ಬ್ಯಾಂಕ್ ಗ್ರಾಹಕರಿಗೆ ದೊಡ್ಡ ನಿರಾಳತೆಯ ಸುದ್ದಿ ಸಿಕ್ಕಿದೆ. ಸೆಪ್ಟೆಂಬರ್ 28ರಿಂದ 30ರವರೆಗೆ ನಡೆಸಬೇಕಿದ್ದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಕೊನೆಯ ಕ್ಷಣದಲ್ಲಿ ಮುಂದೂಡಲಾಗಿದೆ. ಇದರಿಂದಾಗಿ ಸೋಮವಾರದಿಂದಲೇ ದೇಶಾದ್ಯಂತ ಎಲ್ಲ ಬ್ಯಾಂಕ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ಚೆಕ್ ಕ್ಲಿಯರೆನ್ಸ್ ಹಾಗೂ ನಗದು ವಹಿವಾಟು ಸೇವೆಗಳು ಲಭ್ಯವಿವೆ.
ಏನಿದು ಗೊಂದಲ? ಮುಷ್ಕರಕ್ಕೆ ಕಾರಣವೇನು ಅಂದ್ರೆ ಸದ್ಯ ಬ್ಯಾಂಕ್ಗಳಿಗೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ರಜೆ ಇರುತ್ತದೆ. ಆದರೆ, 'ವಾರದ ಎಲ್ಲಾ ಶನಿವಾರಗಳನ್ನೂ ರಜಾದಿನ' ಎಂದು ಘೋಷಿಸಬೇಕೆಂದು ಬ್ಯಾಂಕ್ ಸಿಬ್ಬಂದಿ ಒಕ್ಕೂಟಗಳು ಹಲವು ದಿನಗಳಿಂದ ಪಟ್ಟು ಹಿಡಿದಿದ್ದವು. ಸರ್ಕಾರದ ಮಟ್ಟದಲ್ಲಿ ಈ ಬೇಡಿಕೆ ಈಡೇರದಿದ್ದಾಗ, ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ ಮೂರು ದಿನಗಳ ಕೆಲಸ ಸ್ಥಗಿತಗೊಳಿಸಿ ಪ್ರತಿಭಟಿಸಲು ಕರೆ ನೀಡಿತ್ತು.
ಆದ್ರೆ ಭಾನುವಾರ ತಡರಾತ್ರಿ 9:30ರ ಸುಮಾರಿಗೆ ಭಾರತೀಯ ಬ್ಯಾಂಕುಗಳ ಸಂಘ ಮತ್ತು ಬ್ಯಾಂಕ್ ಒಕ್ಕೂಟಗಳ ನಾಯಕರ ನಡುವೆ ತುರ್ತು ಸಭೆ ನಡೆಯಿತು. ಈ ವೇಳೆ, 'ಎಲ್ಲಾ ಶನಿವಾರ ರಜೆ' ನೀಡುವ ಬೇಡಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಲು ಉನ್ನತ ಮಟ್ಟದ ಜಂಟಿ ಸಮಿತಿ ರಚಿಸಲು ಸಮ್ಮತಿ ಸಿಕ್ಕಿತು. ಗ್ರಾಹಕರಿಗೆ ತೊಂದರೆಯಾಗದಂತೆ ಪರ್ಯಾಯ ಮಾರ್ಗಗಳನ್ನು ಹುಡುಕಲು ಈ ಸಮಿತಿ ತಕ್ಷಣವೇ ಕೆಲಸ ಆರಂಭಿಸಲಿದೆ.
ಇದರ ಜೊತೆಗೆ, ಹಿರಿಯ ಅಧಿಕಾರಿಗಳ ಪಿಎಲ್ಐ ಯೋಜನೆಗೆ ಸಂಬಂಧಿಸಿದ ಗೊಂದಲಗಳನ್ನು ಬಗೆಹರಿಸಲು ಸರ್ಕಾರದೊಂದಿಗೆ ಚರ್ಚಿಸಲು ಹಾಗೂ ಹಳೆಯ ಬೇಡಿಕೆಗಳನ್ನು ಶೀಘ್ರ ಇತ್ಯರ್ಥಪಡಿಸಲು ಐಬಿಎ ಒಪ್ಪಿಕೊಂಡಿತು.
ಸಂಧಾನ ಮಾತುಕತೆ ಯಶಸ್ವಿಯಾಗುತ್ತಿದ್ದಂತೆಯೇ ಮುಷ್ಕರ ಹಿಂಪಡೆಯಲು ನಿರ್ಧರಿಸಲಾಯಿತು. ಹೀಗಾಗಿ ಹಬ್ಬದ ಸೀಸನ್ ಅಥವಾ ತಿಂಗಳ ಕೊನೆಯಲ್ಲಿ ಬ್ಯಾಂಕಿಂಗ್ ಕೆಲಸಗಳಿಗಾಗಿ ಅಲೆದಾಡಬೇಕಿದ್ದ ಸಾರ್ವಜನಿಕರು ಈಗ ನಿಟ್ಟುಸಿರು ಬಿಡುವಂತಾಗಿದೆ.




