘಟನೆ ಬೆಳಕಿಗೆ ಬಂದಿತ್ತು. ಅವಿನಾಶ್ ಶುಕ್ಲಾ ಕಳ್ಳತನ ಮಾಡುತ್ತಿದ್ದುದನ್ನು ಹಣ ಎಣಿಕೆ ಸಿಬ್ಬಂದಿ ಸಂತ ಪ್ರಸಾದ್ ವರ್ಮಾ ನೋಡಿದ್ದರು. ನಂತರ ಮದನ್ ಗೋಪಾಲ್ ನಿಗಮ್ ಹಾಗೂ ಸಂತ ಪ್ರಸಾದ್ ವರ್ಮಾ ಅವರಿಬ್ಬರು ಈ ಬಗ್ಗೆ ದೂರು ನೀಡಿದರು. ಅದರಂತೆ ದೇಗುಲದ ಗೇಟ್ನಲ್ಲಿ ತಪಾಸಣೆ ಆರಂಭಿಸಲಾಯಿತು. ಈ ವೇಳೆ ಅವಿನಾಶ್ ಶುಕ್ಲಾ ತಾನು ಕಳವು ಮಾಡಿದ್ದ 2.25 ಲಕ್ಷ ರೂಪಾಯಿಯನ್ನು ಶೌಚಾಲಯದಲ್ಲಿ ಅಡಗಿಸಿದ್ದ. ಆದರೆ ಶೋಧದ ವೇಳೆ ಈ ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.
ಜೂನ್ 4ರ ರಾತ್ರಿ ದೆಹಲಿಯಿಂದ ರೈಲಿನಲ್ಲಿ ಅಯೋಧ್ಯೆಗೆ ಬರುತ್ತಿದ್ದ ಚಂಪತ್ ರೈಗೆ ಕಳ್ಳತನದ ಮಾಹಿತಿ ನೀಡಲಾಗಿತ್ತು. ಕಳ್ಳತನಕ್ಕೆ ಸಂಬಂಧಿಸಿದ ವಿಡಿಯೋಗಳನ್ನೂ ಚಂಪತ್ ರೈಗೆ ಕಳುಹಿಸಲಾಗಿತ್ತು. ಚಂಪತ್ ರೈ ಜೂನ್ 5ರಂದು ಅಯೋಧ್ಯೆಗೆ ತಲುಪಿದ ಬಳಿಕ ಸೇವಕ್ಪುರಂನಲ್ಲಿರುವ ನಿವಾಸದಲ್ಲಿ ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರೊಂದಿಗೆ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಲ್ಯಾಪ್ಟಾಪ್ನಲ್ಲಿ ಕಾಣಿಕೆ ಹಣ ಕಳವಿಗೆ ಸಂಬಂಧಿಸಿದ ಹಲವು ಸಿಸಿಟಿವಿ ದೃಶ್ಯಾವಳಿಗಳನ್ನು ತೋರಿಸಲಾಗಿತ್ತು. ಚಂಪತ್ ರೈ ಈ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ್ದರು ಎಂದು ಪೊಲೀಸರು ಚಾರ್ಜ್ಶೀಟ್ನಲ್ಲಿ ತಿಳಿಸಿದ್ದಾರೆ.
ಕೇಸ್ ದಾಖಲಿಸಿದ ಕೃಷ್ಣ ಮೋಹನ್ ರನ್ನು ಪೊಲೀಸರು ತಮ್ಮ ಮೊದಲ ಸಾಕ್ಷಿಯನ್ನಾಗಿ ಮಾಡಿದ್ದಾರೆ. ಚಾರ್ಜ್ಶೀಟ್ನಲ್ಲಿ ಒಟ್ಟು 133 ಜನರನ್ನು ಸಾಕ್ಷಿಗಳನ್ನಾಗಿ ಉಲ್ಲೇಖಿಸಲಾಗಿದೆ. ಚಂಪತ್ ರೈ, ಅನಿಲ್ ಮಿಶ್ರಾ ಹಾಗೂ ಗೋಪಾಲ್ ರಾವ್ ಅವರುಗಳ ಜೊತೆಗೆ ಕೊತ್ವಾಲಿ ಠಾಣೆಯ ಇನ್ಸ್ಪೆಕ್ಟರ್, ರಾಮ ಜನ್ಮಭೂಮಿ ಠಾಣೆಯ ಇನ್ಸ್ಪೆಕ್ಟರ್, ಅಯೋಧ್ಯೆಯ ಸಿಒ ಸೇರಿದಂತೆ 27 ಪೊಲೀಸ್ ಸಿಬ್ಬಂದಿಯನ್ನೂ ಸಾಕ್ಷಿಗಳನ್ನಾಗಿ ಮಾಡಲಾಗಿದೆ.



