ನಾಗಾಲ್ಯಾಂಡ್ನಲ್ಲಿ 1990ರಿಂದ ಮದ್ಯ ನಿಷೇಧ ಕಾನೂನು ಜಾರಿಯಲ್ಲಿ, ಆದರೂ ಇಲ್ಲಿ ಮಹಾ ದುರಂತವೊಂದು ನಡೆದು ಹೋಗಿದೆ. ಕಳ್ಳಭಟ್ಟಿ ಸೇವಿಸಿ19 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇದು ಎರಡು ದಿನಗಳ ಅಂತರದಲ್ಲಿ ನಡೆದಿದ್ದು ಕಳೆದ ಎರಡು ದಿನಗಳಲ್ಲಿ ಮೊಕೊಕ್ಚುಂಗ್ ಜಿಲ್ಲೆಯಲ್ಲಿ 8 ಹಾಗೂ ಟುಯೆನ್ಸಾಂಗ್ ಜಿಲ್ಲೆಯಲ್ಲಿ 11 ಮಂದಿ ಮೃತಪಟ್ಟಿದ್ದಾರೆ, ಘಟನೆ ಬೆನ್ನಲ್ಲೇ ಅಕ್ರಮ ಮದ್ಯದ ಮೂಲ ಮತ್ತು ಪೂರೈಕೆ ಜಾಲವನ್ನು ಪತ್ತೆಹಚ್ಚಲು ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ


ಪ್ರಕರಣ ಬಗ್ಗೆ ತನಿಖೆ ನಡೆಸು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಂಗ್ಲಾಂಗ್ ಚಾಂಗ್ ನೇತೃತ್ವದಲ್ಲಿ ಎಸ್ಐಟಿ ರಚಿಸಲಾಗಿದೆ. ಕಳ್ಳಭಟ್ಟಿ ಎಲ್ಲಿಂದ ಪೂರೈಕೆಯಾಗುತ್ತಿತ್ತು ಹಾಗೂ ಇದರ ಹಿಂದೆ ಯಾರಿದ್ದಾರೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಮತ್ತೊಂದು ಕಡೆ ಮೃತರ ಸಾವಿಗೆ ನಿಖರ ಕಾರಣ ಪತ್ತೆಹಚ್ಚಲು ಮದ್ಯದ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಗುವಾಹಟಿಗೆ ಕಳುಹಿಸಲಾಗಿದೆ. ತನಿಖೆಯಲ್ಲಿ ಕೆಲವು ಮಹತ್ವದ ಸುಳಿವುಗಳು ಸಿಕ್ಕಿವೆ. ಆದರೆ ತನಿಖೆಯ ಹಿತದೃಷ್ಟಿಯಿಂದ ಹೆಚ್ಚಿನ ಮಾಹಿತಿಯನ್ನು ಈಗ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವೆಸುಪ್ರಾ ಕೆಜೊ ತಿಳಿಸಿದ್ದಾರೆ.

ಮೃತರ ಸಾವಿಗೆ ನಿಖರ ಕಾರಣ ತಿಳಿಯಲು ಮದ್ಯದ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗಾಗಿ ಗುವಾಹಟಿಗೆ ಕಳುಹಿಸಲಾಗಿದೆ. ಈ ಸಾವುಗಳ ನಂತರ, ಪೊಲೀಸರು ಹಲವು ಕಡೆ ದಾಳಿ ನಡೆಸಿ 19 ಮಂದಿಯನ್ನು ಬಂಧಿಸಿದ್ದಾರೆ ಮತ್ತು ಸುಮಾರು 3,000 ಬಾಟಲಿ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಯಾವುದೇ ಲೇಬಲ್ ಇಲ್ಲದ ಹಾಗೂ ಅನುಮತಿ ಇಲ್ಲದೆ ಮಾರಾಟವಾಗುತ್ತಿರುವ ಮದ್ಯ ಸೇವಿಸದಂತೆ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಮದ್ಯ ಸೇವಿಸಿದ ಬಳಿಕ ತಲೆಸುತ್ತು, ದೃಷ್ಟಿ ಮಸುಕಾಗುವುದು, ಉಸಿರಾಟದ ತೊಂದರೆ, ವಾಂತಿ ಅಥವಾ ಪ್ರಜ್ಞೆ ಕಳೆದುಕೊಳ್ಳುವಂತಹ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯಕೀಯ ನೆರವು ಪಡೆಯುವಂತೆ ಸೂಚಿಸಿದ್ದಾರೆ.

ಇತ್ತೀಚೆಗಷ್ಟೇ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ದುರಂತದಲ್ಲಿ 20 ಮಂದಿ ಮೃತಪಟ್ಟಿದ್ದರು. ತನಿಖೆ ವೇಳೆ ಅಕ್ರಮ ಮದ್ಯ ತಯಾರಿಕೆ ಮತ್ತು ಪೂರೈಕೆಯಲ್ಲಿ ಅಂತರರಾಜ್ಯ ಜಾಲವೊಂದು ಭಾಗಿಯಾಗಿರುವುದು ಬೆಳಕಿಗೆ ಬಂದಿತ್ತು. ಇದಾದ ಕೆಲವೇ ದಿನದಲ್ಲಿ ನಾಗಲ್ಯಾಂಡ್ ನಲ್ಲೂ ಕಳ್ಳಭಟ್ಟಿಗೆ 19 ಜನರು ಸಾವನ್ನಪ್ಪಿರುವುದು ಆಂತಕದ ವಿಷಯವಾಗಿದೆ.