ವೈದ್ಯ ದಂಪತಿಯ ವಿಚ್ಛೇದನಕ್ಕೆ ಸಂಬಂಧಿಸಿದ ಮೇಲ್ಮನವಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಜಿ.ಆರ್. ಸ್ವಾಮಿನಾಥನ್ ಹಾಗೂ ಎಂ.ಡಿ. ಸುಮಾತಿ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಕುಟುಂಬದಲ್ಲಿ ಮನೆಗೆಲಸದ ಜವಾಬ್ದಾರಿಯನ್ನು ಹಂಚಿಕೊಳ್ಳುವುದರಿಂದ ವಿವಾಹ ಸಂಬಂಧ ಹಾಗೂ ಕುಟುಂಬ ವ್ಯವಸ್ಥೆಯನ್ನು ಬಲಪಡಿಸಲು ಸಾಧ್ಯವಾಗಬಹುದು ಎಂದು ಕೋರ್ಟ್ ಹೇಳಿದೆ.
ಏನಿದು ಪ್ರಕರಣ?
ಈ ದಂಪತಿ 2011ರ ಫೆಬ್ರವರಿ 9ರಂದು ತಿರುವಣ್ಣಾಮಲೈನಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ಇಬ್ಬರೂ ಪಾಂಡಿಚೇರಿಯ ಶ್ರೀ ವೆಂಕಟೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. 2012ರಲ್ಲಿ ಮೊದಲ ಮಗ ಹಾಗೂ 2016ರಲ್ಲಿ ಎರಡನೇ ಮಗು ಜನಿಸಿತ್ತು.
ಪತಿ ಈಗಾಗಲೇ ಎಂಡಿ ಪದವಿ ಪಡೆದಿದ್ದು, ಬಳಿಕ ಡಿಎಂ ಕಾರ್ಡಿಯಾಲಜಿ ವ್ಯಾಸಂಗಕ್ಕಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಪತ್ನಿ ಮಕ್ಕಳ ಆರೈಕೆಗಾಗಿ ತೇನಿಯಲ್ಲಿರುವ ತನ್ನ ಪೋಷಕರೊಂದಿಗೆ ಉಳಿದುಕೊಂಡಿದ್ದರು. ಪತಿ ತಿಂಗಳಿಗೊಮ್ಮೆ ಕುಟುಂಬವನ್ನು ಭೇಟಿ ಮಾಡುತ್ತಿದ್ದರು. 2017ರಲ್ಲಿ ಕಾರ್ಡಿಯಾಲಜಿ ಕೋರ್ಸ್ ಪೂರ್ಣಗೊಳಿಸಿದ ಬಳಿಕವೂ ಹೆಚ್ಚಿನ ವೈದ್ಯಕೀಯ ಅರ್ಹತೆ ಪಡೆಯುವ ಉದ್ದೇಶದಿಂದ ಅವರು ಕುಟುಂಬದಿಂದ ದೂರವಿದ್ದು ವ್ಯಾಸಂಗ ಮುಂದುವರಿಸಿದ್ದರು.
2020ರ ಏಪ್ರಿಲ್ ಬಳಿಕ ದಂಪತಿ ಒಟ್ಟಿಗೆ ವಾಸಿಸಲು ಆರಂಭಿಸಿದ್ದರು. ಬಳಿಕ ಪತಿ ಪತ್ನಿಯ ಪೋಷಕರ ಮನೆಯಿಂದ ಪ್ರತ್ಯೇಕವಾಗಿ ವಾಸಿಸಲು ಬಯಸಿದ್ದರಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಪರಿಸ್ಥಿತಿ ಕೈ ಕೈ ಮಿಲಾಯಿಸುವ ಹಂತಕ್ಕೂ ತಲುಪಿತ್ತು. ಪತ್ನಿ 2022ರಲ್ಲಿ ಗೃಹಸ್ಥ ಜೀವನದ ಹಕ್ಕುಗಳ ಮರುಸ್ಥಾಪನೆ ಕೋರಿ ಅರ್ಜಿ ಸಲ್ಲಿಸಿದ್ದರು. ಮತ್ತೊಂದೆಡೆ, ಪತಿ ಕ್ರೌರ್ಯದ ಆಧಾರದ ಮೇಲೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ತೇನಿ ಕುಟುಂಬ ನ್ಯಾಯಾಲಯ ಎರಡೂ ಅರ್ಜಿಗಳನ್ನು ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ದಂಪತಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ವಿಚಾರಣೆ ವೇಳೆ, ‘ಹೋಮ್ ಮೇಕರ್’ ಎಂಬ ಪದ ಲಿಂಗಾತೀತವಾಗಿದೆ ಎಂದು ಕೋರ್ಟ್ ಹೇಳಿದೆ. ಮನೆ ನಿರ್ವಹಣೆ ಹಾಗೂ ಕುಟುಂಬದ ಆರೈಕೆಯ ಕೆಲಸಕ್ಕೂ ಆರ್ಥಿಕ ಮೌಲ್ಯವಿದೆ ಎಂಬುದನ್ನು ಸುಪ್ರೀಂ ಕೋರ್ಟ್ ಗುರುತಿಸಿರುವುದನ್ನು ಪೀಠ ಉಲ್ಲೇಖಿಸಿತು.
‘ಹೌಸ್ ವೈಫ್’ ಇರುವಂತೆ ‘ಹೌಸ್ ಹಸ್ಬೆಂಡ್’ ಇರುವುದರಲ್ಲೂ ಯಾವುದೇ ತಪ್ಪಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ವೃತ್ತಿಜೀವನದಲ್ಲಿ ಮುಂದುವರಿಯುತ್ತಿರುವ ಮಹಿಳೆಯರಿಗೆ ಉದ್ಯೋಗ ಹಾಗೂ ಕುಟುಂಬದ ಜವಾಬ್ದಾರಿಯನ್ನು ಏಕಕಾಲದಲ್ಲಿ ನಿರ್ವಹಿಸುವುದು ಸವಾಲಾಗಿದ್ದು, ಪುರುಷರು ಮನೆಕೆಲಸ ಮತ್ತು ಮಕ್ಕಳ ಜವಾಬ್ದಾರಿಯನ್ನು ಹಂಚಿಕೊಂಡರೆ ಈ ಹೊರೆ ಕಡಿಮೆಯಾಗಬಹುದು ಎಂದು ಪೀಠ ಹೇಳಿದೆ.
ಪ್ರಕರಣದಲ್ಲಿ ಪತಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಪತ್ನಿ ತನ್ನ ವೃತ್ತಿಜೀವನವನ್ನು ಬದಿಗಿಟ್ಟು ಇಬ್ಬರು ಮಕ್ಕಳ ಆರೈಕೆ ಹಾಗೂ ಕುಟುಂಬದ ಜವಾಬ್ದಾರಿ ನಿರ್ವಹಿಸಿದ್ದರು. ಆದರೆ ಪತಿಯ ವೃತ್ತಿಜೀವನದಲ್ಲಿ ಪ್ರಗತಿಯಾದ ಬಳಿಕ ದಂಪತಿ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾದವು ಎಂದು ಕೋರ್ಟ್ ಗಮನಿಸಿದೆ.
ದಂಪತಿ ಸುಮಾರು ಐದು ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ವೈವಾಹಿಕ ಸಂಬಂಧವನ್ನು ಮರುಸ್ಥಾಪಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೀಠ ಪರಿಗಣಿಸಿದೆ. ಅಂತಿಮವಾಗಿ, ಪತಿ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಒಟ್ಟು ₹2.5 ಕೋಟಿ ಪರಿಹಾರ ಪಾವತಿಸುವ ಷರತ್ತಿನೊಂದಿಗೆ ಪರಸ್ಪರ ಸಮ್ಮತಿಯ ವಿಚ್ಛೇದನಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.



