ದೆಹಲಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸಾಮಾನ್ಯ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲು ನೋಟಿಸ್, ವಿಚಾರಣೆ ಮತ್ತು ದಾಖಲೆಗಳ ಪರಿಶೀಲನೆ ಎದುರಿಸುತ್ತಿರುವಾಗ, ಗಣ್ಯರು ಮತ್ತು ವಿಐಪಿಗಳು ಎಂದು ಗುರುತಿಸಲ್ಪಟ್ಟ ಮತದಾರರಿಗೆ ಪ್ರತ್ಯೇಕ ಹಾಗೂ ವೇಗದ ವ್ಯವಸ್ಥೆ ಮಾಡಲಾಗಿದೆ ಎಂಬ ಅಂಶವನ್ನು 'ದಿ ರಿಪೋರ್ಟರ್ಸ್ ಕಲೆಕ್ಟಿವ್'ನ ತನಿಖಾ ವರದಿ ಬಹಿರಂಗಪಡಿಸಿದೆ.
ಚುನಾವಣಾ ಆಯೋಗದ ಅಧಿಕಾರಿಗಳು ಸಚಿವರು, ಅವರ ಕುಟುಂಬ ಸದಸ್ಯರು, ಸೆಲೆಬ್ರಿಟಿಗಳು, ನ್ಯಾಯಾಧೀಶರು, ವಕೀಲರು, ಹಿರಿಯ ಅಧಿಕಾರಿಗಳು, ಐಎಎಸ್ –ಐಪಿಎಸ್ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ವಿವಿಧ ವರ್ಗದ ವ್ಯಕ್ತಿಗಳನ್ನು ಬಹುಮುಖ್ಯ ವ್ಯಕ್ತಿಗಳು ಎಂದು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದನ್ನು ತನಿಖೆಯಲ್ಲಿ ಪತ್ತೆಹಚ್ಚಲಾಗಿದೆ ಎಂದು 'ದಿ ರಿಪೋರ್ಟರ್ಸ್ ಕಲೆಕ್ಟಿವ್'ನ ತನಿಖೆ ಪತ್ತೆ ಹಚ್ಚಿದೆ.
ಈ ಸೂಚನೆಗಳು ಅಧಿಕೃತ ಆದೇಶಗಳ ಜತೆಗೆ ವಾಟ್ಸ್ಆಪ್ ಗುಂಪುಗಳ ಮೂಲಕವೂ ಅಧಿಕಾರಿಗಳ ಮಟ್ಟಕ್ಕೆ ತಲುಪಿದ್ದವು ಎಂದು ವರದಿ ಹೇಳಿದೆ.
'ದಿ ರಿಪೋರ್ಟರ್ಸ್ ಕಲೆಕ್ಟಿವ್' ತನಿಖೆಯ ಪ್ರಮುಖ ಅಂಶವೆಂದರೆ, ದೆಹಲಿಯ ಎಸ್ಐಆರ್ ಪ್ರಕ್ರಿಯೆಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಬಿಎಲ್ಒ ಬಳಸುವ ಬಿಎಲ್ಒ ಆಪ್ನಲ್ಲಿ ಮಾರ್ಕ್ ವಿಐಪಿ ಎಂಬ ಪ್ರತ್ಯೇಕ ಆಯ್ಕೆಯನ್ನು ಚುನಾವಣಾ ಆಯೋಗ ಸಕ್ರಿಯಗೊಳಿಸಿದೆ. ಜುಲೈ 30ರ ಹೊಸ ಅಪ್ಡೇಟ್ನಲ್ಲಿ ಈ ಫೀಚರ್ ಸೇರಿಸಲಾಗಿದೆ ಎಂದು ತಿಳಿದು ಬಂದಿರುವುದಾಗಿ ವರದಿ ವಿವರಿಸಿದೆ. ಅಪ್ಲಿಕೇಶನ್ನಲ್ಲಿ ಮತದಾರರ ಹೆಸರು, ಎಪಿಕ್ ಸಂಖ್ಯೆ, ವಯಸ್ಸು ಮುಂತಾದ ವಿವರಗಳೊಂದಿಗೆ ಅವರನ್ನು ವಿಐಪಿP ಎಂದು ಗುರುತಿಸುವ ಆಯ್ಕೆ ನೀಡಲಾಗಿದೆ.
ಬಿಎಲ್ಒ ಒಬ್ಬ ಮತದಾರನನ್ನು ವಿಐಪಿ ಎಂದು ಶಿಫಾರಸು ಮಾಡಿದ ಬಳಿಕ ಆ ಮಾಹಿತಿಯು ಮೇಲಧಿಕಾರಿಗಳ ಪರಿಶೀಲನೆಗೆ ಹೋಗುವ ರೀತಿಯಲ್ಲಿ ಸಾಫ್ಟ್ವೇರ್ ರೂಪಿಸಲಾಗಿದೆ ಎಂದು ತನಿಖಾ ವರದಿ ವಿವರಿಸಿದೆ.
ಅಂದರೆ, ವಿಐಪಿ ಎನ್ನುವ ಸ್ಥಾನಮಾನ ಕೇವಲ ಮಾತಿನ ಅಥವಾ ಅನೌಪಚಾರಿಕ ಗುರುತಾಗಿರದೆ, ಎಸ್ಐಆರ್ಗೆ ಬಳಸುವ ಡಿಜಿಟಲ್ ವ್ಯವಸ್ಥೆಯಲ್ಲಿಯೂ ಪ್ರತ್ಯೇಕವಾಗಿ ದಾಖಲಿಸುವ ವ್ಯವಸ್ಥೆ ಇತ್ತು ಎಂಬುದು ತಿಳಿದು ಬಂದಿದೆ.

ದಿ ರಿಪೋರ್ಟರ್ಸ್ ಕಲೆಕ್ಟಿವ್ ವರದಿಗಾರರು ಚುನಾವಣಾ ಅಧಿಕಾರಿಗಳ ನಡುವಿನ ವಾಟ್ಸ್ಆಪ್ ಸಂವಹವನ್ನು ಸಂಗ್ರಹಿಸಿದ್ದು, ಅದರ ಪ್ರಕಾರ, ವಿಐಪಿ ಎಂದು ಪರಿಗಣಿಸಬೇಕಾದವರ ಪಟ್ಟಿಯಲ್ಲಿ ಕೇಂದ್ರ/ರಾಜ್ಯ ಸಚಿವರು, ಅವರ ಕುಟುಂಬ ಸದಸ್ಯರು, ಸೆಲೆಬ್ರಿಟಿಗಳು, ನ್ಯಾಯಾಧೀಶರು ಸೇರಿದಂತೆ ಹಲವು ವರ್ಗಗಳನ್ನು ಉಲ್ಲೇಖಿಸಲಾಗಿದೆ. ಕೆಲವು ಯೂಟ್ಯೂಬರ್ ಮತ್ತು ಇನ್ಫ್ಲೂಯೆನ್ಸರ್ಗಳನ್ನೂ ವಿಐಪಿ ಎಂದು ಪರಿಗಣಿಸಲಾಗುತ್ತಿದೆ ಎಂದು ಕೆಲವು ಅಧಿಕಾರಿಗಳು ಹೇಳಿದ್ದರೂ, ಆ ನಿರ್ದಿಷ್ಟ ಮಾಹಿತಿಯನ್ನು ಸ್ವತಂತ್ರವಾಗಿ ದೃಢೀಕರಿಸಲು ಸಾಧ್ಯವಾಗಿಲ್ಲ ಎಂದು ತನಿಖಾ ವರದಿ ಸ್ಪಷ್ಟಪಡಿಸಿದೆ.
ಹೆಸರು ಬಹಿರಂಗಪಡಿಸಲು ಇಚ್ಛಿಸದ ಒಬ್ಬ ಬಿಎಲ್ಒ ಒಬ್ಬರು, ವಿಐಪಿ ಮತದಾರರ ವಿಷಯದಲ್ಲಿ ವಿಶೇಷ ಎಚ್ಚರಿಕೆ ವಹಿಸುವಂತೆ ತಮಗೆ ಸೂಚಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇನ್ನೊಬ್ಬ ಚುನಾವಣಾ ಅಧಿಕಾರಿ, ಪ್ರಮುಖ ವಿಐಪಿ ಮತದಾರರ ಹೆಸರು ಎಸ್ಐಆರ್ನಲ್ಲಿ ಸಮಸ್ಯಾತ್ಮಕವಾಗಿ ಕಂಡುಬಂದರೆ ಅವರಿಗೆ ಸಾಮಾನ್ಯ ರೀತಿಯಲ್ಲಿ ನೋಟಿಸ್ ನೀಡದೆ, ಬಿಎಲ್ಒ ಅವರ ಮನೆಗೆ ತೆರಳಿ ದಾಖಲೆಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಎಸ್ಐಆರ್ ನಲ್ಲಿ ಅನ್ಮ್ಯಾಪ್ಡ್ ಅಥವಾ ಲಾಜಿಕಲ್ ಡಿಸ್ಕ್ರಿಪೆನ್ಸಿ ಎಂದು ಗುರುತಿಸಲ್ಪಟ್ಟ ಸಾಮಾನ್ಯ ಮತದಾರರು ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ವಿಚಾರಣೆಗೆ ಹಾಜರಾಗಬೇಕಾಗುತ್ತದೆ. ಆದರೆ ದಿ ರಿಪೋರ್ಟರ್ಸ್ ಕಲೆಕ್ಟಿವ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ ವಿಐಪಿ ಎಂದು ಗುರುತಿಸಲ್ಪಟ್ಟವರಿಗೆ ಇದೇ ಪ್ರಕ್ರಿಯೆಯಿಂದ ಹೊರತಾದ ವ್ಯವಸ್ಥೆ ಮಾಡಲಾಗಿದೆ.
ಹೆಸರನ್ನು ಗೌಪ್ಯವಾಗಿಡುವ ಷರತ್ತಿನೊಂದಿಗೆ ರಿಪೋರ್ಟರ್ಸ್ ಕಲೆಕ್ಟಿವ್ ವರದಿಗಾರರೊಂದಿಗೆ ಮಾತನಾಡಿದ ಇಆರ್ಒ, ಪ್ರಮುಖ ಮತದಾರರ ಹೆಸರು ಸಮಸ್ಯಾತ್ಮಕವಾಗಿ ಕಂಡುಬಂದರೆ ನೋಟಿಸ್ ನೀಡುವ ಬದಲು ಬಿಎಲ್ಒ ಮೂಲಕ ದಾಖಲೆಗಳನ್ನು ಸಂಗ್ರಹಿಸಲಾಗುತ್ತದೆ. ಮತದಾರರು ಮನೆಯಲ್ಲಿ ಇರಬೇಕಾದ ಅಗತ್ಯವೂ ಇಲ್ಲ; ಅವರ ಭದ್ರತಾ ಸಿಬ್ಬಂದಿ ದಾಖಲೆಗಳನ್ನು ನೀಡಿದರೂ ಅವುಗಳನ್ನು ಸ್ವೀಕರಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ವಿಐಪಿ ಮತದಾರರು ಹಾಗೂ ಅವರ ಕುಟುಂಬದ ಸದಸ್ಯರು ಅಂತಿಮ ಮತದಾರರ ಪಟ್ಟಿಯಲ್ಲಿ ಉಳಿಯುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂಬ ಮಾಹಿತಿಯನ್ನೂ ತನಿಖೆ ಉಲ್ಲೇಖಿಸಿದೆ.
ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಹೆಸರೂ ಎಸ್ಐಆರ್ನಲ್ಲಿ 'ಅನ್ಮ್ಯಾಪ್ಡ್' ಅಥವಾ 'ಲಾಜಿಕಲ್ ಡಿಸ್ಕ್ರಪೆನ್ಸಿ' ಹೊಂದಿರುವ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು. ಆದರೆ, ರಿಪೋರ್ಟರ್ಸ್ ಕಲೆಕ್ಟಿವ್ ಪ್ರಕಾರ, ಇವರ ಪ್ರಕರಣ ಕೆಲವೇ ಗಂಟೆಗಳಲ್ಲಿ ಪರಿಹಾರ ಕಂಡಿತು. ರೇಖಾ ಗುಪ್ತ ಅವರ ಮತಗಟ್ಟೆಯ ಸಾಮಾನ್ಯ ವಿಚಾರಣೆ ಇನ್ನೂ ಆರಂಭವಾಗದ ಸಮಯದಲ್ಲೇ ಅವರ ಪ್ರಕರಣವನ್ನು ಪ್ರತ್ಯೇಕವಾಗಿ ನಿರ್ವಹಿಸಲಾಗಿತ್ತು ಎಂದು ತನಿಖೆ ಹೇಳುತ್ತದೆ.
ಶಾಲಿಮಾರ್ ಬಾಗ್ ಕ್ಷೇತ್ರದ ಅವರ ಮತಗಟ್ಟೆಯಲ್ಲಿ ಸುಮಾರು 20 ವಿಐಪಿ ಮತದಾರರನ್ನು ಗುರುತಿಸಲಾಗಿತ್ತು ಎಂದು ಅಧಿಕಾರಿಗಳು ತನಿಖಾ ತಂಡಕ್ಕೆ ತಿಳಿಸಿದ್ದಾರೆ. ಇದೇ ವೇಳೆ, ಶಾಲಿಮಾರ್ ಬಾಗ್ನಲ್ಲಿ ವಾಸಿಸುವ ದಿನಗೂಲಿ ಕಾರ್ಮಿಕ ಜಿತೇಂದ್ರ ಪಾಂಡೆ ಎಂಬ ಮತದಾರರು ತಮ್ಮ ಹೆಸರಿನ ಬಗ್ಗೆ ಬಂದ ನೋಟಿಸ್ಗೆ ಪ್ರತಿಕ್ರಿಯಿಸಲು ವಿಚಾರಣಾ ಕೇಂದ್ರದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು ಎಂದು ವರದಿ ವಿವರಿಸುತ್ತದೆ. ಪಾಂಡೆ ಅವರು 1998ರಿಂದ ದೆಹಲಿಯಲ್ಲಿ ವಾಸಿಸುತ್ತಿದ್ದರೂ, ‘ ಅನ್ಮ್ಯಾಪ್ಡ್' ಎಂದು ಗುರುತಿಸಲ್ಪಟ್ಟ ಕಾರಣ ತಮ್ಮ ಮತದಾರರ ಹಕ್ಕನ್ನು ಉಳಿಸಿಕೊಳ್ಳಲು ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗಬೇಕಾಯಿತು.
ಇದು ಸಾಮಾನ್ಯ ಮತದಾರರು ಮತ್ತು ವಿಐಪಿ ಎಂದು ಗುರುತಿಸಲ್ಪಟ್ಟವರ ನಡುವೆ ಎಸ್ಐಆರ್ ಪ್ರಕ್ರಿಯೆಯಲ್ಲಿನ ವ್ಯತ್ಯಾಸವನ್ನು ತೋರಿಸುವ ಪ್ರಮುಖ ಉದಾಹರಣೆ ಎಂದು ತನಿಖಾ ವರದಿ ವಿವರಿಸುತ್ತದೆ.
ಕಾನೂನಿನಲ್ಲಿ ‘ವಿಐಪಿ ಮತದಾರ’ ಎಂಬ ವರ್ಗವಿದೆಯೇ?
ರಿಪೋರ್ಟರ್ಸ್ ಕಲೆಕ್ಟಿವ್ ಪ್ರಕಾರ, ರೆಪ್ರೆಸೆಂಟೇಷನ್ ಆಫ್ ದಿ ಪೀಪಲ್ ಆಕ್ಟ್, 1951ರಲ್ಲಿ ಯಾವುದೇ ನಾಗರಿಕರಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ವಿಶೇಷ ಸ್ಥಾನಮಾನ ಅಥವಾ ವಿಭಿನ್ನ ಚುನಾವಣಾ ಹಕ್ಕುಗಳನ್ನ ನೀಡುವ ಸ್ಪಷ್ಟ ಅವಕಾಶವಿಲ್ಲ.ಆದರೆ ಚುನಾವಣಾ ಆಯೋಗದ ಕೆಲವು ಮಾರ್ಗಸೂಚಿಗಳಲ್ಲಿ ಚುನಾಯಿತ ಪ್ರತಿನಿಧಿಗಳು, ನ್ಯಾಯಾಧೀಶರು, ನಿರ್ದಿಷ್ಟ ಹುದ್ದೆ ಹೊಂದಿರುವವರು ಹಾಗೂ ಕಲೆ–ಸಂಸ್ಕೃತಿ ಕ್ಷೇತ್ರದ ಕೆಲವು ಪ್ರಮುಖ ವ್ಯಕ್ತಿಗಳನ್ನು ವಿಶೇಷವಾಗಿ ಗುರುತಿಸುವ ಪದ್ಧತಿ ಇರುವುದನ್ನು ತನಿಖೆ ಉಲ್ಲೇಖಿಸುತ್ತದೆ.
ಆದರೆ ಇಂತಹ ಗುರುತಿಸುವಿಕೆ ಆಧಾರದ ಮೇಲೆ ಸಾಮಾನ್ಯ ಮತದಾರರಿಗೆ ಅನ್ವಯಿಸುವ ಪರಿಶೀಲನಾ ಪ್ರಕ್ರಿಯೆಯಿಂದ ವಿಐಪಿಗಳನ್ನು ಹೊರಗಿಡಲು ಕಾನೂನು ಅವಕಾಶ ನೀಡುತ್ತದೆಯೇ ಎಂಬುದು ಪ್ರಶ್ನೆಯಾಗಿದೆ ಎಂದು ವರದಿ ಹೇಳುತ್ತದೆ. ಹಾಗಾದರೆ ಎಸ್ಐಆರ್ ಪ್ರಕ್ರಿಯೆಯಲ್ಲಿ ವಿಐಪಿ ಎಂದು ವರ್ಗೀಕರಿಸುವ ನಿರ್ಧಾರ ಯಾರದ್ದು? ಎಂಬ ಪ್ರಶ್ನೆ ಏಳಲು ರಿಪೋರ್ಟಸ್ ಕಲೆಕ್ಟಿವ್ ಪ್ರೇರೇಪಿಸುತ್ತದೆ.
ವಿಐಪಿ ಎಂದು ಗುರುತಿಸಲ್ಪಡುವವರ ಬಗ್ಗೆ ಪಾರದರ್ಶಕವಾದ ಸಾರ್ವಜನಿಕ ಪಟ್ಟಿಯಿಲ್ಲ. ಆದರೆ ಯಾರನ್ನು ವಿಐಪಿ ಎಂದು ಗುರುತಿಸಬೇಕು ಎಂಬುದನ್ನು ಸ್ಥಳೀಯ ಚುನಾವಣಾ ಅಧಿಕಾರಿಗಳು ನಿರ್ಧರಿಸುವ ವ್ಯವಸ್ಥೆಯಿದೆ ಎಂದು ವರದಿ ಹೇಳುತ್ತದೆ.
ಮಾಜಿ ಹಿರಿಯ ಚುನಾವಣಾ ಆಯೋಗದ ಅಧಿಕಾರಿಯೊಬ್ಬರ ಹೇಳಿಕೆಯನ್ನು ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಉಲ್ಲೇಖಿಸಿದ್ದು, “ಯಾರ ಹೆಸರನ್ನು ತೆಗೆದರೆ ಆಯೋಗಕ್ಕೆ ಮುಜುಗರವಾಗುತ್ತದೆಯೋ ಅವರು ವಿಐಪಿ” ಎಂದಿದ್ದಾರೆ. ರಿಪೋರ್ಟರ್ಸ್ ಕಲೆಕ್ಟಿವ್ ತನ್ನ ತನಿಖಾ ವರದಿಯ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಪ್ರತ್ಯೇಕ ಕ್ರಮಗಳನ್ನು ಅನುಸರಿಸುತ್ತಿರುವುದನ್ನ ಬಹಿರಂಗಪಡಿಸಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ.
(ಈ ವರದಿಯನ್ನು ದಿ ರಿಪೋರ್ಟರ್ಸ್ ಕಲೆಕ್ಟಿವ್ ತನಿಖಾ ವರದಿಯನ್ನು ಆಧರಿಸಿ ಸಿದ್ಧಪಡಿಸಲಾಗಿದೆ.)



