ಜ್ಞಾನೇಶ್ ಕುಮಾರ್ ಉತ್ತರ ಪ್ರದೇಶದ ಆಗ್ರಾದವರು..ಉತ್ತರದವರಾದ ಇವರು ಐಎಎಸ್ ಆದ ಬಳಿಕ ಬಂದಿದ್ದು ದಕ್ಷಿಣಕ್ಕೆ. 1988ರ ಬ್ಯಾಚ್ನ ಕೇರಳ ಕೇಡರ್ ನ ಈ ಜ್ಞಾನೇಶ್ ಕುಮಾರ್ ಕೇರಳ ಸರ್ಕಾರದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು. ಸಬ್ ಕಲೆಕ್ಟರ್, ಎರ್ನಾಕುಲಂ ನ ಕಲೆಕ್ಟರ್ ಹಾಗೇ ಹಣಕಾಸು ಮತ್ತು ಲೋಕೋಪಯೋಗಿ ಇಲಾಖೆಗಳ ಕಾರ್ಯದರ್ಶಿಯಾಗಿ ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅದರ ಜೊತೆ ಜೊತೆಯಲ್ಲೇ ವಿವಾದಗಳನ್ನು ಮೈಗೆ ಅಂಟಿಸಿಕೊಂಡರು. ಅದರಲ್ಲಿ ಪ್ರಮುಖವಾಗಿದ್ದು ಒಂದು ಆತ್ಮಹತ್ಯೆ ಪ್ರಕರಣ
ಅದು 2006ರ ಮಾತು ಆಗ ಇದೇ ಜ್ಞಾನೇಶ್ ಕುಮಾರ್ ಕೇರಳದ PWD ಕಾರ್ಯದರ್ಶಿಯಾಗಿದ್ದರು. ಈ ವೇಳೆ ಮಲೇಷಿಯನ್ ಎಂಜಿನಿಯರ್ ಲೀ ಸೀ ಬಿನ್ ಎಂಬವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಅಲ್ಲದೇ ತಮ್ಮ ಸ್ಯೂಸೈಡ್ ಲೆಟರ್ ನಲ್ಲಿ ಜ್ಞಾನೇಶ್ ಕುಮಾರ್ ಹೆಸರನ್ನು ಉಲ್ಲೇಖ ಮಾಡಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ಅಷ್ಟಕ್ಕೂ ಆ ಮಲೇಷಿಯಾ ಎಂಜಿನಿಯರ್ ಜ್ಞಾನೇಶ್ ಕುಮಾರ್ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳಲೂ ಕಾರಣವಿತ್ತು. ಅದೇನು ಎಂದರೆ ಕೇರಳದಲ್ಲಿ ವಿಶ್ವಬ್ಯಾಂಕ್ ನೆರವಿನೊಂದಿಗೆ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಮಲೇಷಿಯನ್ ಕಂಪನಿ ಅದರ ಗುತ್ತಿಗೆ ಪಡೆದಿತ್ತು. ಅದರಲ್ಲಿ ಲೀ ಸೀ ಬಿನ್ ಎಂಜಿನಿಯರ್ ಆಗಿದ್ದರು. ಆದರೆ ಹಣ ಬಿಡುಗಡೆಗೆ ವಿಳಂಬ ಮಾಡುವುದು ಹಾಗೂ ಅನಗತ್ಯ ಕಿರುಕುಳ ನೀಡುವುದನ್ನು ಜ್ಞಾನೇಶ್ ಕುಮಾರ್ ಮಾಡುತ್ತಿದ್ದರಂತೆ. ಇದರಿಂದ ಬೇಸತ್ತ ಆ ಮಲೇಷಿಯನ್ ಎಂಜಿನಿಯರ್ ಕೌಲಾಲಂಪುರ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು.
ಈ ಎಂಜಿಯರ್ ಆತ್ಮಹತ್ಯೆ ಪ್ರಕರಣ ಕೇರಳದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಯಿತು. ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡುವಲ್ಲಿ ಸರ್ಕಾರ ಮತ್ತು ಅಧಿಕಾರಿಗಳು ನಡೆಸುತ್ತಿದ್ದ ಕಿರುಕುಳದ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆದವು. ಜೊತೆಗೆ, 216 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದ ಈ ಯೋಜನೆ ಇಲಾಖೆಯ ನಿರ್ಲಕ್ಷ್ಯ ಹಾಗೂ ಭೂಸ್ವಾಧೀನದ ಸಮಸ್ಯೆಗಳಿಂದಾಗಿ ತೀವ್ರ ವಿಳಂಬ ಕಂಡಿತು. ಇದರಿಂದಾಗಿ ಯೋಜನೆ ಪೂರ್ಣಗೊಳ್ಳಲು ವೆಚ್ಚವು 330 ಕೋಟಿ ರೂಪಾಯಿಗೆ ಏರಿಕೆಯಾಯಿತು. ಈ ಸಂಪೂರ್ಣ ಆರ್ಥಿಕ ಹೊರೆ ಮತ್ತು ಕಿರುಕುಳವೇ ಗುತ್ತಿಗೆದಾರ ಸಂಸ್ಥೆಯ ಅಧಿಕಾರಿಯ ಸಾವಿಗೆ ಕಾರಣ ಎಂದು ಆರೋಪಿಸಲಾಗಿತ್ತು.
ವಿವಾದ ತಾರಕಕ್ಕೇರಿದ ಬೆನ್ನಲ್ಲೇ 2006ರ ಅಂತ್ಯದ ವೇಳೆಗೆ ಜ್ಞಾನೇಶ್ ಕುಮಾರ್ ಅವರನ್ನು ಲೋಕೋಪಯೋಗಿ ಇಲಾಖೆಯಿಂದ ತಕ್ಷಣವೇ ವರ್ಗಾವಣೆ ಮಾಡಲಾಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ್ಞಾನೇಶ್ ಕುಮಾರ್ ವಿರುದ್ಧ ತನಿಖೆ ನಡೆಯಿತು. ಆದರೆ ಅವರ ಮೇಲಿನ ಆರೋಪಗಳು ಸಾಬೀತಾಗಲಿಲ್ಲ. ಬಳಿಕ ಇವರನ್ನು ಕೇಂದ್ರಕ್ಕೆ ವರ್ಗಾವಣೆ ಮಾಡಲಾಯಿತು. ದೇಹಲಿಯಲ್ಲಿ ರಕ್ಷಣಾ ಹಾಗೂ ಗೃಹ ಇಲಾಖೆಗೆ ನಿಯೋಜನೆಗೊಂಡರು.
ಕೇಂದ್ರ ಗೃಹ ಸಚಿವಾಲಯದಲ್ಲಿದ್ದಾಗ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಆರ್ಟಿಕಲ್ 370 ರದ್ದತಿ ಜಾರಿಗೆ ತರುವಲ್ಲಿ ಹಾಗೂ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ರಚನೆಗೆ ಸಂಬಂಧಿಸಿದ ನಿರ್ಧಾರಗಳ ಅನುಷ್ಠಾನದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಇನ್ನು ಇವರ ಕುಟುಂಬದಲ್ಲಿ ಬರೀ ನಾಗರೀಕ ಸೇವೆಯಲ್ಲಿ ಇರುವವರೇ ಇದ್ದಾರೆ. ಒಟ್ಟು ಏಳು ಮಂದಿ ಐಎಎಸ್ ಹಾಗೂ ಐಆರ್ ಎಸ್ ಅಧಿಕಾರಿಗಳು ಇದ್ದಾರೆ. ಆಡಳಿತಾತ್ಮಕ ಸೇವೆಗಳಲ್ಲಿ ಪತಿ ಮತ್ತು ಪತ್ನಿ ಇಬ್ಬರಿಗೂ ಒಂದೇ ರಾಜ್ಯದಲ್ಲಿ ಪೋಸ್ಟಿಂಗ್ ಸಿಗುವ ಅವಕಾಶ ಶೇಕಡಾ 1ಕ್ಕಿಂತ ಕಡಿಮೆ ಇರುತ್ತದೆ, ಆದರೆ ಈ ಅಪರೂಪದ ವಿದ್ಯಮಾನ ಜ್ಞಾನೇಶ್ ಕುಮಾರ್ ಅವರ ಇಬ್ಬರು ಹೆಣ್ಣುಮಕ್ಕಳ ವಿಷಯದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ.. ಈ ವಿಷಯಕ್ಕೆ ಸಂಬಂಧಿಸಿದಂತೆ ಆಡಳಿತಾತ್ಮಕ ನಿಯಮಗಳನ್ನು ಗಮನಿಸಿದರೆ ನಾಗರಿಕ ಸೇವೆಗಳಲ್ಲಿ ನಿಯಮಾವಳಿಗಳ ಪ್ರಕಾರ ವಿವಾಹಿತ ಐಎಎಸ್/ಐಪಿಎಸ್ ದಂಪತಿ ಒಂದೇ ರಾಜ್ಯದ ಕೇಡರ್ನಲ್ಲಿ ಕೆಲಸ ಮಾಡಲು ವಿಶೇಷ ಅವಕಾಶವಿರುತ್ತದೆ. ಈ ನಿಯಮದ ಅಡಿಯಲ್ಲೇ ಅವರ ಹೆಣ್ಣುಮಕ್ಕಳು ಹಾಗೂ ಅಳಿಯಂದಿರು ಕ್ರಮವಾಗಿ ಉತ್ತರ ಪ್ರದೇಶ ಮತ್ತು ಜಮ್ಮು-ಕಾಶ್ಮೀರದಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸುತ್ತಿದ್ದಾರೆ. ಈ ವಿಚಾರ ಈಗ ಮುನ್ನೆಲೆಗೆ ಬಂದಿದೆ.
ಇವೆಲ್ಲದರ ನಡುವೆ ಈಗ ಜ್ಞಾನೇಶ್ ಕುಮಾರ್ ಮೇಲೆ ಮತ್ತೊಂದು ದೊಡ್ಡದೊಂದು ಆರೋಪ ಕೇಳಿ ಬರುತ್ತಿದೆ. ದೇಶದ ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಅವರ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಮುಂದೆ ಇದು ಎಲ್ಲಿಗೆ ಹೋಗಿ ತಲುಪುತ್ತೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.



