ಬಿಜೆಪಿ ಹೈಕಮಾಂಡ್ ಕಳೆದ ಒಂದು ತಿಂಗಳಿನಿಂದ ಪಕ್ಷ ಸಂಘಟನೆಯತ್ತ ಹೆಚ್ಚು ಒಲವು ತೋರುತ್ತಿದ್ದು ಹಲವಾರು ಮಹತ್ತರ ಬದಲಾವಣೆಗಳನ್ನು ಮಾಡುತ್ತಿದೆ. ಅದರ ಮುಂದುವರೆದ ಭಾಗವಾಗಿ ಇವತ್ತು(ಬುಧವಾರ) ರಾಜ್ಯ ಸಂಘಟನಾ ತಂಡಗಳನ್ನೂ ಬದಲಾಯಿಸಿದೆ. ಈ ಮೂಲಕ ಕರ್ನಾಟಕ ಸೇರಿದಂತೆ ಎಲ್ಲಾ 28 ರಾಜ್ಯಗಳು ಮತ್ತು ಎಂಟು ಕೇಂದ್ರಾಡಳಿತ ಪ್ರದೇಶಗಳಿಗೆ ಹೊಸ ಉಸ್ತುವಾರಿಗಳು ಹಾಗೂ ಸಹ-ಉಸ್ತುವಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ ಕರ್ನಾಟಕದ ಉಸ್ತುವಾರಿಯನ್ನೂ ಬದಲಾಯಿಸಿದ್ದು ರಾಧಮೋಹನ್ ದಾಸ್ ಅವರಿಗೆ ಕೊಕ್ ನೀಡಲಾಗಿದೆ ಅವರ ಬದಲಿಗೆ ಹರೀಶ್ ದ್ವಿವೇದಿಯನ್ನು ನೇಮಕ ಮಾಡಲಾಗಿದೆ.

ಉಸ್ತುವಾರಿಯಾಗಿ ಹರೀಶ್ ದ್ವಿವೇದಿ ನೇಮಿಸಿದ್ದರೆ ಸಹ ಉಸ್ತುವಾರಿಯಾಗಿ ಡಾ.ಕಸಂ ವೆಂಕಟೇಶ್ವರಲು ಅವರನ್ನು ನೇಮಕ ಮಾಡಲಾಗಿದೆ. ಹರೀಶ್ ದ್ವಿವೇದಿ ಉತ್ತರ ಪ್ರದೇಶ ಮೂಲದ ಬಿಜೆಪಿ ನಾಯಕರಾಗಿದ್ದರೆ, ಕಸಂ ವೆಂಕಟೇಶ್ವರಲು ತೆಲಂಗಾಣ ಮೂಲದ ಬಿಜೆಪಿ ನಾಯಕ. ಮುಂದಿನ ದಿನಗಳಲ್ಲಿ ಎದುರಾಗಲಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ವಿಧಾನಸಭಾ ಎಲೆಕ್ಷನ್ ಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ ಎನ್ನಲಾಗಿದೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ಮೃತಿ ಇರಾನಿಗೆ ಹರಿಯಾಣ ಮತ್ತು ಛತ್ತೀಸ್ಗಢದ ಉಸ್ತುವಾರಿ ನೀಡಲಾಗಿದ್ದು, ಬಿಜೆಪಿ ಉಪಾಧ್ಯಕ್ಷ ರಾಮ್ ಮಾಧವ್ ಅವರನ್ನು ತಮಿಳುನಾಡು ಮತ್ತು ಉತ್ತರಾಖಂಡದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. 2027ರಲ್ಲಿ ಹಲವು ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಪಕ್ಷ ತನ್ನ ಸಂಘಟನಾ ರಚನೆಯನ್ನು ಪುನರ್ವ್ಯವಸ್ಥಿತಗೊಳಿಸುತ್ತಿರುವ ಸಂದರ್ಭದಲ್ಲಿಯೇ ಬಿಜೆಪಿ ಅಧ್ಯಕ್ಷ ನಿತಿನ್ ನಬಿನ್ ಈ ನೇಮಕಾತಿಗಳನ್ನು ಘೋಷಿಸಿದ್ದಾರೆ.
ಕೇರಳ ಬಿಜೆಪಿ ಉಸ್ತುವಾರಿಯನ್ನು ಬದಲಾಯಿಸಲಾಗಿದ್ದು, ಕರ್ನಾಟಕದ ಪ್ರೊ. ಎಂ. ನಾಗರಾಜ್ ಕೇರಳ ಉಸ್ತುವಾರಿಯಾಗಿ ನೇಮಕಗೊಂಡರೆ, ಸಹ ಉಸ್ತುವಾರಿಯಾಗಿ ಎಂ. ವೆಂಕಟೇಶನ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.