ಆದರೆ, ಇಂಡಿಯನ್ ಎಕ್ಸ್ಪ್ರೆಸ್ ವರದಿ ಎತ್ತಿರುವ ನಿರ್ದಿಷ್ಟ ಅಂಶಗಳಿಗೆ ಆಯೋಗದ ಸ್ಪಷ್ಟನೆಯಲ್ಲಿ ನೇರ ಉತ್ತರ ಎಲ್ಲಿದೆ ಎಂಬ ಪ್ರಶ್ನೆ ಈಗ ಎದುರಾಗಿದೆ. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ವಿಚಾರದಲ್ಲಿ ಚುನಾವಣಾ ಆಯೋಗದೊಳಗಿನ ಭಿನ್ನಾಭಿಪ್ರಾಯಗಳ ಕುರಿತು ದಿ ಇಂಡಿಯನ್ ಎಕ್ಸ್ಪ್ರೆಸ್ ಪ್ರಕಟಿಸಿರುವ ವರದಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಚುನಾವಣಾ ಆಯೋಗ ಬುಧವಾರ ನೀಡಿರುವ ಸ್ಪಷ್ಟನೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ವರದಿ ಪ್ರಕಾರ, ಕಳೆದ 10 ತಿಂಗಳಲ್ಲಿ ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಕನಿಷ್ಠ 14 ಬಾರಿ ಔಪಚಾರಿಕವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಮತದಾರರ ಹೆಸರುಗಳ ಅಳಿಸುವಿಕೆ, ಹೊಸ ಮತದಾರರ ಸೇರ್ಪಡೆ, ಮತದಾರರ ದತ್ತಾಂಶ ನಿರ್ವಹಣೆ, ಫಾರ್ಮ್-6ರಲ್ಲಿನ ಬದಲಾವಣೆಗಳು ಸೇರಿದಂತೆ ಹಲವು ವಿಚಾರಗಳಲ್ಲಿ ಇಬ್ಬರೂ ಆಯುಕ್ತರು ಪ್ರಶ್ನೆಗಳನ್ನು ಎತ್ತಿದ್ದರು ಎಂದು ವರದಿ ಹೇಳಿತ್ತು.
ಈ ಗಂಭೀರ ಅಂಶಗಳ ಬಗ್ಗೆ ಚುನಾವಣಾ ಆಯೋಗ ಬುಧವಾರ ನೀಡಿರುವ ಸ್ಪಷ್ಟನೆ ಮಾತ್ರ ಬಹುತೇಕ ಒಂದೇ ವಿಚಾರದ ಸುತ್ತ ಸಾಗಿದೆ. SIR ಸೇರಿದಂತೆ ಭಾರತೀಯ ಚುನಾವಣಾ ಆಯೋಗದ ಎಲ್ಲಾ ನಿರ್ಧಾರಗಳನ್ನೂ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರೂ ಚುನಾವಣಾ ಆಯುಕ್ತರ ಅನುಮೋದನೆಯೊಂದಿಗೆ ಸರ್ವಾನುಮತದಿಂದ ಕೈಗೊಳ್ಳಲಾಗಿದೆ ಎಂದು ಆಯೋಗ ತಿಳಿಸಿದೆ.
ಅಂದರೆ, ಹೊಸ ಮತದಾರರ ಫಾರ್ಮ್-6 ಬದಲಾವಣೆ ಏಕೆ? ಫಾರ್ಮ್-6 ಬದಲಾವಣೆಗೆ ಅನುಮತಿ ನೀಡಿದವರು ಯಾರು? ಮತದಾರರ ಡೇಟಾಬೇಸ್ ಯಾರ ನಿಯಂತ್ರದಲ್ಲಿದೆ ಸೇರಿದಂತೆ ಹಲವು ಪ್ರಶ್ನೆಗಳನ್ನು ದಿ ಇಂಡಿಯನ್ ಎಕ್ಸ್ಪ್ರೆಸ್ ತನ್ನ ವರದಿಯಲ್ಲಿ ಉಲ್ಲೇಖಿಸಿತ್ತು.
ಆದರೆ ಆಯೋಗದ ಪ್ರತಿಕ್ರಿಯೆ ಈ ನಿರ್ದಿಷ್ಟ ಆಕ್ಷೇಪಗಳ ಸ್ವರೂಪ, ಅವುಗಳ ಕುರಿತು ನಡೆದ ಚರ್ಚೆ ಮತ್ತು ನಂತರ ಕೈಗೊಂಡ ಕ್ರಮಗಳ ಬಗ್ಗೆ ವಿವರ ನೀಡುವುದಕ್ಕಿಂತ, “ಅಂತಿಮ ನಿರ್ಧಾರ ಸರ್ವಾನುಮತದಿಂದಲೇ ಆಗಿದೆ” ಎಂಬ ಅಂಶಕ್ಕೆ ಹೆಚ್ಚಿನ ಒತ್ತು ನೀಡಿದೆ.
ಹೀಗಾಗಿ ಈಗ ಎದುರಾಗಿರುವ ಪ್ರಶ್ನೆ “ಆಯೋಗದ ಅಂತಿಮ ನಿರ್ಧಾರ ಸರ್ವಾನುಮತವಾಗಿತ್ತೇ?” ಎನ್ನುವುದಷ್ಟೇ ಅಲ್ಲ. ಅದಕ್ಕೂ ಮೊದಲು ಕೇಳಬೇಕಾದ ಪ್ರಶ್ನೆ—“ಆಕ್ಷೇಪಗಳು ನಿಜವಾಗಿಯೂ ದಾಖಲಾಗಿದ್ದರೆ, ಅವುಗಳ ಬಗ್ಗೆ ಆಯೋಗದೊಳಗೆ ಏನು ಚರ್ಚೆ ನಡೆಯಿತು ಮತ್ತು ಅವುಗಳನ್ನು ಹೇಗೆ ಪರಿಹರಿಸಲಾಯಿತು?” ಎಂಬುದು.
ಇನ್ನು ಚುನಾವಣಾ ಆಯೋಗದ ಮೂಲಗಳ ಪ್ರಕಾರ, ಇಬ್ಬರು ಆಯುಕ್ತರು ಕೆಲವು ವಿಚಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವುದು ನಿಜವಾದರೂ, ಆ ಕಳವಳಗಳು ಅಂತಿಮ ನಿರ್ಧಾರಗಳ ಮೇಲೆ ಪರಿಣಾಮ ಬೀರಿಲ್ಲ. ಆಯೋಗ ಸಾಧ್ಯವಾದಷ್ಟು ಸರ್ವಾನುಮತದ ನಿರ್ಧಾರಕ್ಕೆ ಬರಬೇಕು; ಒಮ್ಮತ ಸಾಧ್ಯವಾಗದಿದ್ದರೆ ಬಹುಮತದ ಅಭಿಪ್ರಾಯವೇ ಅಂತಿಮವಾಗುತ್ತದೆ ಎಂಬ ಕಾನೂನುಬದ್ಧ ವ್ಯವಸ್ಥೆಯನ್ನೂ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಹೀಗಾಗಿ, “ಆಕ್ಷೇಪ ದಾಖಲಾಗಿದೆ” ಎನ್ನುವುದು ಒಂದೆಡೆ; “ಆಕ್ಷೇಪದ ನಂತರ ಅಂತಿಮ ನಿರ್ಧಾರ ಹೇಗೆ ತೆಗೆದುಕೊಳ್ಳಲಾಯಿತು?” ಎನ್ನುವುದು ಮತ್ತೊಂದೆಡೆ. ಈ ಎರಡನ್ನೂ ಒಂದೇ ಅರ್ಥದಲ್ಲಿ ನೋಡಲು ಸಾಧ್ಯವಿಲ್ಲ.
ಆದರೆ ಇಂಡಿಯನ್ ಎಕ್ಸ್ಪ್ರೆಸ್ ವರದಿ ಕೇವಲ ಭಿನ್ನಾಭಿಪ್ರಾಯವಿದೆ ಎಂದು ಹೇಳಿಲ್ಲ. ಇಬ್ಬರು ಆಯುಕ್ತರು ನಿರ್ದಿಷ್ಟ ಆಡಳಿತಾತ್ಮಕ ಹಾಗೂ ಕಾನೂನು ಕ್ರಮಗಳ ಕುರಿತು ದಾಖಲೆಯಲ್ಲೇ ಪ್ರಶ್ನೆ ಎತ್ತಿದ್ದಾರೆ ಎಂದು ವರದಿ ಮಾಡಿದೆ. ಆದ್ದರಿಂದ, ಆಯೋಗದ “ಸರ್ವಾನುಮತ” ಎಂಬ ಸ್ಪಷ್ಟನೆ ಜೊತೆಗೆ, ಆ ಪ್ರಶ್ನೆಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ನಿರ್ಧಾರ ಪ್ರಕ್ರಿಯೆಯ ವಿವರಗಳನ್ನೂ ಸಾರ್ವಜನಿಕಗೊಳಿಸಬೇಕೇ ಎಂಬ ಪ್ರಶ್ನೆ ಇದೀಗ ಮತ್ತಷ್ಟು ಮುನ್ನೆಲೆಗೆ ಬಂದಿದೆ.
ಹಾಗಾದರೆ, ವರದಿಯನ್ನು ಸಂಪೂರ್ಣವಾಗಿ ತಳ್ಳಿಹಾಕಿದೆಯೇ ಚುನಾವಣಾ ಆಯೋಗ? ಅಥವಾ ‘ಎಲ್ಲವೂ ಸರ್ವಾನುಮತ’ ಎಂಬ ಒಂದೇ ಸಾಲಿನ ಸ್ಪಷ್ಟನೆಯ ಮೂಲಕ ವರದಿಯಲ್ಲಿರುವ ನಿರ್ದಿಷ್ಟ ಪ್ರಶ್ನೆಗಳನ್ನು ಬದಿಗೊತ್ತುವ ಪ್ರಯತ್ನವೇ? ಎಂಬ ಚರ್ಚೆ ಇದೀಗ ಆರಂಭವಾಗಿದೆ.


