ದಲಿತ ಸಮುದಾಯವನ್ನು ಗುರಿಯಾಗಿಸಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂಬ ಆರೋಪದ ಮೇಲೆ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ದ ಮತ್ತೊಂದು ಎಫ್ ಐಆರ್ ದಾಖಲಾಗಿದೆ. ಸೆಪ್ಟೆಂಬರ್ 18ರಂದು ಟಿ.ನರಸೀಪುರದಲ್ಲಿ ನಡೆದ ಗಣೇಶ ವಿಸರ್ಜನೆಯ ಮೆರವಣಿಗೆ ವೇಳೆ ಪ್ರತಾಪ್ ಸಿಂಹ ದಲಿತರನ್ನು ನಿಂದಿಸಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಬಿ.ಆರ್. ಅಂಬೇಡ್ಕರ್ ಕ್ಷೇಮ ಕ್ರೀಡಾ ಕಲಾ ಸಂಘದ ಅಧ್ಯಕ್ಷರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ನಿನ್ನೆ ಹೊಸ ಪ್ರಕರಣ ದಾಖಲಿಸಲಾಗಿದೆ.

ಪ್ರತಾಪ್ ಸಿಂಹ ವಿರುದ್ಧ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ಸಂಬಂಧಿತ ದೂರು ದಾಖಲಾಗಿದೆ. ಜೊತೆಗೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352 ಮತ್ತು ಸೆಕ್ಷನ್ 356 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಷ್ಟಕ್ಕೂ ದೂರಿನಲ್ಲಿ ಇರುವುದು ಏನಂದ್ರೆ ಟಿ.ನರಸೀಪುರ ಪೊಲೀಸ್ ಠಾಣೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಡೆದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನೂರಾರು ಜನರು ಸೇರಿದ್ದರು. ಈ ವೇಳೆ ಪ್ರತಾಪ್ ಸಿಂಹ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ದಲಿತ ಸಮುದಾಯದ ಸದಸ್ಯರನ್ನು ಸಾರ್ವಜನಿಕವಾಗಿ ಅವಮಾನಿಸುವ ಹಾಗೂ ಅವರನ್ನು ಕೀಳು ಮಟ್ಟದಲ್ಲಿ ಬಿಂಬಿಸುವ ಉದ್ದೇಶದಿಂದ ಅತ್ಯಂತ ಅವಹೇಳನಕಾರಿ ಮತ್ತು ನಿಂದನಾತ್ಮಕ ಭಾಷಣ ಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.

ದಲಿತ ಸಮುದಾಯಕ್ಕೆ ಸೇರಿದ ಕಾರ್ಯಕರ್ತರನ್ನು ಪ್ರತಾಪ್ ಸಿಂಹ ನೇರವಾಗಿ ಗುರಿಯಾಗಿಸಿಕೊಂಡು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು FIRನಲ್ಲಿ ಆರೋಪಿಸಲಾಗಿದೆ. ಅಲ್ಲದೇ ಮೆರವಣಿಗೆ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಇನ್ಸ್ಪೆಕ್ಟರ್ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಹೇಳಿಕೆ ನೀಡಿದ್ದು, ಅವರ ಜಾತಿಯನ್ನೂ ಪ್ರಸ್ತಾಪಿಸಿದ್ದಾರೆ ಎಂದು FIRನಲ್ಲಿ ಉಲ್ಲೇಖಿಸಲಾಗಿದೆ. 

ಈ ಎಲ್ಲಾ ಬೆಳವಣಿಗೆಗಳ ನಂತರ ಖಾಸಗಿ ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಪ್ರತಾಪ್ ಸಿಂಹ ಮಾತಾಡಿದ್ದಾರೆ. ರಾಜಕಾರಣದಲ್ಲಿ ಎಲ್ಲ ರೀತಿಯ ಆರೋಪಗಳು ಬರುತ್ತವೆ. ದಲಿತ ವಿರೋಧಿ ಎಂಬ ಆರೋಪಗಳಿಗೆ ನಾನು ದೀರ್ಘವಾಗಿ ಹೇಳೋಕೆ ಹೋಗಲ್ಲ ಎಂದಿದ್ದಾರೆ. ನನ್ನ ನಿಲುವು ಮತ್ತು ನಂಬಿಕೆಯನ್ನು ಸ್ಪಷ್ಟವಾಗಿ ಹೇಳಿದ್ದೇನೆ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು 140 ಕೋಟಿ ಭಾರತೀಯರಿಗೂ ಸಲ್ಲಬೇಕಾದವರು. ನಾನು ಈ ಹಿಂದೆ ಕೋಲಾರ ಕಾರ್ಯಕ್ರಮದಲ್ಲಿದ್ದಾಗಲೂ ಈ ಬಗ್ಗೆ ಹೇಳಿದ್ದೆ. ಮನೆಯಲ್ಲಿ ನೀವು ಭಗವದ್ಗೀತೆ, ಕುರಾನ್ ಅಥವಾ ಬೈಬಲ್ ಏನಾದರೂ ಇಟ್ಟುಕೊಳ್ಳಿ. ಆದರೆ ಮನೆಯಿಂದ ಹೊರಗೆ ಬಂದ ಮೇಲೆ ನಿಮ್ಮ ಹಕ್ಕುಗಳು, ಅಧಿಕಾರವನ್ನು ರಕ್ಷಣೆ ಮಾಡುವುದು ಮತ್ತು ಅದನ್ನು ನೀಡುವುದು ಭಾರತದ ಸಂವಿಧಾನ. ಅದನ್ನ ಬರೆದವರು ಬಾಬಾ ಸಾಹೇಬ್ ಅಂಬೇಡ್ಕರ್.. ಎಂದು ಹೇಳಿದ್ದೇನೆ. ಅಲ್ಲದೆ ಈ ಮೂಲಕ ಅಪಪ್ರಚಾರ ಮಾಡಬೇಡಿ ಎಂದು ಹೇಳುತ್ತಿದ್ದೇನೆ ಎಂದು ಹೇಳಿದ್ದಾರೆ.